ಕನ್ನಡಪ್ರಭ ವಾರ್ತೆ ಬೆಂಗಳೂರು
ಮೊಬೈಲ್ ಬಿಡಿಭಾಗಗಳ ಮಾರಾಟದ ಅಂಗಡಿಯಲ್ಲಿ ಭಜನೆ ಹಾಕಿ ಸ್ಪೀಕರ್ ಸೌಂಡ್ ಜೋರು ಮಾಡಿದ ವಿಚಾರಕ್ಕೆ ಅಂಗಡಿ ಮಾಲೀಕನ ಜತೆಗೆ ಕಿರಿಕ್ ತೆಗೆದು ಹಲ್ಲೆ ಮಾಡಿದ್ದ ಪ್ರಕರಣ ಸಂಬಂಧ ಮೂವರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಗೊಳಗಾದ ಅಂಗಡಿ ಮಾಲೀಕ ಕಬ್ಬನ್‌ಪೇಟೆ ನಿವಾಸಿ ಮುಖೇಶ್(26) ನೀಡಿದ ದೂರಿನ ಮೇರೆಗೆ ಜೀವಬೆದರಿಕೆ, ಸಾರ್ವಜನಿಕ ಶಾಂತಿಗೆ ಭಂಗವುಂಟು ಮಾಡಲು ಪ್ರಚೋದನೆ, ಕೊಲೆಗೆ ಯತ್ನ ಆರೋಪದಡಿ ಐವರು ಹಾಗೂ ಇತರೆ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಸಂಬಂಧ ಸುಲೇಮಾನ್, ಶಹನವಾಜ್ ಹಾಗೂ ರೋಹಿತ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಎಂ.ದ್ಯಾನೀಶ್, ತರುಣ್ ಹಾಗೂ ಇತರರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನಲ್ಲಿ ಏನಿದೆ?
ದೂರುದಾರ ಮುಖೇಶ್ ನಗರ್ತಪೇಟೆ ಸಿದ್ಧಣ್ಣ ಗಲ್ಲಿಯ ಜುಮ್ಮಾ ಮಸೀದಿ ರಸ್ತೆಯಲ್ಲಿ ‘ಕೃಷ್ಣ ಟೆಲಿಕಾಂ’ ಹೆಸರಿನ ಮೊಬೈಲ್ ಬಿಡಿ ಭಾಗಗಳ ಮಾರಾಟದ ಅಂಗಡಿ ಇರಿಸಿಕೊಂಡಿದ್ದಾರೆ.
ಭಾನುವಾರ ಸಂಜೆ 6.25ರ ಸುಮಾರಿಗೆ ಮುಖೇಶ್ ಅಂಗಡಿಯಲ್ಲಿ ಇರುವಾಗ ಸುಮಾರು ಆರು ಮಂದಿ ಆರೋಪಿಗಳು ಅಂಗಡಿ ಬಳಿಗೆ ಬಂದಿದ್ದಾರೆ. ‘ಏಕೆ ಸ್ಪೀಕರ್ ಅನ್ನು ಜೋರಾಗಿ ಹಾಕಿರುವೆ? ಇದರಿಂದ ನಮಗೆ ತೊಂದರೆ ಆಗುತ್ತಿದೆ’ ಎಂದು ಮುಖೇಶ್‌ನನ್ನು ಪ್ರಶ್ನಿಸಿದ್ದಾರೆ.
‘ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಏರ್ಪಟ್ಟಿದೆ. ಆಗ ಆರೋಪಿ ಶಹನವಾಜ್ ಹಾಗೂ ಸುಲೇಮಾನ್ ಕೈನಿಂದ ಮುಖೇಶ್ ಮುಖಕ್ಕೆ ಹಲ್ಲೆ ಮಾಡಿದ್ದಾರೆ.
