ಕನ್ನಡಪ್ರಭ ವಾರ್ತೆ ಬೆಂಗಳೂರು
ಕಾರು ಚಾಲಕನೊಬ್ಬ ಅಪಘಾತ ಎಸಗಿ ಪರಾರಿಯಾಗಲು ಯತ್ನಿಸಿದಾಗ ಕಾರಿನ ಬಾನೆಟ್ ಏರಿದ ಕ್ಯಾಬ್ ಚಾಲಕನ ಸಹಿತ 400 ಮೀಟರ್‌ನಷ್ಟು ಮುಂದಕ್ಕೆ ಕಾರನ್ನು ಚಲಾಯಿಸಿರುವ ಘಟನೆ ನಡೆದಿದೆ.ಕ್ಯಾಬ್ ಚಾಲಕ ಕಾರಿನ ಬಾನೆಟ್ ಏರಿದಾಗ ಕಾರು ಚಾಲಕ ಅಪಾಯಕಾರಿಯಾಗಿ ಕಾರು ಚಾಲನೆ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜ.15ರಂದು ರಾತ್ರಿ ಈ ಘಟನೆ ನಡೆದಿದ್ದು ತಡವಾಗಿದೆ ಬೆಳಕಿಗೆ ಬಂದಿದೆ. ಈ ಸಂಬಂಧ ಕ್ಯಾಬ್ ಚಾಲಕ ಅಶ್ವತ್ಥ್ ನೀಡಿದ ದೂರಿನ ಮೇರೆಗೆ ಮೊಹಮದ್ ಮುನೀರ್ ಎಂಬಾತನ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಗಂಭೀರ ಸ್ವರೂಪವಲ್ಲದ (ಎನ್‌ಸಿಆರ್) ಪ್ರಕರಣ ದಾಖಲಿಸಲಾಗಿದೆ.ಏನಿದು ಘಟನೆ?:
ಜ. 15ರಂದು ರಾತ್ರಿ ಮಲ್ಲೇಶ್ವರದ ಸರ್ಕಲ್ ಮಾರಮ್ಮ ದೇವಸ್ಥಾನದ ಸರ್ಕಲ್‌ನಲ್ಲಿ ಅಶ್ವಥ್‌ನ ಕ್ಯಾಬ್‌ಗೆ ಮೊಹಮದ್ ಮುನೀರ್ ಕಾರು ಡಿಕ್ಕಿಯಾಗಿದೆ. ಈ ವೇಳೆ ಅಶ್ವಥ್ ಕಾರು ನಿಲ್ಲಿಸುವಂತೆ ಮುನೀರ್‌ಗೆ ಹೇಳಿದ್ದಾನೆ. ಈ ವೇಳೆ ಮುನೀರ್ ಕಾರಿನೊಂದಿಗೆ ಪರಾರಿಯಾಗಲು ಮುಂದಾದಾಗ ಕ್ಯಾಬ್ ಚಾಲಕ ಅಶ್ವಥ್, ಮುನೀರ್ ಕಾರಿನ ಮುಂದಕ್ಕೆ ಅಡ್ಡ ನಿಲ್ಲುತ್ತಾನೆ. ಈ ವೇಳೆ ಮುನೀರ್, ಅಶ್ವಥ್ ಅಡ್ಡ ನಿಂತಿರುವಾಗಲೇ ಕಾರನ್ನು ಮುಂದೆ ಚಲಾಯಿಸಿದ್ದಾನೆ. ಆಗ ಅಶ್ವಥ್ ಕಾರಿನ ಬಾನೇಟ್ ಮೇಲೆ ಎಗರಿದ್ದಾನೆ. ಆದರೂ ಕಾರು ನಿಲ್ಲಿಸದ ಮುನೀರ್, ಸರ್ಕಲ್ ಮಾರಮ್ಮ ದೇವಸ್ಥಾನದಿಂದ ಮಲ್ಲೇಶ್ವರ 18ನೇ ಕ್ರಾಸ್ ವರೆಗೆ ಸುಮಾರು 400 ಮೀಟರ್‌ನಷ್ಟು ದೂರ ಕಾರನ್ನು ಚಲಾಯಿಸಿದ್ದಾನೆ.ಅಷ್ಟರಲ್ಲಿ ಸ್ಥಳೀಯರು ಮುನೀರ್ ಕಾರನ್ನು ಬೆನ್ನಟ್ಟಿ ತಡೆದಿದ್ದಾರೆ. ಬಳಿಕ ಮುನೀರ್‌ನನ್ನು ಹಿಡಿದು 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಹೊಯ್ಸಳ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಕ್ಯಾಬ್ ಚಾಲಕ ನೀಡಿದ ದೂರು ಆಧರಿಸಿ ಎನ್‌ಸಿಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.