ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ ಉದ್ಯಮಿಯೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ 8.3 ಕೋಟಿ ರು. ವಂಚನೆ ಮಾಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ ಉದ್ಯಮಿಯೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ 8.3 ಕೋಟಿ ರು. ವಂಚನೆ ಮಾಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಬನಶಂಕರಿ ನಿವಾಸಿ ರಾಜೇಂದ್ರ ನಾಯ್ಡು (71) ವಂಚನೆಗೊಳಗಾದ ಉದ್ಯಮಿ. ರಾಜೇಂದ್ರ ನಾಯ್ಡು ಅವರು, ಈ ಹಿಂದೆ ರಿಲಯನ್ಸ್ ಕ್ಯಾಪಿಟಲ್‌ನಲ್ಲಿ ಸಾಲ ಪಡೆದು ಅದನ್ನು ಸಂಪೂರ್ಣವಾಗಿ ತೀರಿಸಿದ್ದರು. ಈ ಮಾಹಿತಿಯನ್ನು ಸಂಗ್ರಹಿಸಿಕೊಂಡಿದ್ದ ಸೈಬರ್ ವಂಚಕರ ಜಾಲ, ನಾಯ್ಡು ಅವರಿಗೆ ಸೆ.15 ರಂದು ಕರೆ ಮಾಡಿ, ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿದೆ, ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭ ದೊರೆಯುತ್ತದೆ ಎಂದು ನಂಬಿಸಿದ್ದರು. ಅದರ ಬಗ್ಗೆ ಆಸಕ್ತಿ ತೋರಿದ ಉದ್ಯಮಿಗೆ ಒಂದು ವಾಟ್ಸ್‌ಆಪ್ ಲಿಂಕ್ ಕಳುಹಿಸಿ ಮೊಬೈಲ್ ಆ್ಯಪ್ (RARCLLPRO) ಇನ್ಸ್ಟಾಲ್ ಮಾಡುವಂತೆ ಸೂಚಿಸಿದ್ದರು. ಆ ಆ್ಯಪ್‌ನಲ್ಲಿ ಹೂಡಿಕೆ ವಿವರಗಳು ತೋರಿಸುತ್ತಿದ್ದುದರಿಂದ ಅದನ್ನು ನಂಬಿದ ಉದ್ಯಮಿ ಮೊದಲಿಗೆ 25 ಲಕ್ಷ ರು. ಅನ್ನು ಆರ್‌ಟಿಜಿಎಸ್ ಮೂಲಕ ವಂಚಕರು ನೀಡಿದ್ದ ಖಾತೆಗೆ ವರ್ಗಾಯಿಸಿದ್ದರು.
ಹಣ ವಿತ್‌ಡ್ರಾ ಮಾಡಲು ಸಾಧ್ಯವಾಗಿರಲಿಲ್ಲ: ಆ್ಯಪ್‌ನಲ್ಲಿ ಹೂಡಿಕೆ ಯಶಸ್ವಿಯಾಗಿದೆ ಎಂದು ತೋರಿದ ಬಳಿಕ ಉದ್ಯಮಿ ಹಂತ ಹಂತವಾಗಿ ಒಟ್ಟು 8.3 ಕೋಟಿಯನ್ನು ಹೂಡಿಕೆ ಮಾಡಿದ್ದರು. ಆ್ಯಪ್‌ನಲ್ಲಿ ನಿಮ್ಮ ಮೊತ್ತಕ್ಕೆ 59.4 ಕೋಟಿ ರು. ಲಾಭಾಂಶ ಬಂದಿದೆ ಎಂದು ತೋರಿಸುತ್ತಿತ್ತು. ಉದ್ಯಮಿ ಇದರಲ್ಲಿ 15 ಕೋಟಿ ರು. ವಿತ್‌ಡ್ರಾ ಮಾಡಲು ಪ್ರಯತ್ನಿಸಿದಾಗ ಸಾಧ್ಯವಾಗಿರಲಿಲ್ಲ. ಇದರಿಂದ ಅವರಿಗೆ ವಂಚನೆಯ ಬಗ್ಗೆ ಅನುಮಾನ ಬಂದಿದೆ.ಹಣ ವಿತ್‌ಡ್ರಾ ಮಾಡಲು ಸಾಧ್ಯವಾಗದ ಬಗ್ಗೆ ವಂಚಕರನ್ನು ಪ್ರಶ್ನಿಸಿದಾಗ ಅದಕ್ಕೆ ಶೇ.18 ರಷ್ಟು ಸೇವಾ ಶುಲ್ಕವಾಗಿ 2.70 ಕೋಟಿ ರು. ಪಾವತಿಸಬೇಕು ಎಂದು ಒತ್ತಾಯಿಸಿದ್ದರು. ಇದರಿಂದ ತಾನು ಮೋಸ ಹೋಗಿರುವುದಾಗಿ ಅರಿತ ಉದ್ಯಮಿ ತಕ್ಷಣ ಸೈಬರ್ ಕ್ರೈಂ ಸಹಾಯವಾಣಿ 1930 ಕರೆ ಮಾಡಿ ದೂರು ದಾಖಲಿಸಿದ್ದರು. ಪೊಲೀಸರು ವಂಚಕರ ಖಾತೆಯಲ್ಲಿ ಇದ್ದ ಸುಮಾರು 64 ಲಕ್ಷ ರು. ಅನ್ನು ಫ್ರೀಜ್ ಮಾಡಿದ್ದಾರೆ. ಬಳಿಕ ಉದ್ಯಮಿ ಈ ಸಂಬಂಧ ನ.29 ರಂದು ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಸೈಬರ್ ವಂಚಕರ ಜಾಲ ಪತ್ತೆಗೆ ತನಿಖೆ ಮುಂದುವರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ರಾಮಭಕ್ತನಾಗಿರುವ ಉದ್ಯಮಿ!
ರಾಜೇಂದ್ರ ನಾಯ್ಡು ಅವರು ಅಯೋಧ್ಯೆಯ ರಾಮ ಭಕ್ತರಾಗಿದ್ದಾರೆ. ಅವರು ಈ ಹಿಂದೆ ಅಯೋಧ್ಯೆಯ ರಾಮಮಂದಿರಕ್ಕೆ ಬೆಳ್ಳಿ ಪೂಜಾ ಸಾಮಗ್ರಿಗಳನ್ನು ದೇಣಿಗೆ ನೀಡಿದ್ದರು ಎಂದು ತಿಳಿದುಬಂದಿದೆ.ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಬಂದ ಲಾಭದ ಹಣವನ್ನು ದಾನದ ಕಾರ್ಯಗಳಿಗೆ ಬಳಸಬಹುದು ಎಂಬ ಉದ್ದೇಶದಿಂದ ಹೂಡಿಕೆಗೆ ಉದ್ಯಮಿ ಮುಂದಾಗಿದ್ದರು ಎನ್ನಲಾಗಿದೆ.
