ಮುನಿರತ್ನ ವಿರುದ್ಧದ ದೂರುದಾರೆಯಿಂದ ಕೆಲ ರಾಜಕಾರಣಿಗಳ ಸೆಕ್ಸ್‌ ವಿಡಿಯೋ ಸಲ್ಲಿಕೆ!

Published : Oct 03, 2024, 07:46 AM ISTUpdated : Oct 03, 2024, 07:47 AM IST
Muniratna

ಸಾರಾಂಶ

ಅತ್ಯಾಚಾರ ಆರೋಪ ಎದುರಿಸುತ್ತಿರುವ ಶಾಸಕ ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಆರೋಪ ಕೇಳಿಬಂದಿದ್ದು, ಸಂತ್ರಸ್ತೆ ಕೆಲ ರಾಜಕಾರಣಿಗಳು ಮತ್ತು ಅಧಿಕಾರಿಗಳ ಅಶ್ಲೀಲ ವಿಡಿಯೋಗಳನ್ನು ಎಸ್‌ಐಟಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು : ಅತ್ಯಾಚಾರ ಪ್ರಕರಣ ಸಂಬಂಧ ಬಂಧಿತರಾಗಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ವಿರುದ್ಧದ ಆರೋಪಕ್ಕೆ ಪೂರಕವಾಗಿ ಕೆಲ ರಾಜಕಾರಣಿಗಳ ಅಶ್ಲೀಲ ವಿಡಿಯೋ ಮತ್ತು ಭಾವಚಿತ್ರಗಳನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ದೂರುದಾರೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ನೋಟಿಸ್ ಹಿನ್ನೆಲೆಯಲ್ಲಿ ನಗರದ ಅರಮನೆ ರಸ್ತೆಯಲ್ಲಿರುವ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಕೇಂದ್ರ ಕಚೇರಿಯಲ್ಲಿ ಎಸ್‌ಐಟಿ ಮುಂದೆ ಸಂತ್ರಸ್ತೆ ವಿಚಾರಣೆಗೆ ಹಾಜರಾಗಿದ್ದರು. ಆ ವೇಳೆ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ ಬ್ಲ್ಯಾಕ್‌ಮೇಲ್ ಮೂಲಕ ಕೆಲ ರಾಜಕಾರಣಿಗಳು ಹಾಗೂ ಪೊಲೀಸ್ ಸೇರಿದಂತೆ ಕೆಲ ಅಧಿಕಾರಿಗಳನ್ನು ಮುನಿರತ್ನ ಹನಿಟ್ರ್ಯಾಪ್ ಮಾಡಿಸಿದ್ದರು ಎಂದು ಸಂತ್ರಸ್ತೆ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.

‘ನನ್ನ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿ ಹನಿಟ್ರ್ಯಾಪ್‌ ಕೃತ್ಯಕ್ಕೆ ಶಾಸಕರು ಬಳಸಿಕೊಂಡಿದ್ದಾರೆ. ಜೀವ ಭೀತಿಯಿಂದ ಅನಿರ್ವಾಯವಾಗಿ ಅವರು ಹೇಳಿದಂತೆ ಕೇಳಿದೆ. ನಾನಾಗಿಯೇ ನಾನು ತಪ್ಪು ಮಾಡಿಲ್ಲ’ ಎಂದು ಸಂತ್ರಸ್ತೆ ಹೇಳಿದ್ದಾರೆ ಎನ್ನಲಾಗಿದೆ.

ಈ ವೇಳೆ ತಮ್ಮ ಆರೋಪಕ್ಕೆ ಪೂರಕವಾಗಿ ಕೆಲ ಅಶ್ಲೀಲ ವಿಡಿಯೋ ಹಾಗೂ ಭಾವಚಿತ್ರಗಳನ್ನು ಆಕೆ ಸಲ್ಲಿಸಿದ್ದಾರೆ. ಇವುಗಳಲ್ಲಿ ಮಾಜಿ ಶಾಸಕ, ಬಿಬಿಎಂಪಿ ಮಾಜಿ ಸದಸ್ಯೆಯೊಬ್ಬರ ಪತಿ ಹಾಗೂ ಮೂವರು ಪೊಲೀಸ್‌ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಕೆಲವರ ಅಶ್ಲೀಲ ವಿಡಿಯೋಗಳು ಮತ್ತು ಪೋಟೋಗಳಿವೆ ಎಂದು ಮೂಲಗಳು ಮಾಹಿತಿ ನೀಡಿವೆ.

ಮೊಬೈಲ್‌ ಜಪ್ತಿ ಮಾಡಿ ಎಸ್‌ಐಟಿ:

ಇನ್ನು ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಮೊಬೈಲ್ ಅನ್ನು ಜಪ್ತಿ ಮಾಡಿ ಪರಿಶೀಲನೆ ಸಲುವಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಎಸ್‌ಐಟಿ ಅಧಿಕಾರಿಗಳು ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಚಾರಣೆ ಬಳಿಕ ಸಂತ್ರಸ್ತೆಯ ಮೊಬೈಲ್‌ ಅನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಮೊಬೈಲ್‌ನಲ್ಲಿ ಸಹ ಕೆಲವು ಪುರಾವೆಗಳು ಲಭಿಸಿವೆ ಎನ್ನಲಾಗಿದೆ.

