ಕೆಎಸ್‌ಆರ್‌ಟಿಸಿ ಚಾಲಕನ ಸಮಯ ಪ್ರಜ್ಞೆ: ಉಳಿಯಿತು 84 ಜನರ ಪ್ರಾಣ...!

KannadaprabhaNewsNetwork | Updated : Jan 22 2024, 03:43 PM IST

ಸಾರಾಂಶ

ರಾಜ್ಯ ಸಾರಿಗೆ ಬಸ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಸಂಭವಿಸಬಹುದಾದ ಭಾರೀ ಅಪಘಾತವೊಂದು ತಪ್ಪಿದೆ. ಬಸ್‌ನಲ್ಲಿದ್ದ 80 ಜನರು ಹಾಗೂ ಕಾರಿನಲ್ಲಿದ್ದ ನಾಲ್ವರು ಯಾವುದೇ ಸಾವು ನೋವು ಉಂಟಾಗದೆ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. 

ಕನ್ನಡಪ್ರಭ ವಾರ್ತೆ ಮದ್ದೂರು

ರಾಜ್ಯ ಸಾರಿಗೆ ಬಸ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಸಂಭವಿಸಬಹುದಾದ ಭಾರೀ ಅಪಘಾತವೊಂದು ತಪ್ಪಿದ ಘಟನೆ ಪಟ್ಟಣದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಭಾನುವಾರ ಮಧ್ಯಾಹ್ನ ಜರುಗಿದೆ.

ಬಸ್‌ನಲ್ಲಿದ್ದ 80 ಜನರು ಹಾಗೂ ಕಾರಿನಲ್ಲಿದ್ದ ನಾಲ್ವರು ಯಾವುದೇ ಸಾವು ನೋವು ಉಂಟಾಗದೆ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮೈಸೂರು ಕಡೆಯಿಂದ ಬರುತ್ತಿದ್ದ ಆಲ್ಟೋ ಕಾರಿನ ಚಾಲಕ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಸಮೀಪ ಇರುವ ಎಚ್ಐ ಕ್ಯೂ ಪೆಟ್ರೋಲ್ ಬಂಕಿನ ಎದುರಿನ ರಸ್ತೆ ವಿಭಜಕದ ನಡುವೆ ಹಠ ತಾನೇ ಕಾರನ್ನು ತಿರುವು ತೆಗೆದುಕೊಳ್ಳುತ್ತಿದ್ದ ವೇಳೆ ಬೆಂಗಳೂರು ಕಡೆಯಿಂದ ಬರುತ್ತಿದ್ದ ಕೊಳ್ಳೇಗಾಲ ಡಿಪೋ ಸೇರಿದ ಬಸ್ಸು ಮೊದಲು ಕಾರಿಗೆ ಡಿಕ್ಕಿ ಹೊಡೆದಿದೆ.

ನಂತರ ಬಸ್ ಹೆದ್ದಾರಿ ಮೇಲ್ ಸೇತುವೆಯ ಪಿಲ್ಲರ್‌ಗೆ ಗುದ್ದಿದ ನಂತರ ಭಾರೀ ಪ್ರಮಾಣದ ಸಾವು ನೋವು ಉಂಟಾಗುವ ಸಾಧ್ಯತೆ ಇತ್ತು. ಇದರಿಂದ ಎಚ್ಚೆತ್ತ ಬಸ್ ಚಾಲಕ ಷಣ್ಮುಗ ಸುಂದರಂ ಅವರು ಬಸ್ಸನ್ನು ಬಲಕ್ಕೆ ತಿರುಗಿಸಿದಾಗ ಬಸ್ಸು ಹೆದ್ದಾರಿಯಲ್ಲೇ ಅಡ್ಡಾದಿಡಿಯಲ್ಲಿ ಉರುಳಿ ಮತ್ತೆ ಬೆಂಗಳೂರು ಮಾರ್ಗದ ರಸ್ತೆಗೆ ಬಂದು ನಿಂತಿದೆ.

ಅಪಘಾತದಿಂದ ಆತಂಕಗೊಂಡಿದ್ದ ಬಸ್ ಪ್ರಯಾಣಿಕರು ಯಾವುದೇ ಅನಾಹುತ ಸಂಭವಿಸದ ಕಾರಣ ನಿಟ್ಟುಸಿರು ಬಿಟ್ಟರು. ನಂತರ ಸ್ಥಳಕ್ಕೆ ಧಾವಿಸಿದ ಮದ್ದೂರು ಸಂಚಾರಿ ಠಾಣೆ ಪೊಲೀಸರು ಅಪಘಾತ ಕೀಡಾಗಿದ್ದ ಎರಡು ವಾಹನಗಳನ್ನು ಠಾಣೆಗೆ ಸಾಗಿಸಿ ಹೆದ್ದಾರಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಪಾನಮತ್ತರಾಗಿ ವಾಹನ ಚಾಲನೆ ಚಾಲಕರಿಗೆ 1.30 ಲಕ್ಷ ದಂಡ, ನ್ಯಾಯಾಲಯ ಆದೇಶ

ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಸೇರಿದಂತೆ ಹೆದ್ದಾರಿಗಳಲ್ಲಿ ಪಾನಮತ್ತರಾಗಿ ವಾಹನ ಚಾಲನೆ ಮಾಡುತ್ತಿದ್ದ 13 ಪ್ರಕರಣಗಳಲ್ಲಿ ಚಾಲಕರಿಗೆ ತಲಾ 10 ಸಾವಿರದಂತೆ 1.30 ಲಕ್ಷ ದಂಡ ವಿಧಿಸಿ ಪಟ್ಟಣದ ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ.

ಮದ್ದೂರು ಸಂಚಾರಿ ಠಾಣೆ ಪಿಎಸ್ಐ ಜೆಇ ಮಹೇಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹಗಲು ಮತ್ತು ರಾತ್ರಿ ವೇಳೆ ಪಾನಮತ್ತರಾಗಿ ವಾಹನ ಚಾಲನೆ ಮಾಡುತ್ತಿದ್ದ ಚಾಲಕರನ್ನು ಪರೀಕ್ಷೆಗೆ ಒಳಪಡಿಸಿ ದೃಢಪಟ್ಟ ನಂತರ ಆರು ಬೈಕ್‌, ಒಂದು ಜೆಸಿಬಿ ಎರಡು ಕ್ಯಾಂಟರ್, ಎರಡು ಕಾರು ಹಾಗೂ ಎರಡು ಆಟೋ ಚಾಲಕರ ವಿರುದ್ಧ ಮೊಕದ್ದಮೆ ದಾಖಲಿಸಿ ನ್ಯಾಯಾಲಯಕ್ಕೆ ಎಫ್ಐಆರ್ ಸಲ್ಲಿಸಿದ್ದರು.

ಈ ಸಂಬಂಧ ಪ್ರಕರಣದ ವಿಚಾರಣೆ ನಡೆಸಿದ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ. ಪ್ರಿಯಾಂಕ ಚಾಲಕರಿಗೆ ತಲಾ 10 ಸಾವಿರದಂತೆ 13 ಪ್ರಕರಣಗಳಲ್ಲಿ 1.3 0 ಲಕ್ಷ ರು.ದಂಡ ವಿಧಿಸಿ ಆದೇಶ ನೀಡಿದ್ದಾರೆ.

Share this article