ಬೆಂಗಳೂರು : ಮನೆಯ ಸ್ನಾನದ ಕೊಣೆಯಲ್ಲಿ ಕೈ ಹಾಗೂ ಕತ್ತು ಕೊಯ್ದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುಬ್ರಹ್ಮಣ್ಯಪುರದ ಬೃಂದಾವನ ಲೇಔಟ್ ನಿವಾಸಿ ಪ್ರಭುದ್ಯಾ (20) ಮೃತರು. ಬುಧವಾರ ಸಂಜೆ ಮನೆಯ ಸ್ನಾನಗೃಹದಲ್ಲಿ ಕತ್ತು ಮತ್ತು ಕೈ ಕೊಯ್ದ ಸ್ಥಿತಿಯಲ್ಲಿ ಪ್ರಭುದ್ಯಾ ಮೃತದೇಹ ಪತ್ತೆಯಾಗಿದೆ. ಮಗಳ ಸಾವಿನ ಬಗ್ಗೆ ತಾಯಿ ಸೌಮ್ಯಾ ಅನುಮಾನ ವ್ಯಕ್ತಪಡಿಸಿದ್ದಾರೆ. ಮಗಳದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದಾರೆ.
ಕೌಟುಂಬಿಕ ಕಾರಣದಿಂದ ತಂದೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಮನೆಯಲ್ಲಿ ತಾಯಿ ಸೌಮ್ಯಾ ಮತ್ತು ಸಹೋದರನ ಜತೆಗೆ ಪ್ರಭುದ್ಯಾ ನೆಲೆಸಿದ್ದಳು. ತಾಯಿ ಸೌಮ್ಯಾ ಎನ್‌ಜಿಒ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಭುದ್ಯಾ ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಬಿಎ ಪದವಿ ವ್ಯಾಸಂಗ ಮಾಡುತ್ತಿದ್ದಳು. ಬುಧವಾರ ಮಧ್ಯಾಹ್ನ ತಾಯಿ ಸೌಮ್ಯಾಗೆ ಕರೆ ಮಾಡಿದ್ದ ಪ್ರಭುದ್ಯಾ, ಸ್ನೇಹಿತರ ಜತೆ ಪಾನಿಪೂರಿ ತಿನ್ನಲು ಹೊರಗೆ ತೆರಳುತ್ತಿದ್ದೇನೆ. ಸಂಜೆ 4 ಗಂಟೆ ವೇಳೆಗೆ ಮನೆ ಬರುತ್ತೇನೆ ಎಂದು ಹೇಳಿದ್ದಳು ಎಂದು ತಿಳಿದು ಬಂದಿದೆ.
ಸಹೋದರ ಮನೆಗೆ ಬಂದಾಗ ಘಟನೆ ಬೆಳಕಿಗೆ:
ಜಿಮ್‌ಗೆ ಹೋಗಿದ್ದ ಸಹೋದರ ಸಂಜೆ 7.30ರ ಸುಮಾರಿಗೆ ಮನೆಗೆ ವಾಪಸ್ ಬಂದಾಗ ಮನೆಯ ಮುಖ್ಯದ್ವಾರ ಲಾಕ್ ಆಗಿರುವುದು ಕಂಡು ಬಂದಿದೆ. ಮನೆಯ ಹಿಂಬದಿ ಬಾಗಿಲು ತೆರೆದಿದ್ದರಿಂದ ಮನೆ ಪ್ರವೇಶಿಸಿ ನೋಡಿದಾಗ ಸ್ನಾನದ ಕೋಣೆಯಲ್ಲಿ ಅಕ್ಕ ಪ್ರಭುದ್ಯಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ತಾಯಿ ಸೌಮ್ಯಾಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಬಳಿಕ ಮನೆಗೆ ಬಂದ ಸೌಮ್ಯಾ, ನೆರೆಹೊರೆಯವರ ಸಹಾಯ ಪಡೆದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಭುದ್ಯಾಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಪ್ರಭುದ್ಯಾ ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ರಹಸ್ಯ ಬಯಲು:
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮನೆ ಪರಿಶೀಲಿಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಭುದ್ಯಾ ಕತ್ತು ಮತ್ತು ಕೈ ಕೊಯ್ದು ರಕ್ತಸ್ರಾವವಾಗಿ ಮೃತಪಟ್ಟಿದ್ದಾಳೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಖಚಿತವಾಗಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಈ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.-ಬಾಕ್ಸ್-
ಮಗಳದು ಆತ್ಮಹತ್ಯೆಅಲ್ಲ, ಕೊಲೆ: ತಾಯಿ
ಇನ್ನು ಪ್ರಭುದ್ಯಾಳದು ಆತ್ಮಹತ್ಯೆಯಲ್ಲ. ಅವರು ಆ ರೀತಿಯ ಹುಡುಗಿ ಅಲ್ಲ. ಮಧ್ಯಾಹ್ನ ನನಗೆ ಕರೆ ಮಾಡಿ ಮಾತನಾಡಿದ್ದಳು. ನಾನು ಸಂಜೆ ಮನೆಗೆ ಬಂದಾಗ ಮುಖ್ಯದ್ವಾರ ಲಾಕ್ ಆಗಿತ್ತು. ಹಿಂದಿನ ಬಾಗಿಲು ತೆರೆದಿತ್ತು. ಕೂಡಲೇ ಮಗಳನ್ನು ಆಸ್ಪತ್ರೆಗೆ ಕರೆದೊಯ್ದೆ. ರಾಕ್ಷಸರು ನನ್ನ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಪ್ರಭುದ್ಯಾಳ ತಾಯಿ ಸೌಮ್ಯಾ ಗಂಭೀರ ಆರೋಪ ಮಾಡಿದ್ದಾರೆ. ಇನ್ನು ನಾನು ಮನೆಗೆ ಬಂದ ಸಂದರ್ಭದಲ್ಲಿ ಕಿಟಕಿಯಲ್ಲಿ ನೋಡಿದಾಗ ಮಗಳ ಮೊಬೈಲ್ ಫೋನ್ ಸೋಫಾ ಮೇಲಿತ್ತು. ಮಗಳನ್ನು ಆಸ್ಪತ್ರೆ ಕರೆದೊಯ್ದು ವಾಪಾಸ್ ಬಂದು ನೋಡಿದಾಗ ಮೊಬೈಲ್ ಇರಲಿಲ್ಲ. ಮೊಬೈಲ್ ಕಳ್ಳತನವಾಗಿದೆ ಎಂದೂ ಸೌಮ್ಯಾ ಆರೋಪಿಸಿದ್ದಾರೆ.
ಕತ್ತು ಮತ್ತು ಕೈ ಕೊಯ್ದು ಸ್ಥಿತಿಯಲ್ಲಿ ಪ್ರಭುದ್ಯಾಳ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ
-ಲೋಕೇಶ್, ದಕ್ಷಿಣ ವಿಭಾಗದ ಡಿಸಿಪಿ