ಬೆಂಗಳೂರು : ರಸ್ತೆಗೆ ಬಿದ್ದವನ ಮೇಲೆಯೇ ಕಾರು ಹತ್ತಿಸಿಕೊಂಡು ಹೋಗಿದ್ದ ಚಾಲಕನ ಸೆರೆ

KannadaprabhaNewsNetwork |  
Published : Nov 19, 2024, 12:50 AM ISTUpdated : Nov 19, 2024, 04:38 AM IST
ಅಪಘಾತ | Kannada Prabha

ಸಾರಾಂಶ

ಇತ್ತೀಚೆಗೆ ತಿಗಳರಪಾಳ್ಯ ಮುಖ್ಯರಸ್ತೆಯ ಕೆಂಪೇಗೌಡ ವೃತ್ತದಲ್ಲಿ ನಡೆದಿದ್ದ ಅಪಘಾತದ ವೇಳೆ ಪರಾರಿಯಾಗಿದ್ದ ಕಾರು ಚಾಲಕನನ್ನು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಇತ್ತೀಚೆಗೆ ತಿಗಳರಪಾಳ್ಯ ಮುಖ್ಯರಸ್ತೆಯ ಕೆಂಪೇಗೌಡ ವೃತ್ತದಲ್ಲಿ ನಡೆದಿದ್ದ ಅಪಘಾತದ ವೇಳೆ ಪರಾರಿಯಾಗಿದ್ದ ಕಾರು ಚಾಲಕನನ್ನು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಖಾಜಾ ಮೊಹಿದ್ದೀನ್​ (24) ಬಂಧಿತ ಕಾರು ಚಾಲಕ. ನ.13ರಂದು ಮುಂಜಾನೆ ಸುಮಾರು 2ಕ್ಕೆ ತಿಗಳರಪಾಳ್ಯ ಮುಖ್ಯರಸ್ತೆಯ ಕೆಂಪೇಗೌಡ ವೃತ್ತದಲ್ಲಿ ದ್ವಿಚಕ್ರ ವಾಹನಕ್ಕೆ ಸ್ವಿಫ್ಟ್‌ ಕಾರೊಂದು ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಸವಾರ ಶಶಿಕುಮಾರ್‌(20) ಮೃತಟ್ಟಿದ್ದರು.

ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಸಂಚಾರ ಪೊಲೀಸರು ಕಾರನ್ನು ಪತ್ತೆಹಚ್ಚಿ ಜಪ್ತಿ ಮಾಡಿದ್ದು, ಅದರ ಚಾಲಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸವಾರ ಮೇಲೆ ಕಾರು ಹತ್ತಿಸಿ ಎಸ್ಕೇಪ್‌:

ಬಾಗೇಪಲ್ಲಿ ಮೂಲದ ಶಶಿಕುಮಾರ್‌ ಪೀಣ್ಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ನ.13ರ ಮುಂಜಾನೆ ದ್ವಿಚಕ್ರ ವಾಹನದಲ್ಲಿ ಮನೆ ಕಡೆಗೆ ಬರುತ್ತಿದ್ದರು. ಮಾರ್ಗ ಮಧ್ಯೆ ತಿಗಳರಪಾಳ್ಯ ಮುಖ್ಯರಸ್ತೆಯ ಕೆಂಪೇಗೌಡ ವೃತ್ತದಲ್ಲಿ ಎದುರಿನಿಂದ ಕಾರೊಂದು ವೇಗವಾಗಿ ಬರುವುದನ್ನು ನೋಡಿ ಬ್ರೇಕ್‌ ಹಾಕಿದ ಪರಿಣಾಮ ಜಾರಿ ರಸ್ತೆಗೆ ಬಿದ್ದಿದ್ದಾರೆ.

ಈ ವೇಳೆ ಚಾಲಕ ಕಾರನ್ನು ಶಶಿಕುಮಾರ್‌ ಮೇಲೆಯೇ ಹತ್ತಿಸಿಕೊಂಡು ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಸವಾರ ಶಶಿಕುಮಾರ್‌ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು.

ಅಪಘಾತ ಬಳಿಕ ಊರಿಗೆ ಪರಾರಿ

ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲನೆ ವೇಳೆ ಕಾರೊಂದರ ದೃಶ್ಯ ಸೆರೆಯಾಗಿತ್ತು. ಈ ಕಾರಿನ ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಮಾಲೀಕ ಮಂಜುನಾಥನನ್ನು ಪತ್ತೆಹಚ್ಚಿದ್ದಾರೆ. ಬಳಿಕ ಈತ ನೀಡಿದ ಮಾಹಿತಿ ಮೇರೆಗೆ ತಲೆಮರೆಸಿಕೊಂಡಿದ್ದ ಕಾರು ಚಾಲಕ ಖಾಜಾ ಮೊಹಿದ್ದೀನ್​ನನ್ನು ಪತ್ತೆ ಮಾಡಿ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV