ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆಯೇ ಶೂಟೌಟ್..!

KannadaprabhaNewsNetwork |  
Published : Jul 03, 2026, 01:30 AM ISTUpdated : Jul 03, 2026, 04:27 AM IST
VJ Shobharani

ಸಾರಾಂಶ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್-ವೇನಲ್ಲಿ ಗುರುವಾರ ಬೆಳ್ಳಂಬೆಳಗ್ಗೆಯೇ ಕಾರಿನಲ್ಲಿ ಬಂದ ಅಪರಿಚಿತರು ಕ್ಯಾಂಟರ್ ಚಾಲಕನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ. ಮೈಸೂರಿನ ಕ್ಯಾಂಟರ್ ಚಾಲಕ ಶಂಕರ್ ಎಂಬಾತನ ಮೇಲೆ ಗುಂಡಿನ ದಾಳಿ

  ಮಂಡ್ಯ :  ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್-ವೇನಲ್ಲಿ ಗುರುವಾರ ಬೆಳ್ಳಂಬೆಳಗ್ಗೆಯೇ ಕಾರಿನಲ್ಲಿ ಬಂದ ಅಪರಿಚಿತರು ಕ್ಯಾಂಟರ್ ಚಾಲಕನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ.

ಮೈಸೂರಿನ ಕ್ಯಾಂಟರ್ ಚಾಲಕ ಶಂಕರ್ ಎಂಬಾತನ ಮೇಲೆ ಗುಂಡಿನ ದಾಳಿ ನಡೆದಿದ್ದು, ಚಾಲಕ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದರ ನಡುವೆಯೂ ಆತ ಕ್ಯಾಂಟರ್‌ನ್ನು ನಿಲ್ಲಿಸದೆ ವೇಗವಾಗಿ ಓಡಿಸಿಕೊಂಡು ಬಂದು ಬಚಾವಾಗಿದ್ದಾನೆ. ಈ ವಿಷಯ ತಡವಾಗಿ ಪೊಲೀಸರಿಗೆ ಗೊತ್ತಾಗಿದ್ದು, ಚಾಲಕ ಶಂಕರ್‌ನನ್ನು ಮೈಸೂರಿನಿಂದ ಕರೆತಂದು ಘಟನೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ನಡೆದಿದ್ದೇನು?

ಮೈಸೂರು ಫಾರ್ಮಾಸ್ಯುಟಿಕಲ್ ಕಂಪನಿಗೆ ಸೇರಿದ ಕ್ಯಾಂಟರ್ ಚಾಲಕನಾಗಿರುವ ಶಂಕರ್ ಗುರುವಾರ ಬೆಂಗಳೂರಿನಿಂದ ಮೈಸೂರಿಗೆ ಔಷಧಗಳನ್ನು ಸರಬರಾಜು ಮಾಡಲು ಮುಂಜಾನೆ ೩.೧೫ರ ಸುಮಾರಿಗೆ ಬೆಂಗಳೂರಿನಿಂದ ಹೊರಟಿದ್ದಾನೆ. ಕ್ಯಾಂಟರ್ ಚಾಲಕ ೪.೪೫ರ ಸಮಯಕ್ಕೆ ನಗರದ ಹೊರವಲಯದ ಎಕ್ಸ್‌ಪ್ರೆಸ್-ವೇನಲ್ಲಿ ಬರುವಾಗ ಇದ್ದಕ್ಕಿದ್ದಂತೆ ಫಾರ್ಚೂನರ್ ಕಾರಿನಲ್ಲಿ ಬಂದ ಅಪರಿಚಿತರು ಕ್ಯಾಂಟರ್‌ನ್ನು ಅಡ್ಡ ಹಾಕಲು ಯತ್ನಿಸಿದರೆಂದು ಹೇಳಲಾಗಿದೆ.

ಇದರಿಂದ ಭಯಗೊಂಡ ಕ್ಯಾಂಟರ್ ಚಾಲಕ ಕಾರಿನಲ್ಲಿರುವವರು ಡಕಾಯಿತರೆಂದು ಭಾವಿಸಿ ವಾಹನವನ್ನು ನಿಲ್ಲಿಸದೆ ವೇಗವಾಗಿ ಓಡಿಸಿಕೊಂಡು ಮುನ್ನಡೆದಿದ್ದಾನೆ. ಆಗ ಕಾರಿನಲ್ಲಿದ್ದ ಅಪರಿಚಿತರು ಕ್ಯಾಂಟರ್‌ನ ಮುಂಬದಿಗೆ ಬಂದು ಚಾಲಕನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡುಗಳು ಕ್ಯಾಂಟರ್‌ನ ಗಾಜುಗಳನ್ನು ಒಡೆದುಕೊಂಡು ಒಳಬಂದಿದ್ದು ಚಾಲಕ ಶಂಕರ್ ಕೂದಲೆಳೆ ಅಂತರದಲ್ಲಿ ಗುಂಡುಗಳಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ಇದರ ನಡುವೆಯೂ ಶಂಕರ್ ಕ್ಯಾಂಟರ್‌ನ್ನು ಮತ್ತಷ್ಟು ವೇಗಗತಿಯನ್ನು ಹೆಚ್ಚಿಸಿಕೊಂಡು ಮುನ್ನುಗ್ಗಿದನು. ಎದುರುಗಡೆಯಿಂದ ಮೂರ್ನಾಲ್ಕು ವಾಹನಗಳು ಎದುರಾಗಿದ್ದರಿಂದ ಭಯಗೊಂಡ ಅಪರಿಚಿತರು ಅಲ್ಲಿಂದ ವೇಗವಾಗಿ ಕಾರನ್ನು ಓಡಿಸಿಕೊಂಡು ಮೈಸೂರು ಕಡೆಗೆ ಪರಾರಿಯಾಗಿದ್ದಾರೆ ಎಂದು ಗೊತ್ತಾಗಿದೆ.

