ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಮುಖ್ಯಮಂತ್ರಿಗಳ ಸಹಿ ನಕಲು ಮಾಡಿ ವಂಚಿಸಿದ್ದವನ ಬಂಧನ..!

KannadaprabhaNewsNetwork | Updated : Feb 22 2025, 04:25 AM IST

ಸಾರಾಂಶ

ಆರೋಪಿ ವೆಂಕಟೇಶ್ ತಾನು ವಿಧಾನಸೌಧದಲ್ಲಿ ಉನ್ನತ ದರ್ಜೆಯ ಅಧಿಕಾರಿಯಾಗಿದ್ದು, ಜನಪ್ರತಿನಿಧಿಗಳು, ಉನ್ನತ ಮಟ್ಟದ ಅಧಿಕಾರಿಗಳು ತಮಗೆ ಪರಿಚಯವಿದ್ದು, ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 30 ರಿಂದ 40 ಜನರಿಂದ ಲಕ್ಷಾಂತರ ರು. ಹಣ ಪಡೆದು ವಂಚಿಸಿದ್ದಾನೆ.

  ಮಂಡ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಸಹಿಗಳನ್ನು ನಕಲು ಮಾಡಿ ನಕಲಿ ನೇಮಕಾತಿ ಆದೇಶಗಳನ್ನು ಸೃಷ್ಟಿಸಿ ಸರ್ಕಾರಿ ಕೆಲಸ ಕೊಡಿಸುವುದಾಗಿ ಸಾರ್ವಜನಿಕರನ್ನು ವಂಚಿಸಿ ಕೋಟ್ಯಂತರ ರು. ವಂಚಿಸಿರುವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ತಾವರಗೆರೆ ನಿವಾಸಿ ಎಚ್.ಸಿ.ವೆಂಕಟೇಶ್ ಬಂಧಿತ ಆರೋಪಿ.

ನಗರದ ಸಾಹುಕಾರ್ ಚನ್ನಯ್ಯ ಬಡಾವಣೆಯ ಎಸ್.ಕೆ.ಗಾಯಿತ್ರಿ ಅವರಿಂದ ಅಬಕಾರಿ ಇಲಾಖೆಯಲ್ಲಿ ಅವರ ಮಕ್ಕಳಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ೧೪ ಲಕ್ಷ ರು. ಪಡೆದು ವಂಚಿಸಿದ್ದಾನೆ. ನೇತ್ರಾವತಿ ಎಂಬುವರ ಮಗನಿಗೆ ಶಿಕ್ಷಣ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ೧೨.೨೪ ಲಕ್ಷ ರು. ಪಡೆದು ವಂಚಿಸಿದ್ದಾನೆ. ಇದೇ ರೀತಿ ಮತ್ತೊಬ್ಬರು ವಂಚನೆ ಪ್ರಕರಣ ದಾಖಲಿಸಿದ್ದಾರೆ ಎಂದು ವಿವರಿಸಿದರು.

30 ರಿಂದ 40 ಜನರಿಗೆ ವಂಚನೆ:

ಆರೋಪಿ ವೆಂಕಟೇಶ್ ತಾನು ವಿಧಾನಸೌಧದಲ್ಲಿ ಉನ್ನತ ದರ್ಜೆಯ ಅಧಿಕಾರಿಯಾಗಿದ್ದು, ಜನಪ್ರತಿನಿಧಿಗಳು, ಉನ್ನತ ಮಟ್ಟದ ಅಧಿಕಾರಿಗಳು ತಮಗೆ ಪರಿಚಯವಿದ್ದು, ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು ೩೦ ರಿಂದ ೪೦ ಜನರಿಂದ ಲಕ್ಷಾಂತರ ರು. ಹಣ ಪಡೆದು ವಂಚಿಸಿದ್ದಾನೆ. ಕೆಲವರನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆತಂದು ಕೆಲಸಕ್ಕೆ ಸೇರಿಸುವುದಾಗಿ ಹೇಳಿ ವಾಪಸ್ಸು ಕರೆದೊಯ್ದಿದ್ದಾನೆ. ಹಲವರನ್ನು ಅಬಕಾರಿ ಇಲಾಖೆಗೂ ಕರೆದೊಯ್ದು ಎಲ್ಲೆಡೆ ಸುತ್ತಾಡಿಸಿ ಕೆಲಸಕ್ಕೆ ನಿಯೋಜಿಸುವುದಾಗಿ ಹೇಳಿ ಮತ್ತೆ ವಾಪಸ್ಸು ಕರೆತಂದು ನಿಮಗೆ ನೀಡಿದ್ದ ನೇಮಕಾತಿ ಪತ್ರವನ್ನು ಮತ್ತೆ ಬೇರೆಡೆಗೆ ವರ್ಗಾಯಿಸಲಾಗಿದೆ ಎಂದು ಮತ್ತೊಂದು ನಕಲಿ ದಾಖಲೆ ಸೃಷ್ಠಿಸಿ ವಂಚನೆ ಮಾಡಿದ್ದಾನೆ. ಈತನ ವಂಚನೆ ಬಗೆದಷ್ಟು ಬೆಳಕಿಗೆ ಬರುತ್ತಿದೆ ಎಂದು ವಿವರಿಸಿದರು.

