ದರ್ಶನ್‌ ವಿರುದ್ಧ ನಾಲ್ವರು ಆಪ್ತರಿಂದಲೇ ಸಾಕ್ಷ್ಯ

KannadaprabhaNewsNetwork | Updated : Jun 20 2024, 04:08 AM IST

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್‌ ಅವರ ಮೂವರು ಆಪ್ತರು ಸೇರಿದಂತೆ ನಾಲ್ವರಿಂದ ಸಿಆರ್‌ಪಿಸಿ 164ರ ಅಡಿ ನ್ಯಾಯಾಲಯದಲ್ಲಿ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.

 ಬೆಂಗಳೂರು :  ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್‌ ಅವರ ಮೂವರು ಆಪ್ತರು ಸೇರಿದಂತೆ ನಾಲ್ವರಿಂದ ಸಿಆರ್‌ಪಿಸಿ 164ರ ಅಡಿ ನ್ಯಾಯಾಲಯದಲ್ಲಿ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ದರ್ಶನ್ ವಿರುದ್ಧ ಆಪ್ತರೇ ಸಾಕ್ಷಿಗಳಾಗಿ ಹೊರಹೊಮ್ಮಿರುವುದು ಅವರಿಗೆ ಮತ್ತಷ್ಟು ಕಂಟಕವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಪಟ್ಟಣಗೆರೆ ಶೆಡ್‌ನ ಕಾವಲುಗಾರ, ದರ್ಶನ್ ಸಹಚರರಾದ ಗೋವಿಂದರಾಜು, ಪುನೀತ್ ಹಾಗೂ ವಿನಯ್‌ ಅ‍ವರಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಕೃತ್ಯದ ದಿನ ದರ್ಶನ್‌ ಸಂಪರ್ಕದಲ್ಲಿ ಇದ್ದರು ಎಂಬ ಕಾರಣಕ್ಕೆ ಹೇಳಿಕೆ ಪಡೆಯಲಾಗಿದೆ.ಶೆಡ್‌ಗೆ ದರ್ಶನ್ ಗ್ಯಾಂಗ್ ಬಂದಾಗ ಹೊರರಾಜ್ಯದ ಹಿಂದಿ ಭಾಷಿಕ ಕಾವಲುಗಾರ ಗೇಟ್ ತೆರೆದಿದ್ದ. ಹೀಗಾಗಿ ಶೆಡ್‌ಗೆ ದರ್ಶನ್‌ ಗ್ಯಾಂಗ್ ಬಂದಿದ್ದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ಕಾವಲುಗಾರನಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಅದೇ ರೀತಿ ರೇಣುಕಾಸ್ವಾಮಿ ಹತ್ಯೆ ಬಳಿಕ ಮೃತದೇಹ ಸಾಗಿಸಿದ ಸ್ಕಾರ್ಪಿಯೋ ಕಾರನ್ನು ಪುನೀತ್‌, ವಿನಯ್ ಹಾಗೂ ಗೋವಿಂದರಾಜು ಸ್ವಚ್ಛಗೊಳಿಸಿದ್ದರು. ಅಲ್ಲದ ಆರ್.ಆರ್‌.ನಗರದಲ್ಲಿರುವ ಗೋವಿಂದರಾಜು ಮನೆ ಬಳಿಯಿಂದಲೇ ಸ್ಕಾರ್ಪಿಯೋವನ್ನು ಪೊಲೀಸರು ಜಪ್ತಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಈ ಮೂವರನ್ನು ನ್ಯಾಯಾಲಯದಲ್ಲಿ ಪೊಲೀಸರು ಹೇಳಿಕೆ ಪಡೆದಿದ್ದಾರೆ. ಅಲ್ಲದೆ ದರ್ಶನ್ ಅವರ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಪುನೀತ್ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.