ನಂತರ ಚಾಲಕ ಶಂಕರ್ ಮಂಡ್ಯ ನಗರಕ್ಕೆ ಆಗಮಿಸಿ ಫಾರ್ಮಾದವರಿಗೆ ಔಷಧಗಳನ್ನು ಪೂರೈಸಿದ ಬಳಿಕ ಮೈಸೂರಿಗೆ ತೆರಳಿ ತನ್ನ ಕಂಪನಿಯ ಮಾಲೀಕರಿಗೆ ವಿಷಯ ತಿಳಿಸಿದ್ದಾನೆ. ಅವರು ಚಾಲಕನಿಗೆ ಧೈರ್ಯ ಹೇಳಿ ಪೊಲೀಸರಿಗೆ ದೂರು ನೀಡುವಂತೆ ಸಲಹೆ ನೀಡಿದರು. ಆದರೂ ಭಯಗೊಂಡಿದ್ದ ಶಂಕರ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಮೈಸೂರಿನಲ್ಲೇ ಉಳಿದುಕೊಂಡಿದ್ದನು.

ಮಂಡ್ಯ ಪೊಲೀಸರಿಂದ ಸೀಸಿ ಟೀವಿ ಪರಿಶೀಲನೆ:

ಈ ಶೂಟೌಟ್ ವಿಚಾರ ಮಧ್ಯಾಹ್ನದ ಸಮಯಕ್ಕೆ ಮಂಡ್ಯ ಪೊಲೀಸರಿಗೆ ಗೊತ್ತಾಗಿದ್ದು, ಅವರು ಹೆದ್ದಾರಿಯ ಸೀಸಿ ಟೀವಿ ದೃಶ್ಯಾವಳಿಗಳನ್ನೆಲ್ಲಾ ಜಾಲಾಡಿದ್ದಾರೆ. ಆದರೂ ಗುಂಡಿನ ದಾಳಿ ನಡೆಸಿದವರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಕೊನೆಗೆ ಗುಂಡಿನ ದಾಳಿಯಿಂದ ಭಯಗೊಂಡಿದ್ದ ಶಂಕರ್‌ನನ್ನು ಪತ್ತೆಹಚ್ಚಿ ಮಾಹಿತಿ ಪಡೆದುಕೊಳ್ಳಲು ಮಂಡ್ಯಕ್ಕೆ ಕರೆತಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಘಟನೆ ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ಸಿಕ್ಕಿಲ್ಲ. ಮೈಸೂರು ಮೂಲದ ಕ್ಯಾಂಟರ್ ಚಾಲಕ ಶಂಕರ್ ಎಂಬಾತನನ್ನು ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಆತನಿಂದ ಸತ್ಯಸಂಗತಿಯನ್ನು ತಿಳಿದುಕೊಂಡು ಮುಂದಿನ ಕ್ರಮ ವಹಿಸಲಾಗುವುದು.

- ಡಾ.ವಿ.ಜೆ.ಶೋಭಾರಾಣಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಮಂಡ್ಯ

ಮುಖ್ಯಾಂಶಗಳು

- ಕಾರಿನಲ್ಲಿ ಬಂದ ಅಪರಿಚಿತರಿಂದ ಕ್ಯಾಂಟರ್ ಚಾಲಕನ ಮೇಲೆ ಗುಂಡಿನ ದಾಳಿ

- ಕೂದಲೆಳೆ ಅಂತರದಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರು

- ಕ್ಯಾಂಟರ್ ನಿಲ್ಲಿಸದೆ ವೇಗವಾಗಿ ಮುನ್ನುಗ್ಗಿಸಿ ಬಚಾವ್

- ಬೆಳ್ಳಂಬೆಳಗ್ಗೆ ೪.೪೫ರ ಸಮಯದಲ್ಲಿ ಮಂಡ್ಯ ಹೊರವಲಯದಲ್ಲಿ ಘಟನೆ

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಮಗುವಿನ ರಕ್ಷಣೆ ಜವಾಬ್ದಾರಿ ಶಾಲಾ ಆಡಳಿತ ಮಂಡಳಿಯದು: ಹೈಕೋರ್ಟ್
ಕಂಟೈನರ್ ಲಾರಿ ಡಿಕ್ಕಿ: ಬೈಕ್ ಸವಾರ ಸಾವು