ಕೆ.ಆರ್.ಪೇಟೆ : ತಾಲೂಕಿನ ಬೀಕನಹಳ್ಳಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿದ್ದ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗ್ರಾಮದ ಹಾಲುಮತ ಸಮುದಾಯಕ್ಕೆ ಸೇರಿದ ಮೋಹನ (30) ಬಿನ್. ಅಣ್ಣೇಗೌಡ ಬಂಧಿತ ವ್ಯಕ್ತಿ. ಕಳೆದ ಮೂರು ದಿನಗಳ ಹಿಂದೆ ಗ್ರಾಮದ ವೃತ್ತದಲ್ಲಿದ್ದ ಸಂಗೊಳ್ಳಿರಾಯಣ್ಣ ಪ್ರತಿಮೆಯ ಖಡ್ಗ, ಖಡ್ಗದ ಪಟ್ಟಿ ಮತ್ತು ಕಾಲಿನ ಪಾದವನ್ನು ಮುರಿದು ಪರಾರಿಯಾಗಿದ್ದನು. ಮರುದಿನ ದಿನ ಬೆಳಗ್ಗೆ ಗ್ರಾಮಸ್ಥರು ರಾಯಣ್ಣರ ಪ್ರತಿಮೆ ಭಗ್ನಗೊಂಡಿರುವುದನ್ನು ಕಂಡು ಆಕ್ರೋಶಕ್ಕೆ ಒಳಗಾಗಿದ್ದರು. ಇದರ ಜತೆಗೆ ರಾಜ್ಯ ಮಟ್ಟದ ಕುರುಬ ಜನಾಂಗ ಮುಖಂಡರು ಸ್ಥಳಕ್ಕೆ ಭೇಟಿ ಕೊಟ್ಟು ಪ್ರತಿಭಟಿಸಿ ದುಷ್ಕರ್ಮಿಯನ್ನು ಬಂಧಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕಿದ್ದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಅದೇ ದಿನ ಬೆರಳಚ್ಚು ತಂತ್ರಜ್ಞರು ಮತ್ತು ಪೊಲೀಸ್ ಶ್ವಾನ ತರಬೇತುದಾರ ನಾಗರಾಜ್ ಗರಡಿಯಲ್ಲಿ ಪಳಗಿರುವ ಭೈರವ ಶ್ವಾನವನ್ನು ಕರೆಸಿ ಆರೋಪಿ ಪತ್ತೆಗೆ ಮುಂದಾದರು.
ಶ್ವಾನ ಭೈರವ ಅದೇ ಗ್ರಾಮದ ಮೋಹನ್ ಅಲಿಯಾಸ್ ಗುಂಡ ಅವರ ಮನೆಗೆ ಮನೆ ಬಳಿ ಸಾಗಿ ಆತನ ಗುರುತನ್ನು ಪೊಲೀಸರಿಗೆ ಸಾಕ್ಷ್ಯ ಒದಗಿಸಿತ್ತು. ಇದರ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಆರೋಪಿ ಮೋಹನ್ ನನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದೆ.
ಸದರಿ ಆರೋಪಿ ಬೆಂಗಳೂರಿನ ಹೋಟೆಲ್‌ನಲ್ಲಿ ಅಡುಗೆ ಭಟ್ಟನಾಗಿರುವುದು ತಿಳಿದು ಬಂದಿದೆ. ಘಟನೆ ನಡೆದ ಎರಡು ದಿನದ ನಂತರ ಆತ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿರುವುದು ತಿಳಿದು ಬಂದಿದೆ. ತಕ್ಷಣ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಆನಂದೇಗೌಡ ಮತ್ತು ಸಬ್ ಇನ್ಸ್ ಪೆಕ್ಟರ್ ಸುಬ್ಬಯ್ಯ ನೇತೃತ್ವದ ತಂಡ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ನಂತರ ಆತನು ತನ್ನ ಅಪರಾಧ ಒಪ್ಪಿಕೊಂಡಿದ್ದಾನೆಂದು ತಿಳಿದು ಬಂದಿದೆ.
ಕಳೆದ 11 ತಿಂಗಳ ಹಿಂದೆ ಬೀಕನಹಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಸ್ಥಾಪನೆ ಮಾಡಿದ್ದಾಗ ಈತನನ್ನು ಗ್ರಾಮಸ್ಥರು ಪರಿಗಣನೆ ಮಾಡಲಿಲ್ಲ ಎಂಬ ಅಸಮಾಧಾನ ಇತ್ತು ಎನ್ನಲಾಗಿದೆ. ಕಳೆದ ಬುಧವಾರ ಊರಿಗೆ ಬಂದಾಗ ಮದ್ಯಪಾನ ಮಾಡಿ ರಾತ್ರಿ ಸಮಯದಲ್ಲಿ ಪ್ರತಿಮೆಯನ್ನು ವಿರೂಪಗೊಳಿಸಿ ಪ್ರತಿಮೆಯ ಖಡ್ಗ ಹಾಗೂ ಖಡ್ಗದ ಪಟ್ಟಿಯನ್ನು ಮುರಿದುಕೊಂಡು ತನ್ನ ಮನೆಯ ಬಳಿಯ ಇರುವ ಹುಲ್ಲಿನ ಮೆದೆಯಲ್ಲಿ ಅಡಗಿಸಿ ಇಟ್ಟಿದನು. ಇವುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.