ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಕ್ಕಳನ್ನೇ ಕೊಂದ ತಾಯಿ: ಪ್ರಿಯಕರನ ಜೊತೆ ಸೇರಿ ಕೃತ್ಯ

KannadaprabhaNewsNetwork | Published : Oct 14, 2024 1:21 AM

ಸಾರಾಂಶ

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾರೆಂದು ಹೆತ್ತ ಮಕ್ಕಳನ್ನೇ ತನ್ನ ಪ್ರಿಯಕರನ ಜೊತೆ ಸೇರಿ ತಾಯಿಯೇ ಹತ್ಯೆ ಮಾಡಿರುವ ಘಟನೆ ನಗರದ ಗೀತಾ ಮಂದಿರ ಬಡಾವಣೆಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾರೆಂದು ಹೆತ್ತ ಮಕ್ಕಳನ್ನೇ ತನ್ನ ಪ್ರಿಯಕರನ ಜೊತೆ ಸೇರಿ ತಾಯಿಯೇ ಹತ್ಯೆ ಮಾಡಿರುವ ಘಟನೆ ನಗರದ ಗೀತಾ ಮಂದಿರ ಬಡಾವಣೆಯಲ್ಲಿ ನಡೆದಿದೆ.

ಕಬಿಲ್(3) ಮತ್ತು ಕಬೀಲನ್(11 ತಿಂಗಳು) ಮೃತ ಮಕ್ಕಳು. ಸ್ವೀಟಿ (21) ಹಾಗೂ ಗ್ರಗೋರಿ ಫ್ರಾನ್ಸೀಸ್(30) ಬಂಧಿತರು. ಐಜೂರು ಠಾಣೆ ಪೊಲೀಸರು ಬಂಧಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಏನಿದು ಪ್ರಕರಣ?: ಆರೋಪಿ ಸ್ವೀಟಿಗೆ ಬೆಂಗಳೂರಿನ ಟ್ಯಾನಿ ರೋಡ್ ನ ಎಕೆ ಕಾಲೋನಿ ವಾಸಿ ಶಿವು ಎಂಬುವವರ ಜೊತೆ 4 ವರ್ಷಗಳ ಹಿಂದೆ ಮದುವೆ ಆಗಿತ್ತು. ಸ್ವೀಟಿ ಮನೆ ಕೆಲಸ ಮಾಡುತ್ತಿದ್ದಳು. ಕಳೆದ ಜುಲೈ 30ರಂದು ಸ್ವೀಟಿ ಪತಿ ಶಿವು ಅವರನ್ನು ಬಿಟ್ಟು ಮಕ್ಕಳೊಂದಿಗೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಳು. ಒಂದೂವರೆ ತಿಂಗಳ ನಂತರ ಒಬ್ಬಳೆ ಮನೆಗೆ ಹಿಂತಿರುಗಿದ ಸ್ವೀಟಿ, ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದ್ದಾಗಿ ಹೇಳಿದ್ದಳು. ಶಿವು ಅಲ್ಲಿಂದ ಮಕ್ಕಳನ್ನು ಮನೆಗೆ ಕರೆತಂದಿದ್ದರು. ಮನೆಯಿಂದ ಹೋಗಿದ್ದೇಕೆಂದು ಸ್ವೀಟಿಯನ್ನು ಕೇಳಿದಾಗ, ಬ್ಯಾಂಕಿನಲ್ಲಿಟ್ಟಿದ್ದ ಹಣ ಖರ್ಚು ಮಾಡಿದ್ದೇನೆ. ನೀವು ಏನಾದರು ಮಾಡುತ್ತೀರಿ ಎಂಬ ಭಯದಿಂದ ರಾಮನಗರಕ್ಕೆ ಹೋಗಿದ್ದೆ. ಇನ್ನು ಮುಂದೆ ಈ ರೀತಿ ಮಾಡುವುದಿಲ್ಲವೆಂದು ಪತಿ ಶಿವು ಅವರಿಗೆ ಹೇಳಿದ್ದಾಳೆ.

ಆನಂತರ ಸ್ವೀಟಿ ತಂದಿದ್ದ ಬ್ಯಾಗ್ ಅನ್ನು ಶಿವು ದೊಡ್ಡಮ್ಮಳ ಮಗಳಾದ ದೀಪಾ ಪರಿಶೀಲಿಸಿದಾಗ ಗ್ರೆಗೊರಿ ಫ್ರಾನ್ಸಿಸ್ ಎಂಬುವರ ಆಧಾರ್ ಕಾರ್ಡ್ ಪತ್ತೆಯಾಗಿದೆ. ಅದರಲ್ಲಿದ್ದ ಮೊಬೈಲ್ ನಂಬರ್‌ಗೆ ಫೋನ್ ಮಾಡಿದಾಗ ಗ್ರೆಗೊರಿ ಫ್ರಾನ್ಸಿಸ್ ತಾನು ಸ್ವೀಟಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ.