ಬಳಿಕ ಉಳಿದ ಆರೋಪಿಗಳು ಮುಖೇಶ್ ಮೇಲೆ ಹಲ್ಲೆ ನಡೆಸಿ, ಅಂಗಡಿಯಿಂದ ಹೊರಗೆ ಎಳೆದುಕೊಂಡು ರಸ್ತೆಯಲ್ಲಿ ಕೆಡವಿ ಹಿಗ್ಗಾಮುಗ್ಗಾ ಥಳಿಸಿ, ಮಾರಣಾಂತಿಕ ಹಲ್ಲೆ ಮಾಡಿದ್ದಾರೆ’ ಎಂದು ಮುಖೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಸಿಸಿಟಿವಿಯಲ್ಲಿ ಹಲ್ಲೆ ದೃಶ್ಯ ಸೆರೆ: ಆರೋಪಿಗಳು ಅಂಗಡಿ ಬಂದು ಮುಖೇಶ್ ಜತೆಗೆ ಜಗಳ ತೆಗೆದು ರಸ್ತೆಗೆ ಎಳೆದುಕೊಂಡು ಹಲ್ಲೆ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಮುಖೇಶ್ ದೂರು ನೀಡಿದ ಬೆನ್ನಲ್ಲೇ ಹಲಸೂರು ಗೇಟ್ ಠಾಣೆ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಿದ್ದರು.
ಇದರ ಆಧಾರದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಿ ಹೇಳಿಕೆ ದಾಖಲು ಮಾಡುತ್ತಿದ್ದಾರೆ. ಉಳಿದ ಮೂವರ ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ತಡರಾತ್ರಿ ಠಾಣೆ ಎದುರು ವರ್ತಕರಿಂದ ಪ್ರತಿಭಟನೆ:
ಮೊಬೈಲ್ ಅಂಗಡಿ ಮಾಲೀಕ ಮುಖೇಶ್ ಮೇಲಿನ ಹಲ್ಲೆ ಘಟನೆ ಗೊತ್ತಾಗುತ್ತಿದ್ದಂತೆ ನಗರ್ತಪೇಟೆ, ಕಬ್ಬನ್ ಪೇಟೆ ಸೇರಿದಂತೆ ಆ ಪ್ರದೇಶದ ನೂರಾರು ಸಂಖ್ಯೆಯ ವರ್ತಕರು ಭಾನುವಾರ ತಡರಾತ್ರಿ ಹಲಸೂರು ಗೇಟ್ ಪೊಲೀಸ್ ಠಾಣೆ ಎದುರು ಜಮಾಯಿಸಿ ಪ್ರತಿಭಟಿಸಿದರು.
ಅಂಗಡಿಗೆ ನುಗ್ಗಿ ಹೊರಗೆ ಎಳೆದುಕೊಂಡು ಮುಖೇಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಪುಂಡರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.
ಸೋಮವಾರ ಬೆಳಗ್ಗೆಯೂ ಕೆಲ ವರ್ತಕರು ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದರು. ಕೂಡಲೇ ಬಂಧಿಸದಿದ್ದಲ್ಲಿ ನಗರ್ತಪೇಟೆ ಸೇರಿದಂತೆ ಎಲ್ಲಾ ಪೇಟೆಗಳನ್ನು ಬಂದ್ ಮಾಡಿ ಉಗ್ರ ಹೋರಾಟ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.
ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಪೊಲೀಸರು, ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ಹೆಚ್ಚಿನ ಪೊಲೀಸರನ್ನು ಕರೆಸಿಕೊಂಡು ಪೊಲೀಸ್ ಠಾಣೆ ಹಾಗೂ ನಗರ್ತಪೇಟೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.15 ದಿನಗಳಿಂದ ಪುಂಡರ ಕಿರಕುಳ:
ಕಳೆದ 15 ದಿನಗಳಿಂದಲೂ ನಗರ್ತಪೇಟೆ ಸೇರಿದಂತೆ ಸುತ್ತಮುತ್ತಲ ಏರಿಯಾಗಳಲ್ಲಿ ಕೆಲ ಪುಂಡರು ವರ್ತಕರಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಭಾಗದಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ.
