ಸಾಲ ಕೊಟ್ಟಿದ್ದ ಹಣ ಕೇಳಲು ಬಂದ ಮಹಿಳೆ, ಮಗು ಬರ್ಬರ ಹತ್ಯೆ!

KannadaprabhaNewsNetwork |  
Published : Mar 21, 2024, 01:03 AM IST
20ಕೆಎಂಎನ್ ಡಿ30 | Kannada Prabha

ಸಾರಾಂಶ

ಅಲೆಮಾರಿ ಜನಾಂಗದ ಜಯಮ್ಮ ಊರು ಊರು ಅಲೆದು ಭಿಕ್ಷಾಟನೆ ಮಾಡುತ್ತಿದ್ದರು. ಆದಿಚುಂಚನಗಿರಿಯಲ್ಲಿ ತಿಂಗಳುಗಟ್ಟಲೆ ತಂಗುತ್ತಿದ್ದರು. ಆಗ ತಾಲೂಕಿನ ಆದಿಚುಂಚನಗಿರಿ ಸಮೀಪದ ಚುಂಚನಹಳ್ಳಿಯಲ್ಲಿ ನೆಲೆಸಿದ್ದ ಗುಬ್ಬಿ ತಾಲೂಕಿನ ಸಿ.ಎಸ್.ಪುರದ ಶ್ರೀನಿವಾಸ್‌ ಪರಿಚಯಲವಾಗಿದೆ. ಜಯಮ್ಮ ತಾನು ಕೂಡಿಟ್ಟಿದ್ದ ಹಣವನ್ನು ಸಾಲವಾಗಿ ಕೊಟ್ಟಿದ್ದರು ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲದೇವರ ಹೊತ್ತು ಭಿಕ್ಷಾಟನೆ ಮಾಡಿ ಕೊಡಿಟ್ಟು ಸಾಲವಾಗಿ ಕೊಟ್ಟಿದ್ದ ಹಣ ಕೇಳಲು ಬಂದ ಮಹಿಳೆ ಮತ್ತು ಆಕೆ ಜೊತೆಯಲ್ಲಿ ಕರೆತಂದಿದ್ದ ಎರಡೂವರೆ ವರ್ಷದ ಮೊಮ್ಮೊಗಳನ್ನು ಆಯುಧದಿಂದ ತುಂಡರಿಸಿ ಕೊಂದು ಗೋಣಿಚೀಲದಲ್ಲಿ ಕಟ್ಟಿ ಕೆರೆಗೆ ಎಸೆದು ಆರೋಪಿ ಪರಾರಿಯಾಗಿರುವ ಘಟನೆ ತಾಲೂಕಿನ ಆದಿಚುಂಚನಗಿರಿಯಲ್ಲಿ ಮಂಗಳವಾರ ರಾತ್ರಿ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಲ್ಕೆರೆ ಗ್ರಾಮದ ಜಯಮ್ಮ (46) ಹಾಗೂ ಎರಡೂವರೆ ವರ್ಷದ ರಿಷಿಕಾ ಕೊಲೆಯಾದ ದುರ್ದೈವಿ ಅಜ್ಜಿ ಮೊಮ್ಮಗಳಾಗಿದ್ದಾರೆ.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿ.ಎಸ್.ಪುರದ ಲೇಟ್ ಸೀನಪ್ಪನ ಪುತ್ರ ಶ್ರೀನಿವಾಸ್ ಅಜ್ಜಿ ಮೊಮ್ಮಗಳಿಬ್ಬರನ್ನು ಕೊಂದು ನೀರಿಗೆಸೆದು ಪರಾರಿಯಾಗಿರುವ ಆರೋಪಿ.