ಸೆ.15ರಂದು ಸ್ವೀಟಿ ಇಬ್ಬರು ಮಕ್ಕಳೊಂದಿಗೆ ಮತ್ತೆ ಮನೆಯಿಂದ ಹೊರಟು ಹೋಗಿದ್ದಳು. ಶಿವು ಅನುಮಾನಗೊಂಡು ಸೆ.17ರಂದು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ಕೊಟ್ಟಿದ್ದರು. ಪತ್ನಿ ಮತ್ತು ಮಕ್ಕಳನ್ನು ಹುಡುಕಿಕೊಂಡು ಶಿವು ಅಕ್ಟೋಬರ್ 12ರಂದು ರಾಮನಗರದ ಗೀತಾ ಮಂದಿರ ಬಡಾವಣೆಗೆ ಬಂದಿದ್ದರು. ಪತ್ನಿ ಮತ್ತು ಮಕ್ಕಳ ಫೋಟೋ ತೋರಿಸಿ ವಿಚಾರಿಸಿದಾಗ ಸ್ವೀಟಿ ಮತ್ತು ಗ್ರೆಗೊರಿ ಫ್ರಾನ್ಸಿಸ್ ಬಾಡಿಗೆ ಮನೆಯಲ್ಲಿ ವಾಸ ಇರುವುದು ಗೊತ್ತಾಗಿದೆ. ಈ ವೇಳೆ ಒಂದು ಮಗು ಅ.1ರಂದು, ಮತ್ತೊಂದು ಮಗು ಅ.7ರಂದು ಸಾವನ್ನಪ್ಪಿರುವುದು ತಿಳಿದು ಬಂದಿದೆ.

ಬಾಡಿಗೆ ಮನೆಯಲ್ಲಿ ವಾಸವಿದ್ದ ಸ್ವೀಟಿ, ಫ್ರಾನ್ಸಿಸ್ ಜೊತೆ ಸಂಭೋಗ ನಡೆಸುತ್ತಿದ್ದ ವೇಳೆ ಮಗು ಕಬೀಲನ್ ಅತ್ತಿದ್ದರಿಂದ ಸಿಟ್ಟಿಗೆದ್ದ ಸ್ವೀಟಿ, ಕಬೀಲನನ್‌ನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಸ್ವೀಟಿ ಮತ್ತು ಫ್ರಾನ್ಸಿಸ್, ಮಗು ಶವ ತೆಗೆದುಕೊಂಡು ಸ್ಮಶಾನಕ್ಕೆ ಬಂದಿದ್ದಾರೆ. ಸ್ಮಶಾನದ ಸಿಬ್ಬಂದಿ ಮಗು ದೇಹದ ಮೇಲಿನ ಗಾಯದ ಗುರುತುಗಳನ್ನು ನೋಡಿ ಅನುಮಾನಗೊಂಡಿದ್ದಾರೆ. ಮಗುವಿಗೆ‌ ಏನಾಗಿತ್ತು ಅಂತ ಸ್ವೀಟಿ ಮತ್ತು ಫ್ರಾನ್ಸಿಸ್​ಗೆ ಸಿಬ್ಬಂದಿ ಕೇಳಿದ್ದಾರೆ.

ಮಗುವಿಗೆ ಕಾಯಿಲೆ ಇತ್ತು, ಜ್ವರದಿಂದ ಬಳಲಿ ಸತ್ತು ಹೋಗಿದೆ ಅಂತ ಸ್ವೀಟಿ ಹೇಳಿದ್ದಾಳೆ. 10ರಿಂದ 12 ದಿನಗಳ ಅಂತರದಲ್ಲಿ ಎರಡು ಮಕ್ಕಳು ಸಾವನ್ನಪ್ಪಿರುವ ಬಗ್ಗೆ ಅನುಮಾನಗೊಂಡ ಸ್ಮಶಾನದ ಸಿಬ್ಬಂದಿ, ಮೊಬೈಲ್​ನಲ್ಲಿ ಮಗುವಿನ ದೇಹದ ಫೋಟೊ ತೆಗೆದಿದ್ದಾರೆ. ಬಳಿಕ ಪೊಲೀಸರಿಗೆ ಫೋಟೋ ನೀಡಿದ್ದಾರೆ.

ಪೊಲೀಸರು ಸ್ವೀಟಿ ಮತ್ತು ಫ್ರಾನ್ಸಿಸ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸತ್ಯ ಬಾಯಿಬಿಟ್ಟಿದ್ದಾರೆ. ಈ ಸಂಬಂಧ ಶಿವು ನೀಡಿರುವ ದೂರಿನ ಮೇರೆಗೆ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article