ಹೋಟೆಲಲ್ಲಿ ಹಣ ದೋಚುತ್ತಿದ್ದ ಕ್ಯಾಷಿಯರ್‌ನ ಹಿಡಿದ ಮಾಲಿಕ

KannadaprabhaNewsNetwork |  
Published : Feb 20, 2024, 01:46 AM ISTUpdated : Feb 20, 2024, 12:04 PM IST
ಹಣ | Kannada Prabha

ಸಾರಾಂಶ

ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಕ್ಯಾಷಿಯರ್‌ ಕೆಲಸಕ್ಕೆ ಸೇರಿಕೊಂಡು ಗ್ರಾಹಕರು ನೀಡುವ ಹಣವನ್ನು ದೋಚಿ ಪರಾರಿ ಆಗುತ್ತಿದ್ದ ಆರೋಪಿಯನ್ನು ಕೆ.ಆರ್‌.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಕ್ಯಾಷಿಯರ್‌ ಕೆಲಸಕ್ಕೆ ಸೇರಿಕೊಂಡು ಗ್ರಾಹಕರು ನೀಡುವ ಹಣವನ್ನು ದೋಚಿ ಪರಾರಿ ಆಗುತ್ತಿದ್ದ ಆರೋಪಿಯನ್ನು ಕೆ.ಆರ್‌.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬನಶಂಕರಿಯ ಕತ್ರಿಗುಪ್ಪೆ ನಿವಾಸಿ ರವಿಕುಮಾರ್‌(66) ಬಂಧಿತ. ಕಳೆದ ವರ್ಷ ಕೆ.ಆರ್‌.ಪುರದ ಭಟ್ಟಳ್ಳ್ಳಿಯ ಬಳಿಯ ನ್ಯೂ ಉಡುಪಿ ಗ್ರ್ಯಾಂಡ್‌ ಹೋಟೆಲ್‌ನಲ್ಲಿ ಕ್ಯಾಷಿಯರ್‌ ಕೆಲಸಕ್ಕೆ ಸೇರಿದ್ದ. ನಾಲ್ಕೈದು ದಿನ ಕೆಲಸ ಮಾಡಿ ₹1 ಲಕ್ಷ ನಗದು ದೋಚಿ ಪರಾರಿಯಾಗಿದ್ದ. ಈ ಸಂಬಂಧ ಹೋಟೆಲ್‌ ಮಾಲೀಕ ಸತೀಶ್‌ ಶೆಟ್ಟಿ ದೂರು ನೀಡಿದ್ದರು.

ಇತ್ತೀಚೆಗೆ ದೇವನಹಳ್ಳಿಯ ನಂದಗೋಕುಲ ಹೋಟೆಲ್‌ನಲ್ಲಿ ಆರೋಪಿ ರವಿಕುಮಾರ್‌ ಕ್ಯಾಷಿಯರ್‌ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ದೂರುದಾರ ಸತೀಶ್‌ ಶೆಟ್ಟಿ, ಸ್ಥಳಕ್ಕೆ ತೆರಳಿ ಆರೋಪಿಯನ್ನು ಹಿಡಿದು ಕೆ.ಆರ್‌.ಪುರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಎಂಕಾಂ ಪದವೀಧರನಾದ ರವಿಕುಮಾರ್‌ ದೊಡ್ಡ ಹೋಟೆಲ್‌ಗಳಿಗೆ ತೆರಳಿ ಮಾಲೀಕರನ್ನು ಭೇಟಿಯಾಗುತ್ತಿದ್ದ. ನಾನು ಸ್ನಾತಕೋತ್ತರ ಪದವಿಧರನಾಗಿದ್ದು, ಈ ಹಿಂದೆ ಹಲವು ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಕ್ಯಾಷಿಯರ್‌ ಕೆಲಸ ಮಾಡಿದ ಅನುಭವವಿದೆ. 

ಈಗ ಮನೆಯಲ್ಲಿ ಆರ್ಥಿಕ ಸಂಕಷ್ಟ ಇರುವುದರಿಂದ ಕೆಲಸಕ್ಕೆ ಪ್ರಯತ್ನಿಸುತ್ತಿದ್ದೇನೆ. ನಿಮ್ಮ ಹೋಟೆಲ್‌ನಲ್ಲಿ ಕೆಲಸ ಕೊಡಿ ಎಂದು ತನ್ನ ಕಷ್ಟ ಹೇಳಿಕೊಂಡು ಕೆಲಸಗಿಟ್ಟಿಸುತ್ತಿದ್ದ.

ಬಳಿಕ ಗ್ರಾಹಕರು ನಗದು ರೂಪದಲ್ಲಿ ನೀಡುವ ಹಣ ಹಾಗೂ ಹೋಟೆಲ್‌ನ ಇತರೆ ಖರ್ಚಿಗೆ ಸಂಗ್ರಹಿಸಿದ ನಗದು ಹಣವನ್ನು ದೋಚಿ ಪರಾರಿಯಾಗುತ್ತಿದ್ದ. 

ಇದೇ ರೀತಿ ಹಲವು ಹೋಟೆಲ್‌ಗಳಲ್ಲಿ ಕೆಲಸಕ್ಕೆ ಸೇರಿ ಹಣ ದೋಚಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇದೀಗ ಸಿಕ್ಕಿಬಿದ್ದಿರುವ ಆರೋಪಿ ರವಿಕುಮಾರ್‌ನನ್ನು ಕೆ.ಆರ್‌.ಪುರ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೂಜಾಟದ ಹುಚ್ಚು: ಆರೋಪಿ ರವಿಕುಮಾರ್‌ ಜೂಜಾಟ ಹಾಗೂ ಷೇರು ಮಾರುಕಟ್ಟೆ ಚಟಕ್ಕೆ ಬಿದ್ದಿದ್ದ. ಹೋಟೆಲ್‌ಗಳಲ್ಲಿ ದೋಚಿದ ಹಣವನ್ನು ಜೂಜಾಡಿ ಕಳೆಯುತ್ತಿದ್ದ. ಅಂತೆಯೇ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರ ವಿಚಾರಣೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!