)
ಬೆಂಗಳೂರು : ಅತ್ಯಾಚಾರ ಪ್ರಕರಣದ ಆರೋಪಿ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನರವರ ಮನೆ ಹಾಗೂ ಕಚೇರಿಗಳು ಸೇರಿದಂತೆ 11 ಕಡೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಶನಿವಾರ ದಿಢೀರ್ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದೆ.
ವೈಯಾಲಿಕಾವಲ್‌ನಲ್ಲಿರುವ ಮುನಿರತ್ನರವರ ಮನೆ, ಗೃಹ ಕಚೇರಿ, ಯಶವಂತಪುರ ಸಮೀಪದ ಜೆ.ಪಿ ಪಾರ್ಕ್ ಹತ್ತಿರದ ಗೋಡೌನ್, ನಂದಿನಿ ಲೇಔಟ್‌ನ ಕಚೇರಿ ಹಾಗೂ ಶಾಸಕರ ಆಪ್ತರ ಮೂರು ಮನೆಗಳಲ್ಲಿ ಐದಾರು ತಾಸುಗಳು ಎಸ್‌ಐಟಿ ಶೋಧ ನಡೆಸಿದೆ. ಈ ವೇಳೆ ಶಾಸಕರ ಮನೆಯಲ್ಲಿ ಹಾರ್ಡ್‌ಡಿಸ್ಕ್, ಪೆನ್‌ಡ್ರೈವ್, ಎರಡು ಲ್ಯಾಪ್ ಟಾಪ್ ಹಾಗೂ ಸಿಸಿಟಿವಿ ಡಿವಿಆರ್‌ಗಳು ಮತ್ತು ಶಾಸಕರ ಆಪ್ತರ ಮನೆಗಳಲ್ಲಿ ಪೆನ್‌ಡ್ರೈವ್ ಸೇರಿ ಕೆಲ ದಾಖಲೆಗಳು ಜಪ್ತಿಯಾಗಿವೆ ಎನ್ನಲಾಗಿದೆ.
ಸ್ಥಳೀಯ ಬಿಜೆಪಿ ನಾಯಕಿ ಮೇಲೆ ಅತ್ಯಾಚಾರ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಮುನಿರತ್ನರವರನ್ನು ಎಸ್‌ಐಟಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದೆ. ಅಲ್ಲದೆ ಶಾಸಕರ ವಿರುದ್ಧ ಏಡ್ಸ್ ಸಂತ್ರಸ್ತೆಯರನ್ನು ಬಳಸಿಕೊಂಡು ರಾಜಕೀಯ ವಿರೋಧಿಗಳು ಹಾಗೂ ಕೆಲ ಅಧಿಕಾರಿಗಳನ್ನು ಹನಿಟ್ರ್ಯಾಪ್ ಮಾಡಿಸಿದ್ದಾರೆ ಎಂಬ ಆರೋಪ ಬಂದಿದೆ.
ಈ ಪ್ರಕರಣಗಳ ಕುರಿತು ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು, ಮುನಿರತ್ನರವರ ಕೋಟೆಗೆ ಶನಿವಾರ ಬೆಳ್ಳಂಬೆಳಗ್ಗೆ ಲಗ್ಗೆ ಹಾಕಿದ್ದಾರೆ. ಈ ಮೂಲಕ ಶಾಸಕರ ಬೆಂಬಲಿಗರ ಪಡೆಗೆ ಎಸ್‌ಐಟಿ ಶಾಕ್ ನೀಡಿದೆ ಎಂದು ಗೊತ್ತಾಗಿದೆ.
ಪೆನ್‌ಡ್ರೈವ್ ಮಾಹಿತಿ ಬಗ್ಗೆ ಕುತೂಹಲ:
ಹನಿಟ್ರ್ಯಾಪ್ ಹಾಗೂ ಅತ್ಯಾಚಾರ ಆರೋಪ ಕೇಳಿ ಬಂದ ಬೆನ್ನಲ್ಲೇ ಕೃತ್ಯಕ್ಕೆ ಸಂಬಂಧಿಸಿದ ಆಡಿಯೋ ಹಾಗೂ ವಿಡಿಯೋಗಳನ್ನು ಶಾಸಕರು ನಾಶ ಮಾಡಿರಬಹುದು ಎಂದು ಶಂಕಿಸಿದೆ. ಈ ಹಿನ್ನೆಲೆಯಲ್ಲಿ ಶಾಸಕರ ಮನೆ, ಕಚೇರಿ ಹಾಗೂ ಆಪ್ತ ಮನೆಗಳ ಮೇಲೆ ಎಸ್‌ಐಟಿ ಎಸ್ಪಿ ಡಾ.ಎಸ್.ಕೆ.ಸೌಮ್ಯಲತಾ ಸಾರಥ್ಯದಲ್ಲಿ ಅತ್ಯಾಚಾರ ಪ್ರಕರಣದ ತನಿಖಾಧಿಕಾರಿ ಡಿವೈಎಸ್ಪಿ ಕವಿತಾ ತಂಡವು ದಿಢೀರನೇ ದಾಳಿ ನಡೆಸಿ ಪರಿಶೀಲಿಸಿದೆ. ಈ ವೇಳೆ ಜಪ್ತಿಯಾದ ಹಾರ್ಡ್ ಡಿಸ್ಕ್ ಹಾಗೂ ಪೆನ್ ಡ್ರೈವ್‌ಗಳಲ್ಲಿರುವ ಮಾಹಿತಿ ಬಗ್ಗೆ ಕುತೂಹಲ ಮೂಡಿದ್ದು, ಅವುಗಳನ್ನು ಸೈಬರ್ ತಜ್ಞರಿಗೆ ತಪಾಸಣೆಗೆ ಎಸ್‌ಐಟಿ ಅಧಿಕಾರಿಗಳು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ವೈಯಾಲಿಕಾವಲ್ ಗೃಹಕಚೇರಿಯೇ ಅಡ್ಡೆ:
ವೈಯಾಲಿಕಾವಲ್‌ನಲ್ಲಿ ಮುನಿರತ್ನರವರ ಮನೆ ಬೆಳಗ್ಗೆ 7 ಗಂಟೆಗೆ ಎಸ್‌ಐಟಿ ಅಧಿಕಾರಿಗಳು ಬಾಗಿಲು ಬಡಿದಿದ್ದಾರೆ. ಮನೆ ಬಾಗಿಲಿನಲ್ಲಿ ಬೆಳ್ಳಂಬೆಳಗ್ಗೆ ಅಧಿಕಾರಿಗಳ ತಂಡ ಕಂಡು ಶಾಸಕರ ಕುಟುಂಬದವರು ಆತಂಕಕೊಂಡಿದ್ದಾರೆ. ಬಳಿಕ ಮನೆಯಲ್ಲಿ ನಾಲ್ಕೈದು ತಾಸು ಅಧಿಕಾರಿಗಳು ಜಾಲಾಡಿದ್ದಾರೆ. ಈ ವೇಳೆ ಮನೆಗೆ ಹೊಂದಿಕೊಂಡಂತೆ ಶಾಸಕರ ಗೃಹ ಕಚೇರಿ ಇದ್ದು, ಈ ಕಚೇರಿಯಿಂದಲೇ ತಮ್ಮ ಎಲ್ಲ ರಹಸ್ಯ ವ್ಯವಹಾರಗಳನ್ನು ಶಾಸಕರು ನಿರ್ವಹಿಸುತ್ತಿದ್ದರು ಎಂದು ಮೂಲಗಳು ಹೇಳಿವೆ.