ಪೊಲೀಸರು ಈ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಂಡು ಮಟ್ಟಹಾಕಬೇಕು ಎಂದು ಕೆಲ ವರ್ತಕರು ಆಗ್ರಹಿಸಿದರು.ಬಿಜೆಪಿ ನಾಯಕರಿಂದ ಸಂತ್ರಸ್ತಗೆ ಸಾಂತ್ವನ:
ಹಲ್ಲೆಗೆ ಒಳಗಾಗಿರುವ ಮೊಬೈಲ್ ಅಂಗಡಿ ಮಾಲೀಕ ಮುಖೇಶ್‌ನನ್ನು ಬಿಜೆಪಿ ನಾಯಕರು ಸೋಮವಾರ ಭೇಟಿಯಾಗಿ ಸಾಂತ್ವನ ಹೇಳಿದರು. ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ಶಾಸಕರ ಉದಯ ಗರುಡಾಚಾರ್, ಸಿ.ಕೆ.ರಾಮಮೂರ್ತಿ, ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಸಂಸದ ತೇಜಸ್ವಿಸೂರ್ಯ, ಸಿಸಿಟಿವಿಯಲ್ಲಿ ಸೆರೆಯಾಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಮುಖೇಶ್ ಹಿಂದಿ ಭಾಷೀಕನಾಗಿದ್ದು, ಕನ್ನಡ ಅಷ್ಟಾಗಿ ಬರುವುದಿಲ್ಲ. ಪೊಲೀಸರು ಹನುಮಾನ್ ಚಾಲಿಸಾ ಬಗ್ಗೆ ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಿಲ್ಲ. ಸರ್ಕಾರದಿಂದ ಯಾವುದೇ ಒತ್ತಡ ಬಂದರೂ ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರಿಗೆ ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಕ್ತಿ ಬಂದಿದೆ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ದೃಢಪಟ್ಟಿದೆ. ನಾಚಿಕೆಯಾಗಬೇಕು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.
ನಗರ್ತಪೇಟೆ ಬಂದ್ ಎಚ್ಚರಿಕೆ: ಪಾಕಿಸ್ತಾನ ಪರ ಘೋಷಣೆ ಕೂಗಿದ ಕೆಲ ದಿನಗಳಲ್ಲೇ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟವಾಯಿತು. ಆಗ ಸಿಲಿಂಡರ್ ಸ್ಫೋಟ ಎಂದು ದಾರಿ ತಪ್ಪಿಸಲು ಹೋಗಿದ್ದರು ಎಂದು ತರಾಟೆಗೆ ತೆಗೆದುಕೊಂಡ ತೇಜಸ್ವಿ ಸೂರ್ಯ, ನಾಳೆಯೊಳಗೆ ಎಲ್ಲಾ ಆರೋಪಿಗಳ ಬಂಧನವಾಗಬೇಕು. ಇಲ್ಲವಾದರೆ, ಇಡೀ ನಗರ್ತಪೇಟೆ ಬಂದ್ ಮಾಡುತ್ತೇವೆ ಎಂದು ತೇಜಸ್ವಿಸೂರ್ಯ ಎಚ್ಚರಿಕೆ ನೀಡಿದರು.
ಘಟನಾ ಸ್ಥಳದಲ್ಲಿ ಚಾಲೀಸಾ ಪಠಣ: ಮೊಬೈಲ್ ಅಂಗಡಿ ಮಾಲೀಕ ಮುಖೇಶ್ ಮೇಲಿನ ಹಲ್ಲೆ ಘಟನೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಘಟನಾ ಸ್ಥಳದಲ್ಲಿ ಹುನುಮಾನ್ ಚಾಲೀಸಾ ಪಠಿಸಿದರು. ಈ ವೇಳೆ ವರ್ತಕರು ಸಹ ಬಿಜೆಪಿ ಕಾರ್ಯಕತರೊಂದಿಗೆ ಸೇರಿಕೊಂಡು ಸಾಥ್ ನೀಡಿದರು.‘ಆಜಾನ್ ಟೈಂಗೆ ಭಜನೆ ಹಾಕಬೇಡ ಎಂದು ಹಲ್ಲೆ’
ಭಾನುವಾರ ಸಂಜೆ ಅಂಗಡಿಯಲ್ಲಿ ಇದ್ದೆ. ಈ ವೇಳೆ ಆರು ಮಂದಿ ನಮ್ಮ ಅಂಗಡಿಗೆ ಬಂದು ನಮ್ಮ ಆಜಾನ್ ಸಮಯಕ್ಕೆ ಭಜನೆ ಹಾಡು ಏಕೆ ಹಾಕುತ್ತೀಯಾ? ಈ ಸಮಯಕ್ಕೆ ಭಜನೆ ಹಾಡು ಹಾಕಿದರೆ ಹೊಡೆದು ಬಿಡುತ್ತೇನೆ ಎಂದು ಆವಾಜ್ ಹಾಕಿದರು.