ಅಲೆಮಾರಿ ಜನಾಂಗದ ಜಯಮ್ಮ ಊರು ಊರು ಅಲೆದು ಭಿಕ್ಷಾಟನೆ ಮಾಡುತ್ತಿದ್ದರು. ಆದಿಚುಂಚನಗಿರಿಯಲ್ಲಿ ತಿಂಗಳುಗಟ್ಟಲೆ ತಂಗುತ್ತಿದ್ದರು. ಆಗ ತಾಲೂಕಿನ ಆದಿಚುಂಚನಗಿರಿ ಸಮೀಪದ ಚುಂಚನಹಳ್ಳಿಯಲ್ಲಿ ನೆಲೆಸಿದ್ದ ಗುಬ್ಬಿ ತಾಲೂಕಿನ ಸಿ.ಎಸ್.ಪುರದ ಶ್ರೀನಿವಾಸ್‌ ಪರಿಚಯಲವಾಗಿದೆ. ಜಯಮ್ಮ ತಾನು ಕೂಡಿಟ್ಟಿದ್ದ ಹಣವನ್ನು ಸಾಲವಾಗಿ ಕೊಟ್ಟಿದ್ದರು ಎನ್ನಲಾಗಿದೆ. ಶ್ರೀನಿವಾಸ್‌ನಿಂದ ಆ ಹಣವನ್ನು ಪಡೆದುಕೊಂಡು ಬರುವುದಾಗಿ ಹೇಳಿ ಮಾ.12ರಂದು ಸ್ವಗ್ರಾಮ ಕಡೂರು ತಾಲೂಕಿನ ಕಲ್ಕೆರೆಯಿಂದ ಆದಿಚುಂಚನಗಿರಿಗೆ ಬಂದಿದ್ದಾಳೆ. ಐದಾರು ದಿನ ಕಳೆದರೂ ಸಹ ವಾಪಸ್ ಮನೆಗೆ ಬಾರದ ಹಿನ್ನೆಲೆಯಲ್ಲಿ ಜಯಮ್ಮನ ಪುತ್ರ ಪ್ರವೀಣ್ ತಾಯಿ ಮತ್ತು ಮಗಳು ನಾಪತ್ತೆಯಾಗಿದ್ದಾರೆಂದು ಮಾ.18ರ ಬೆಳಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅದೇ ದಿನ ಮಧ್ಯಾಹ್ನ ಜಯಮ್ಮನ ಮೊಬೈಲ್‌ನಿಂದ ಪ್ರವೀಣ್‌ಗೆ ಕರೆ ಮಾಡಿ ನಿನ್ನ ತಾಯಿ ಮತ್ತು ಮಗುವನ್ನು ಕೊಂದು ಕೆರೆಯಲ್ಲಿ ಎಸೆದಿರುವುದಾಗಿ ಹೇಳಿದ ಶ್ರೀನಿವಾಸ್ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ತಕ್ಷಣ ಆದಿಚುಂಚನಗಿರಿಯ ಕಲ್ಯಾಣಿ ಸಮೀಪದ ಕೆರೆ ಬಳಿಗೆ ಆಗಮಿಸಿದ ಪ್ರವೀಣ್ ಬೆಳ್ಳೂರು ಪೊಲೀಸರ ಸಹಾಯದೊಂದಿಗೆ ಹುಡುಕಾಟ ನಡೆಸಿದಾಗ ಎರಡು ಗೋಣಿ ಚೀಲಗಳಲ್ಲಿ ಎರಡು ಮೃತದೇಹಗಳು ಮಂಗಳವಾರ ರಾತ್ರಿ ಪತ್ತೆಯಾಗಿವೆ. ಯಾವುದೋ ಆಯುಧದಿಂದ ಗುರುತು ಸಿಗದಂತೆ ಕೊಲೆ ಮಾಡಿ ಚೀಲಕ್ಕೆ ತುಂಬಿ ಕೆರೆಗೆ ಎಸೆದು ಆರೋಪಿ ಪರಾರಿಯಾಗಿದ್ದಾನೆ.

ಸುದ್ದಿ ತಿಳಿದು ಜಿಲ್ಲಾ ಎಸ್ಪಿ ಎನ್.ಯತೀಶ್, ಎಎಸ್ಪಿ ತಿಮ್ಮಯ್ಯ, ಸಿಪಿಐ ಬಿ.ಆರ್.ಗೌಡ, ಬೆಳ್ಳೂರು ಠಾಣೆ ಪಿಎಸ್‌ಐ ಬಸವರಾಜ ಚಿಂಚೋಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಜ್ಜಿ-ಮೊಮ್ಮಗಳ ಮೃತದೇಹಗಳನ್ನು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆ ಶವಾಗಾರದಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆ ನಂತರ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಮೃತ ಜಯಮ್ಮನ ಪುತ್ರ ಪ್ರವೀಣ್ ನೀಡಿರುವ ದೂರಿನ್ವಯ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಶ್ರೀನಿವಾಸ್ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.

PREV

Recommended Stories

ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!
ಗ್ರಾಮ ಲೆಕ್ಕಿಗರ ಹುದ್ದೆಗೆ ನಕಲಿ ಅಂಗವಿಕಲ ಪ್ರಮಾಣಪತ್ರ ಸಲ್ಲಿಕೆ...!