ಎರಡು ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಎರಡು ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

ಅಪ್ರಾಪ್ತನೊಬ್ಬ ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸಿ ಮೂವರು ಪಾದಚಾರಿಗಳಿಗೆ ಡಿಕ್ಕಿ ಹೊಡೆದು, ಉರುಳಿ ಬಿದ್ದು ಮೃತಪಟ್ಟಿರುವ ಘಟನೆ ಬಳ್ಳಾರಿ ರಸ್ತೆಯ ಚಿಕ್ಕಜಾಲದ ದೇವನಹಳ್ಳಿ (ಸದಹಳ್ಳಿ) ಟೋಲ್ ಪ್ಲಾಜಾ ಬಳಿ ಭಾನುವಾರ ಸಂಜೆ ನಡೆದಿದೆ.

ಕೋಲಾರ ಮೂಲದ ರುದ್ರೇಶ್‌ (17) ಮೃತ ವಿದ್ಯಾರ್ಥಿ. ರುದ್ರೇಶ್‌ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಮೊದಲನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಇವರ ತಂದೆ ಸುರೇಶ್‌ ಅವರು ಹೋಟೆಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಾರೆ. ತಂದೆಯೊಂದಿಗೆ ರುದ್ರೇಶ್‌ ಭಾನುವಾರ ದೇವನಹಳ್ಳಿಗೆ ಬಂದಿದ್ದ ಎಂದು ತಿಳಿದುಬಂದಿದೆ. ಸುರೇಶ್‌ ಅವರು ಕೆಲಸದಲ್ಲಿ ನಿರತರಾಗಿದ್ದಾಗ, ರುದ್ರೇಶ್ ತಮ್ಮ ತಂದೆಯ ಬೈಕ್‌ ತೆಗೆದುಕೊಂಡು ಟೋಲ್ ಕಡೆಗೆ ಸವಾರಿ ಮಾಡಲು ಹೋಗಿದ್ದು, ಈ ವೇಳೆ ಅತಿವೇಗದಲ್ಲಿ ಬೈಕ್‌ ಚಲಾಯಿಸುತ್ತಾ ಟೋಲ್ ಬಳಿ ರಸ್ತೆ ದಾಟುತ್ತಿದ್ದ ಮಹಿಳೆ ಸೇರಿದಂತೆ ಮೂವರು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದ್ದಾನೆ.

ಬಳಿಕ ತಾನು ಉರುಳಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ರುದ್ರೇಶ್‌ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ. ಅಪಘಾತದಲ್ಲಿ ಅಂಬಿಕಾ ಎಂಬ ಪಾದಚಾರಿಗೆ ಕಾಲು ಮುರಿದಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇತರ ಇಬ್ಬರು ಪಾದಚಾರಿಗಳು ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಚಿಕ್ಕಜಾಲ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾದಚಾರಿ ಮಾರ್ಗಕ್ಕೆ ಡಿಕ್ಕಿ,ಸಾವು: ಮತ್ತೊಂದು ಪ್ರಕರಣದಲ್ಲಿ ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಬಿದ್ದು ದ್ವಿಚಕ್ರ ಸವಾರನೊಬ್ಬ ಮೃತಪಟ್ಟಿರುವ ಘಟನೆ ಜಯಮಹಲ್ ಮುಖ್ಯರಸ್ತೆಯ ಟಿ.ವಿ. ಟವರ್ ಜಂಕ್ಷನ್ ಬಳಿ ಭಾನುವಾರ ಮಧ್ಯರಾತ್ರಿ ನಡೆದಿದೆ.

ಮತ್ತೊಂದು ಅಪಘಾತದಲ್ಲಿ ಇನ್ನೊಬ್ಬ ವಿದ್ಯಾರ್ಥಿ ಬಲಿ

ಕೆ.ಆರ್. ಪುರದಲ್ಲಿರುವ ಖಾಸಗಿ ಕಾಲೇಜಿನಲ್ಲಿ ಎಂಸಿಎ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಾಗರ್‌ ಭಾನುವಾರ ಮಧ್ಯರಾತ್ರಿ ಸ್ನೇಹಿತನ ಮನೆಗೆ ಹೋಗಿ 12.30 ರ ಸುಮಾರಿಗೆ ತನ್ನ ಮನೆಗೆ ಸ್ಕೂಟರ್‌ನಲ್ಲಿ ಹಿಂತಿರುಗುತ್ತಿದ್ದಾಗ ಜಯಮಹಲ್ ಮುಖ್ಯರಸ್ತೆಯ ಟಿ.ವಿ. ಟವರ್ ಜಂಕ್ಷನ್ ಬಳಿ ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು, ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಪರೀಕ್ಷಿಸಿದ ವೈದ್ಯರು ಆತ ಮಾರ್ಗಮಧ್ಯೆದಲ್ಲಿಯೇ ಮೃತಪಟ್ಟಿದ್ದಾನೆ ಎಂದು ದೃಢಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಆರ್‌.ಟಿ ನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.