ನಾನೇಕೆ ಭಜನೆ ಹಾಡು ನಿಲ್ಲಿಸಬೇಕು ಎಂದು ಪ್ರಶ್ನಿಸಿದೆ. ಅಷ್ಟಕ್ಕೆ ನನ್ನ ಅಂಗಡಿಯ ಕೊರಳ ಪಟ್ಟಿ ಹಿಡಿದು ಹಲ್ಲೆಗೈದು ಹೊರಗೆ ಎಳೆದುಕೊಂಡು ಹಲ್ಲೆ ಮಾಡಿದರು.
ಆಯುಧದ ರೀತಿಯ ವಸ್ತುನಿಂದ ಮುಖಕ್ಕೆ ಹೊಡೆದರು. ಸ್ಪೀಕರ್ ಬಾಕ್ಸ್ ಎತ್ತಿಕೊಂಡು ತಲೆಗೆ ಹೊಡೆದರು. ಯಾರೊಬ್ಬರೂ ನನ್ನ ಸಹಾಯಕ್ಕೆ ಬರಲಿಲ್ಲ ಎಂದು ಗಾಯಾಳು ಮುಖೇಶ್ ಸುದ್ದಿಗಾರರೊಂದಿಗೆ ಘಟನೆ ಕುರಿತು ಮಾಹಿತಿ ನೀಡಿದ್ದಾರೆ.
ಆರೋಪಿಗೆ ಅಪರಾಧ ಹಿನ್ನೆಲೆ: ಬಂಧಿತ ಮೂವರು ಆರೋಪಿಗಳ ಪೈಕಿ ಸುಲೇಮಾನ್ ವಿರುದ್ಧ 2018ರಲ್ಲಿ ಅಪಹರಣ ಮತ್ತು 2023ರಲ್ಲಿ ಹಲ್ಲೆ ಆರೋದಡಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.
ಈ ಎರಡೂ ಪ್ರಕರಣಗಳಲ್ಲಿ ಬಂಧಿಸಿ ಜೈಲಿಗಟ್ಟಲಾಗಿತ್ತು. ಜಾಮೀನು ಪಡೆದು ಹೊರಬಂದಿದ್ದ ಆರೋಪಿಯು ಮತ್ತೆ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗಿರಲಿಲ್ಲ. ಇನ್ನು ಉಳಿದಿಬ್ಬರು ಆರೋಪಿಗಳಿಗೆ ಯಾವುದೇ ಅಪರಾಧ ಹಿನ್ನೆಲೆಯಲ್ಲಿ ಇಲ್ಲದಿರುವುದು ಕಂಡು ಬಂದಿದೆ.
ಭಾನುವಾರ ಸಂಜೆ ಅಗಡಿಯಲ್ಲಿ ಹಾಡು ಹಾಕಿದ್ದ ವಿಚಾರಕ್ಕೆ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಲಾಗಿದೆ. ಆರು ಮಂದಿ ವಿರುದ್ಧ ದೂರು ನೀಡಿದ್ದು, ಇದರಲ್ಲಿ ಮೂವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.-ಶೇಖರ್, ಕೇಂದ್ರ ವಿಭಾಗದ ಡಿಸಿಪಿ.