ಕನ್ನಡಪ್ರಭ ವಾರ್ತೆ ನಂಜನಗೂಡು
ಡಾ.ಬಿ.ಆರ್.ಅಂಬೇಡ್ಕರ್ ಅವರ ನಾಮ ಫಲಕ ಅಳವಡಿಕೆ ಸಂಬಂಧ ಉಂಟಾದ ವಾಗ್ವಾದ ವಿಕೋಪಕ್ಕೆ ತಿರುಗಿ ಬಳಿಕ ನಡೆದ ಕಲ್ಲು ತೂರಾಟದಲ್ಲಿ ಪಿಎಸ್‌ಐ ಸೇರಿದಂತೆ ಮೂವರು ಪೊಲೀಸರು ಹಾಗೂ 25ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಗಾಯಗೊಂಡಿದ್ದು 30ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿರುವ ಘಟನೆ ತಾಲೂಕಿನ ಹಲ್ಲರೆ ಗ್ರಾಮದಲ್ಲಿ ನಡೆದಿದೆ.ಹಲ್ಲರೆ ಗ್ರಾಮದಿಂದ ಹುರ ಕಡೆಗೆ ತೆರಳುವ ರಸ್ತೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯನ್ನಾಗಿ ಹೆಸರಿಸಲು ಪರಿಶಿಷ್ಟ ಸಮುದಾಯದ ಕೆಲ ಯುವಕರು ಸ್ಥಳೀಯ ಪಂಚಾಯತಿಗೆ ಅರ್ಜಿ ಸಲ್ಲಿಸಿ ಪಿಡಿಒ ಅವರಿಂದ ಅನುಮತಿ ಪಡೆದುಕೊಂಡಿದ್ದರು. ಆದರೆ ನಾಮ ಫಲಕ ಅಳವಡಿಕೆಗೆ ಸಂಬಂದಿಸಿದಂತೆ ಕಳೆದ ಐದು ದಿನಗಳ ಹಿಂದೆ ಎಸ್‌ಟಿ ಸಮುದಾಯದ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ನಾಮ ಫಲಕ ಅಳವಡಿಕೆ ಮುಂದೂಡಲಾಗಿತ್ತು. ಸೋಮವಾರ ಸಂಜೆ ಗ್ರಾಮದಲ್ಲಿ ಈ ಸಂಬಂಧ ಮತ್ತೆ ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದ ಜನರ ನಡುವೆ ವಾಗ್ವಾದ ಉಂಟಾಗಿದೆ. ಸಂಜೆ ಕೆಲವರು ಪರಿಶಿಷ್ಟ ಸಮುದಾಯದ ಜನರು ವಾಸಿಸುವ ಬೀದಿಗೆ ತೆರಳಿ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದ್ದು ಇದರಿಂದಾಗಿ ಗ್ರಾಮದ ನಿವಾಸಿಗಳಾದ ನಂಜುಂಡಸ್ವಾಮಿ,ಶಂಕರಮ್ಮ,ಸುರೇಶ್,ಶಂಕರ,ಮನೋಜ್,ಮಹದೇವಸ್ವಾಮಿ,ನಂಜುಂಡಸ್ವಾಮಿ, ಸಾಗರ್, ಪುನೀತ್ ಕುಮಾರ್,ರಾಮು ಹಾಗೂ ಮಹದೇವ ಪ್ರಸಾದ್ ಸೇರಿದಂತೆ 25ಕ್ಕೂ ಹೆಚ್ಚು ಮಂದಿಗೆ ಕಲ್ಲೇಟು ಬಿದ್ದು ಗಾಯಗೊಂಡಿದ್ದಾರೆ ಇದರೊಂದಿಗೆ ಮನೆ ಮುಂದೆ ನಿಂತಿದ್ದ 30ಕ್ಕೂ ಹೆಚ್ಚು ದ್ವಿಚಕ್ರವಾಹನಗಳು ಜಖಂಗೊಂಡಿದ್ದು ಗ್ರಾಮದಲ್ಲಿ ಪರಿಸ್ಥಿತಿ ಬಿಗುವಿನ ವಾತಾವರಣದಿಂದ ಕೂಡಿದೆ. ಪರಿಶಿಷ್ಟ ಪಂಗಡದ ಅಕ್ಕ ಪಕ್ಕದ ಗ್ರಾಮದವರೂ ಸೇರಿಕೊಂಡು ಹಲ್ಲೆಗೆ ಮುಂದಾದ ಕಾರಣ ಹೆಚ್ಚಿನ ಜನರಿಗೆ ಗಾಯವಾಗಿದೆ.
ಇನ್ನು ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ್ದ ಪೊಲೀಸರ ಮೇಲೂ ಉದ್ರಿಕ್ತರ ಗುಂಪು ಕಲ್ಲು ತೂರಿದ್ದರಿಂದ ನಂಜನಗೂಡು ಗ್ರಾಮಾಂತರ ಠಾಣೆ ಪಿಎಸ್‌ಐ ಗೋಪಾಲಕೃಷ್ಣ ಸೇರಿದಂತೆ ಮೂವರು ಪೊಲೀಸರಿಗೆ ಗಾಯಗಳಾಗಿದ್ದು ಗಾಯಾಳು ಪೊಲೀಸರೂ ಸೇರಿದಂತೆ ಗಲಭೆಯಲ್ಲಿ ಗಾಯಗೊಂಡಿರುವ ಗ್ರಾಮಸ್ಥರನ್ನು ಸರಕಾರೀ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಇನ್ನು ಮಾಹಿತಿ ಪಡೆದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸೀಮಾ ಲಾಟ್ಕರ್, ಎಎಸ್‌ಪಿ ನಂದಿನಿ, ಡಿವೈಎಸ್‌ಪಿ ಗೋವಿಂದರಾಜು ಹಾಗೂ ವೃತ್ತ ನಿರೀಕ್ಷಕ ಸುನೀಲ್ ಕುಮಾರ್ ಭೇಟಿ ನೀಡಿ ಪರಿಶಿಲನೆ ನಡೆಸಿದ್ದು ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.