ಶರಣಾಗುವ ಮುನ್ನ ಪಾರ್ಟಿ:ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ಶರಣಾಗುವ ಮುನ್ನ ಹೋಟೆಲ್‌ನಲ್ಲಿ ತಂಗಿ ಮೂವರು ಆರೋಪಿಗಳು ಪಾರ್ಟಿ ಮಾಡಿದ್ದರು ಎಂದು ತಿಳಿದು ಬಂದಿದೆ.

ಆರ್‌.ಆರ್.ನಗರದ ಟ್ರೋಬೋ ಹೋಟೆಲ್‌ನಲ್ಲಿ ಭಾನುವಾರ ರಾತ್ರಿ 8.30 ರಿಂದ ಆರೋಪಿಗಳಾದ ಕಾರ್ತಿಕ್ ಅಲಿಯಾಸ್ ಕಪ್ಪೆ, ನಿಖಿಲ್ ನಾಯ್ಕ್ ಹಾಗೂ ಕೇಶವ ಮೂರ್ತಿ ತಂಗಿದ್ದರು. ಇದೇ ಸಮಯದಲ್ಲಿ ಹತ್ಯೆ ನಡೆದ ವೇಳೆ ತಾನು ಧರಿಸಿದ್ದ ಬಟ್ಟೆಗಳನ್ನು ಹೋಟೆಲ್‌ನಲ್ಲಿ ಕಾರ್ತಿಕ್ ಬದಲಾಯಿಸಿದ್ದ. ಎರಡು ದಿನಗಳ ಬಳಿಕ ಬಿಬಿಎಂಪಿ ಕಸದ ಗಾಡಿಗೆ ಆತನ ಬಟ್ಟೆಯನ್ನು ಹಾಕಿದ್ದಾಗಿ ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ. ಈ ಮೂವರಿಗೆ ಹಣದಾಸೆ ತೋರಿಸಿ ದರ್ಶನ್ ಹೆಸರು ಹೇಳದೆ ಕೊಲೆ ಆರೋಪ ಹೊತ್ತು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಶರಣಾಗುವಂತೆ ದರ್ಶನ್ ಆಪ್ತರು ಸೂಚಿಸಿದ್ದರು. 

ಮೊಬೈಲ್ ಮೋರಿಗೆ ಎಸೆದಿದ್ದು ಪ್ರದೂಷ್: ಚಿತ್ರದುರ್ಗದ ಮೃತ ರೇಣುಕಾಸ್ವಾಮಿ ಹಾಗೂ ಆತನನ್ನು ಚಿತ್ರದುರ್ಗದಿಂದ ಅಪಹರಿಸಿದ್ದ ಆ ಜಿಲ್ಲೆಯ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರನ ಮೊಬೈಲ್‌ಗಳನ್ನು ಸುಮನಹಳ್ಳಿ ಸಮೀಪದ ಮೋರಿಗೆ ದರ್ಶನ್ ಆಪ್ತ ಪ್ರದೂಷ್ ಎಸೆದಿದ್ದ ಸಂಗತಿ ಪತ್ತೆಯಾಗಿದೆ. ಪೊಲೀಸರಿಗೆ ಸಾಕ್ಷ್ಯ ಸಿಗಬಾರದು ಎಂಬ ಕಾರಣಕ್ಕೆ ಈ ಇಬ್ಬರ ಮೊಬೈಲ್‌ಗಳನ್ನು ಪ್ರದೂಷ್ ಮೋರಿಗೆ ಬಿಸಾಕಿದ್ದ. ಈ ಕೃತ್ಯದ ತನಿಖೆಗಿಳಿದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸಹಕಾರದಲ್ಲಿ ಮೋರಿಯಲ್ಲಿ ಮೂರು ದಿನಗಳು ಮೊಬೈಲ್‌ಗಳಿಗೆ ಹುಡುಕಾಟ ನಡೆಸಿ ಕೊನೆ ಸಿಗದೆ ಕೈ ಚೆಲ್ಲಿದ್ದರು.

Share this article