ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಶ್ರೀ ರಂಗಮುಡಿ ಮಹೋತ್ಸವ ಗುರುವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.
ಶ್ರೀರಂಗನಾಥಸ್ವಾಮಿ ಹಾಗೂ ರಂಗನಾಯಕಿ ಅಮ್ಮನವರ ವಿಗ್ರಹಕ್ಕೆ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ದೇವರಿಗೆ ಮಹಾಭಿಷೇಕವನ್ನು ದೇವಾಲಯದ ಪ್ರಧಾನ ಅರ್ಚಕ ವಿಜಯಸಾರಥಿ ನೇತೃತ್ವದಲ್ಲಿ ಜರುಗಿತು. ಮಧ್ಯಾಹ್ನ ನೆರದಿದ್ದ ಭಕ್ತರಿಗೆ ಪ್ರಸಾದ ನಿಯೋಗ ನಡೆಸಲಾಯಿತು. ಸಂಜೆ ಪಟ್ಟಣದ ಉಪ ಖಜಾನೆಯಲ್ಲಿದ್ದ ವಜ್ರ ಖಚಿತ ಚಿನ್ನದ ಕಿರೀಟವನ್ನು ರಂಗನಾಥಸ್ವಾಮಿಗೆ ಕಿರೀಟ ಧಾರಣೆ ಮಾಡಿ ಪಲ್ಲಕಿ ಮೇಲಿರಿಸಿ ಪಟ್ಟಣದ ರಾಜಬೀದಿ, ಪೂರ್ಣಯ್ಯ ಬೀದಿ ಮತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವಮೂರ್ತಿಯ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ನಡೆಯುವ ಬೀದಿಗಳಲ್ಲಿ ಮಹಿಳೆಯರು ರಂಗವಲ್ಲಿ ಹಾಕಿ ಹಣ್ಣು ಆರತಿ ಪೂಜೆ ಸಲ್ಲಿಸಿದರು. ದಾರಿಯುದ್ದಕ್ಕೂ ಶ್ರೀರಂಗನ ಭಕ್ತರು ಸಾಲುಗಟ್ಟಿ ದೇವರ ದರ್ಶನ ಪಡೆದರು. ರಂಗಮುಡಿ ಉತ್ಸವದ ಅಂಗವಾಗಿ ರಾಜ್ಯವಲ್ಲದೆ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ರಾಜ್ಯದ ಬೆಂಗಳೂರು, ಮೈಸೂರು, ಮಂಡ್ಯ ಇತರೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು.