ಪತ್ನಿಯ ಕಿರಿಕುಳದಿಂದ ಬೇಸತ್ತು ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಟೆಕಿ ಅತುಲ್ ಸುಭಾಷ್ ಅವರ 4 ವರ್ಷದ ಪುತ್ರನ ಕಸ್ಟಡಿಯನ್ನು ಅತುಲ್ ತಾಯಿಗೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಅಜ್ಜಿಯು ಮಗುವಿನ ಪಾಲಿಗೆ ಅಪರಿಚಿತರಾಗಿದ್ದಾರೆ ಎಂದು ತಿಳಿಸಿದೆ.
ನವದೆಹಲಿ: ಪತ್ನಿಯ ಕಿರಿಕುಳದಿಂದ ಬೇಸತ್ತು ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಟೆಕಿ ಅತುಲ್ ಸುಭಾಷ್ ಅವರ 4 ವರ್ಷದ ಪುತ್ರನ ಕಸ್ಟಡಿಯನ್ನು ಅತುಲ್ ತಾಯಿಗೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಅಜ್ಜಿಯು ಮಗುವಿನ ಪಾಲಿಗೆ ಅಪರಿಚಿತರಾಗಿದ್ದಾರೆ ಎಂದು ತಿಳಿಸಿದೆ.
ಮೊಮ್ಮಗುವಿನ ಕಸ್ಟಡಿ ಕೋರಿ ಸುಭಾಷ್ ತಾಯಿ ಅಂಜು ದೇವಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ನ್ಯಾ। ಬೆಲಾ ಎಂ. ತ್ರಿವೇದಿ ಹಾಗೂ ಕೋಟೀಶ್ವರ್ ಸಿಂಗ್ ಅವರ ಪೀಠ, ‘ಮಗುವಿನ ಕಸ್ಟಡಿಯ ವಿಷಯವನ್ನು ಪ್ರಕರಣದ ವಿಚಾರಣೆ ನಡೆಸುತ್ತಿರುವ (ಕರ್ನಾಟಕ ಹೈಕೋರ್ಟ್) ಕೋರ್ಟ್‌ನ ಮುಂದೆ ಪ್ರಸ್ತಾಪಿಸಬೇಕು’ ಎಂದು ಸೂಚಿಸಿದೆ.
ಈ ವೇಳೆ ಸುಭಾಷ್ ಪತ್ನಿ ಪರ ವಾದ ಮಂಡಿಸಿದ ವಕೀಲರು, ‘ಮಗುವನ್ನು ಹರಿಯಾಣದ ವಸತಿ ಶಾಲೆಯಿಂದ ಬಿಡಿಸಿ ತಾಯಿಯೊಂದಿಗೆ ಬೆಂಗಳೂರಿನಲ್ಲಿಯೇ ಇಟ್ಟುಕೊಳ್ಳಲಾಗುವುದು’ ಎಂದರು. ಈ ವೇಳೆ ಅಂಜು ದೇವಿ ಪರ ವಕೀಲರು, ಮಗುವಿನ ಇರುವಿಕೆಯ ಕುರಿತ ಮಾಹಿತಿಯನ್ನು ಅವನ ತಾಯಿ ಗೌಪ್ಯವಾಗಿಟ್ಟಿದ್ದಾರೆ ಎಂದು ಆರೋಪಿಸಿದ್ದು, 6 ವರ್ಷಕ್ಕಿಂತಲೂ ಕಿರಿಯ ಮಗುವನ್ನು ವಸತಿ ಶಾಲೆಯಲ್ಲಿ ಬಿಡಬಾರದು ಎಂದು ವಾದಿಸಿದರು. ಜೊತೆಗೆ, ಮಗು ಸಣ್ಣದಿದ್ದಾಗ ಅಂಜು ದೇವಿ ಹಾಗೂ ಅವರ ಒಡನಾಟಕ್ಕೆ ಸಾಕ್ಷಿಯಾಗಿ ಕೆಲ ಫೋಟೋಗಳನ್ನೂ ಪ್ರಸ್ತುತಪಡಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ಮಗುವನ್ನು ಜ.20ರಂದು ಕೋರ್ಟ್ ಮುಂದೆ ಹಾಜರುಪಡಿಸುವಂತೆ ಸೂಚಿಸಿದ್ದು, ಮಾಧ್ಯಮಗಳ ಅಭಿಪ್ರಾಯದಂತೆ ತೀರ್ಪು ಕೊಡಲಾಗದು ಎಂದಿದೆ. ಜ.4ರಂದು ಅತುಲ್ ಪತ್ನಿ ನಿಖಿತಾ ಸಿಂಘಾನಿಯಾ, ಆಕೆಯ ತಾಯಿ ಹಾಗೂ ಸಹೋದರನಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.