ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದಸುಪಾರಿ ಕಿಲ್ಲರ್‌ ಶಶಾಂಕ್‌ ಬಂಧನ

KannadaprabhaNewsNetwork | Updated : Jan 23 2024, 04:09 PM IST

ಸಾರಾಂಶ

ಲಾಂಗ್‌ ಹಿಡಿದು ವಿಡಿಯೋ ಮಾಡಿ ಸಾರ್ವಜನಿಕರಲ್ಲಿ ಭಯ ಸೃಷ್ಟಿಗೆ ಓಡಾಡುತ್ತಿದ್ದ ಸುಪಾರಿ ಕಿಲ್ಲರ್‌ ಶಶಾಂಕ್‌ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾರಾಕಾಸ್ತ್ರ ಹಿಡಿದು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಸುಪಾರಿ ಕಿಲ್ಲರ್‌ನನ್ನು ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಸಂಘಟಿತ ಅಪರಾಧ ದಳ (ಪಶ್ಚಿಮ) ಪೊಲೀಸರು ಬಂಧಿಸಿದ್ದಾರೆ.

ಹುಳಿಮಾವು ನಿವಾಸಿ ಶಶಾಂಕ್ (28) ಬಂಧಿತ ಸುಪಾರಿ ಕಿಲ್ಲರ್. ಇತ್ತೀಚೆಗೆ ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯ ಕೆರೆ ಬಳಿ ಮಾರಕಾಸ್ತ್ರ ಹಿಡಿದುಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಮಾರಕಾಸ್ತ್ರ ಹಿಡಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಲು ಮುಂದಾಗಿದ್ದ. ಈ ಬಗ್ಗೆ ದೊರೆತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಈ ಸಂಬಂಧ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪ್ರಾಪ್ತ ವಯಸ್ಸಿನಲ್ಲೇ ಕೊಲೆ ಮಾಡಿದ್ದ:

ಆರೋಪಿ ಶಶಾಂಕ್ 16 ವರ್ಷದ ಹಿಂದೆ ಕ್ರಿಕೆಟ್‌ ಆಡುವಾಗ ನಡೆದ ಗಲಾಟೆ ವೇಳೆ ಬೇಬಿ ಎಂಬ ಯುವಕನ ಮೇಲೆ ಕ್ರಿಕೆಟ್‌ ಬ್ಯಾಟ್‌ ಮತ್ತು ಮಾರಕಾಸ್ತ್ರಗಳಿಂದ ಹಲ್ಲೆಗೈದು ಕೊಲೆ ಮಾಡಿ ರಿಮ್ಯಾಂಡ್‌ ಹೋಂ ಸೇರಿದ್ದ. ಬಳಿಕ ಕೆಲ ರೌಡಿಗಳನ್ನು ಪರಿಚಯಿಸಿಕೊಂಡು ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ. ಈತನ ವಿರುದ್ಧ ಈ ಹಿಂದೆ ಹುಳಿಮಾವು ಮತ್ತು ಬನ್ನೇರುಘಟ್ಟ ಠಾಣೆಯಲ್ಲಿ ಕೊಲೆ ಪ್ರಕರಣ, ಅತ್ತಿಬೆಲೆ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.

ರಿಯಲ್‌ ಎಸ್ಟೇಟ್‌ ಉದ್ಯಮಿ ಕೊಲೆ:

ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2019ರಲ್ಲಿ ಸುಪಾರಿ ಪಡೆದು ರಿಯಲ್ ಎಸ್ಟೇಟ್ ಉದ್ಯಮಿ ಸತೀಶ್ ರೆಡ್ಡಿ ಎಂಬುವವರನ್ನು ಕೊಲೆ ಮಾಡಿದ್ದ. ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಆರೋಪಿ ಶಶಾಂಕ್‌, ಜೈಲಿನಲ್ಲಿ ಇದ್ದಾಗ ಸತೀಶ್ ರೆಡ್ಡಿ ಕೊಲೆಗೆ ಸುಪಾರಿ ಪಡೆದಿದ್ದ. ಬಳಿಕ ಜೈಲಿನಿಂದ ಬಿಡುಗಡೆಯಾಗಿ ಸತೀಶ್‌ ರೆಡ್ಡಿಯನ್ನು ಕೊಲೆಗೈದಿದ್ದ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಕಾಲಿಗೆ ಗುಂಡು ಹೊಡೆದು ಬಂಧನ:

ಅತ್ತಿಬೆಲೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿಸಲು ತೆರಳಿದ್ದ ವೇಳೆ ಶಶಾಂಕ್‌ ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದ. ಈ ವೇಳೆ ಪೊಲೀಸರು ಶಶಾಂಕ್‌ನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಜೈಲಿನಿಂದ ಜಾಮೀನು ಪಡೆದು ಹೊರಗೆ ಬಂದ ಬಳಿಕವೂ ಆರೋಪಿಯು ಕಾನೂನು ಬಾಹಿರ ಚಟುವಟಿಕೆಗಳನ್ನು ಮುಂದುವರೆಸಿದ್ದ ಎಂಬುದು ತಿಳಿದು ಬಂದಿದೆ.

Share this article