ಸಿಎಂ ಸಹಿಯನ್ನು ಸ್ಕ್ಯಾನ್ ಮಾಡಿ ಅಳವಡಿಕೆ:

ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿಯನ್ನು ಕೆಲವೊಂದು ದಾಖಲೆಗಳಲ್ಲಿ ಸ್ಕ್ಯಾನ್‌ನಿಂದ ನಕಲು ಮಾಡಿ ಅದನ್ನು ನೇಮಕಾತಿ ಪತ್ರದಲ್ಲಿ ಅಳವಡಿಸಿ ಸುಲಭವಾಗಿ ವಂಚಿಸಿದ್ದಾನೆ. ಮಂಡ್ಯ ಜಿಲ್ಲಾಧಿಕಾರಿ ಪರವಾಗಿ ಎಂಬ ಸಹಿಯನ್ನೂ ಮಾಡಿದ್ದಾನೆ. ಅದು ಯಾರದ್ದು ಎಂಬ ಬಗ್ಗೆ ಇನ್ನು ತನಿಖೆ ನಡೆಸುತ್ತಿದ್ದೇವೆ. ಇದೇ ರೀತಿ ಯಾವ್ಯಾವ ಇಲಾಖೆಗಳಲ್ಲಿ ವಂಚನೆ ಮಾಡಿದ್ದಾನೆ ಎಂಬ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಕಲಿ ದಾಖಲಾತಿಗಳು ವಶ:

ಆರೋಪಿ ವೆಂಕಟೇಶ ಸುಮಾರು ೨ ಕೋಟಿಗೂ ಹೆಚ್ಚು ಹಣವನ್ನು ವಂಚಿಸಿರಬಹುದು ಎಂದ ಅವರು, ಈತನ ಮನೆಯನ್ನು ಶೋಧಿಸಿಸಿದಾಗ ಅಬಕಾರಿ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಕರ್ನಾಟಕ ಲೋಕಸೇವಾ ಆಯೋಗ, ನಗರಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಹುದ್ದೆಗಳಿಗೆ ನೇಮಕಾತಿ ಮಾಡಿರುವ ಬಗ್ಗೆ ಸೃಷ್ಠಿಸಿರುವ ನಕಲಿ ದಾಖಲಾತಿಗಳು, ಹಾಜರಾತಿ ಪುಸ್ತಕಗಳು ಹಾಗೂ ಇತರೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ನಗದು ರೂಪದಲ್ಲಿ ಹೆಚ್ಚು ಹಣ ಸ್ವೀಕಾರ:

ಉದ್ಯೋಗ ಕೊಡಿಸುವುದಾಗಿ ನಂಬಿಸಿದ ವೆಂಕಟೇಶ ಹಲವರಿಂದ ನಗದು ರೂಪದಲ್ಲೇ ಹಣ ಪಡೆದಿದ್ದು, ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಡಿಜಿಟಲ್ ಪೇಮೆಂಟ್ ಪಡೆದಿದ್ದಾನೆ. ಈಗಾಗಲೇ ಆತನ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಈತನ ಪತ್ನಿ ವಿದೇಶಕ್ಕೆ ಹೋಗಲು ಸಿದ್ಧತೆ ನಡೆಸಿದ್ದರೆಂಬ ಮಾಹಿತಿಯೂ ಲಭ್ಯವಾಗಿದ್ದು, ಈ ಬಗ್ಗೆಯೂ ನಾವು ನಿಗಾ ವಹಿಸಿದ್ದೇವೆ ಎಂದು ತಿಳಿಸಿದರು.

ಇಬ್ಬರು ಪೊಲೀಸರ ವಿರುದ್ಧ ತನಿಖೆ:

ಆರೋಪಿ ವೆಂಕಟೇಶ್ ಜೊತೆಗೆ ಶಾಮೀಲಾಗಿದ್ದಾರೆಂಬ ಆರೋಪದ ಮೇರೆಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್‌ಐ ಚಿಕ್ಕಯ್ಯ ಹಾಗೂ ಸೆಂಟ್ರಲ್ ಠಾಣೆಯ ಮುಖ್ಯಪೇದೆ ಕಾಳೇನಹಳ್ಳಿ ಲೋಕೇಶ್ ಅವರ ವಿರುದ್ಧ ಡಿವೈಎಸ್ಪಿ ಮೂಲಕ ತನಿಖೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದರೆಂಬ ಸುಳಿವು ಸಿಕ್ಕಲ್ಲಿ ಅವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪೊಲೀಸ್ ಇಲಾಖೆಯಲ್ಲೇ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರೂ ಆರೋಪಿ ವೆಂಕಟೇಶ್‌ನಿಂದ ಹಣ ಕಳೆದುಕೊಂಡು ವಂಚನೆಗೆ ಒಳಗಾಗಿದ್ದಾರೆನ್ನಲಾಗಿದ್ದು, ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದರು.

ಅಪರ ಪೊಲೀಸ್ ಅಧೀಕ್ಷಕ ಸಿ.ಇ. ತಿಮ್ಮಯ್ಯ, ಡಿವೈಎಸ್ಪಿ ಎಲ್.ಕೆ. ರಮೇಶ್ ಇತರರು ಗೋಷ್ಠಿಯಲ್ಲಿದ್ದರು.

Share this article