ಶಾಸಕರ ವಿರುದ್ಧ ವೇಲು ನಾಯ್ಕರ್ ಸಾಕ್ಷಿ:

ದೂರುದಾರೆ ಬಳಿಕ ಎಸ್‌ಐಟಿ ಮುಂದೆ ಶಾಸಕ ಮುನಿರತ್ನ ವಿರುದ್ಧ ಬಿಬಿಎಂಪಿ ಮಾಜಿ ಸದಸ್ಯ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ಸ್ಥಳೀಯ ಕಾಂಗ್ರೆಸ್ ಮುಖಂಡ ವೇಲು ನಾಯ್ಕರ್ ಸಹ ಹೇಳಿಕೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ನೋಟಿಸ್ ನೀಡಿದ ಕಾರಣ ವಿಚಾರಣೆಗೆ ವೇಲು ನಾಯ್ಕರ್ ಹಾಜರಾಗಿದ್ದರು. ಆ ವೇಳೆ ಶಾಸಕರ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಕೆಲ ದಾಖಲೆಗಳನ್ನು ಎಸ್‌ಐಟಿಗೆ ವೇಲು ಸಲ್ಲಿಸಿದ್ದಾರೆ. ಅಲ್ಲದೆ ತಮ್ಮ ವಿರುದ್ಧ ಶಾಸಕರು ಜಾತಿ ನಿಂದನೆ ಮಾಡಿರುವ ಆರೋಪಕ್ಕೂ ಕೂಡ ದೂರುದಾರರಾಗಿರುವ ವೇಲು ಪುರಾವೆ ಒದಗಿಸಿದ್ದಾರೆ ಎಂದು ತಿಳಿದು ಬಂದಿದೆ.

ಉಲ್ಟಾ ಹೊಡೆದ ಮಹಿಳೆ- ಮುನಿರತ್ನ ಆಪ್ತನ ಹೇಳಿಕೆ:

‘ಶಾಸಕರ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಈಗ ದೂರು ನೀಡಿರುವ ಮಹಿಳೆ ಸಹ ಶಾಸಕರಿಂದ ಉಪಯೋಗ ಪಡೆದಿದ್ದಾರೆ’ ಎಂದು ಎಸ್‌ಐಟಿಗೆ ಶಾಸಕ ಮುನಿರತ್ನರವರ ಆಪ್ತ ಸಹಾಯಕ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.

‘ವೈಯಕ್ತಿಕ ಕೆಲಸಗಳ ನಿಮಿತ್ತ ಹಲವು ಬಾರಿ ಶಾಸಕರನ್ನು ದೂರುದಾರ ಮಹಿಳೆ ಭೇಟಿಯಾಗಿದ್ದರು. ಆಗ ಆಕೆಗೆ ಶಾಸಕರು ನೆರವಾಗಿದ್ದರು. ಅಲ್ಲದೆ ಆ ಮಹಿಳೆಯಿಂದ ಹನಿಟ್ರ್ಯಾಪ್‌ ಗೊಳಗಾದ ಪೊಲೀಸರು ಸೇರಿದಂತೆ ಕೆಲ ಅಧಿಕಾರಿಗಳಿಗೆ ಶಾಸಕರೇ ಬುದ್ಧಿಮಾತು ಹೇಳಿದ್ದರು. ಮಹಿಳೆಯೇ ಉಪಕಾರ ಪಡೆದು ಈಗ ಉಲ್ಟಾ ಹೊಡೆದಿದ್ದಾರೆ’ ಎಂದು ಶಾಸಕರ ಆಪ್ತ ಹೇ‍ಳಿರುವುದಾಗಿ ತಿಳಿದು ಬಂದಿದೆ.

ಖಾಸಗಿ ಸುದ್ದಿವಾಹಿನಿ ಪತ್ರಕರ್ತ ಸಾಕ್ಷಿ?:

ಶಾಸಕ ಮುನಿರತ್ನ ಅತ್ಯಾಚಾರ ಪ್ರಕರಣದಲ್ಲಿ ಖಾಸಗಿ ಸುದ್ದಿವಾಹಿನಿಯೊಂದರ ಪತ್ರಕರ್ತನನ್ನು ಎಸ್‌ಐಟಿ ಸಾಕ್ಷಿಯಾಗಿ ಪರಿಗಣಿಸಿದೆ ಎನ್ನಲಾಗಿದೆ.

ಮೊದಲು ಶಾಸಕರಿಗೆ ಆಪ್ತನಾಗಿದ್ದ ಆತ, ಆನಂತರ ಅವರಿಂದ ದೂರವಾಗಿದ್ದ. ಅಲ್ಲದೆ ‘ರಹಸ್ಯ ಕಾರ್ಯಾಚರಣೆ’ ಮೂಲಕ ಕೆಲ ರಾಜಕಾರಣಿಗಳು ಹಾಗೂ ಪೊಲೀಸರು ಸೇರಿದಂತೆ ಕೆಲ ಅಧಿಕಾರಿಗಳಿಗೆ ಸಂಬಂಧಿಸಿದ ವೈಯಕ್ತಿಕ ಮಾಹಿತಿಯನ್ನು ಆತ ಸಂಗ್ರಹಿಸಿದ್ದು, ಇವುಗಳನ್ನು ಮುನಿರತ್ನರವರಿಗೆ ಆ ಪತ್ರಕರ್ತ ಕೊಟ್ಟಿದ್ದ. ಅತ್ಯಾಚಾರ ಪ್ರಕರಣದ ದೂರುದಾರ ಮಹಿಳೆಗೂ ಆತ ಪರಿಚಿತನಾಗಿದ್ದ ಎನ್ನಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಖರ್ಚಿಗೆ ಹಣ ನೀಡದ್ದಕ್ಕೆ ಪತ್ನಿಯನ್ನು ಕೊಂದು ಅಪಘಾತದ ಕಥೆ ಕಟ್ಟಿದ ಪತಿರಾಯ
ಕಾರು ಡಿಕ್ಕಿಯಾಗಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಸಾವು