ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಶೋಕಿ ಚಟಕ್ಕೆ ಮೈಸೂರಿನಿಂದ ಮಂಡ್ಯಕ್ಕೆ ಬಂದು ಕಳ್ಳತನ ಮಾಡಿದ್ದ ಆರೋಪಿಯನ್ನು ಹಲಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ೨೦೨೪ ಆ.೨೨ರಂದು ಮಳವಳ್ಳಿ ತಾಲೂಕು ಅಗಸನಪುರ ಗ್ರಾಮದಲ್ಲಿ ಮನೆಯ ಬಾಗಿಲು ಮುರಿದು ೪೫ ಗ್ರಾಂ ತೂಕದ ಚಿನ್ನಾಭರಣ, ೫ ಕೆ.ಜಿ ತೂಕದ ಬೆಳ್ಳಿ ಆಭರಣ ಹಾಗೂ ೩೫ ಸಾವಿರ ರು. ನಗದು ಕಳ್ಳತನ ಮಾಡಿದ್ದ ಮೈಸೂರಿನ ವಿದ್ಯಾರಣ್ಯಪುರ ನಿವಾಸಿ ಅನಂತ ಅಲಿಯಾಸ್ ಗುರುವ ಅಲಿಯಾಸ್ ಮೆಡ್ಡ (೩೫) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಈತನ ವಿರುದ್ಧ ಹಲಗೂರು ಠಾಣೆ ವ್ಯಾಪ್ತಿಯಲ್ಲಿ ಮೂರು, ಬೆಳಕವಾಡಿ ಹಾಗೂ ಕಿರುಗಾವಲು ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಈತ ಹಣ ಮಾಡಲು ಕಳ್ಳತನಕ್ಕಿಳಿದಿದ್ದನು. ದೋಚುತ್ತಿದ್ದ ವಸ್ತುಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಮಾರಾಟ ಮಾಡುತ್ತಿದ್ದನು. ಆರೋಪಿಯಿಂದ ೩೦೧ ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ೨೨,೩೭,೬೩೪ ರು.ಗಳಾಗಿದೆ. ಇವನೊಂದಿಗೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬನ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ. ಒಂಟಿ ಮನೆ ಹಾಗೂ ಮನೆಯಲ್ಲಿ ಯಾರು ಇಲ್ಲದ ಸಮಯವನ್ನು ನೋಡಿಕೊಂಡು ಕೃತ್ಯ ಎಸಗುತ್ತಿದ್ದರು ಎಂದರು.ಆರೋಪಿಯನ್ನು ಬಂಧಿಸಿದ ಹಲಗೂರು ಠಾಣೆ ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್, ಪಿಎಸ್‌ಐ ಮಹೇಂದ್ರ, ಕಿರುಗಾವಲು ಠಾಣೆ ಪಿಎಸ್‌ಐ ಡಿ.ರವಿಕುಮಾರ್, ಸಿಬ್ಬಂದಿ ರಿಯಾಜ್‌ಪಾಷಾ, ಪ್ರಭುಸ್ವಾಮಿ, ನಾಗೇಂದ್ರ, ಕೃಷ್ಣಮೂರ್ತಿ, ರವಿಕಿರಣ್, ಲೋಕೇಶ್, ಸಿದ್ದರಾಜು, ಶ್ರೀನಿವಾಸ್, ಮಧುಕಿರಣ್, ಶಿವಕುಮಾರ್, ಮಹದೇವಸ್ವಾಮಿ ಅವರನ್ನು ಮಲ್ಲಿಕಾರ್ಜುನ ಬಾಲದಂಡಿ ಪ್ರಶಂಸಿಸಿದ್ದಾರೆ.
ಚಿನ್ನದ ಸರ ಅಪಹರಿಸಿದ್ದ ಐವರ ಬಂಧನ
ಮಂಡ್ಯ ತಾಲೂಕು ಎಂ.ಹಟ್ನ ಗ್ರಾಮದ ಸುದೀಪ್(೨೧), ಎಚ್.ಆರ್.ಚೇತನ್(೨೧), ದರ್ಶನ್(೨೨), ಕಿರಣ್‌ಕುಮಾರ್ (೩೦) ಮತ್ತು ಮುತ್ತೇಗೆರೆ ಗ್ರಾಮದ ಎಂ.ಆರ್.ಚೇತನ್(೨೫) ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಾಗಮಂಗಲ ಗ್ರಾಮಾಂತರ ಠಾಣೆ, ಮಂಡ್ಯ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ತಲಾ ೨, ಶ್ರೀರಂಗಪಟ್ಟಣ ಮತ್ತು ಮದ್ದೂರು, ಅರಕರೆ, ಕೆಸ್ತೂರು, ಬೆಳಕವಾಡಿ, ಕೆರಗೋಡು ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದೊಂದು ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.
ಆರೋಪಿಗಳನ್ನು ಪತ್ತೆ ಮಾಡಿದ ತನಿಖಾ ತಂಡದ ಆರಕ್ಷಕ ನಿರೀಕ್ಷಕ ಎಸ್.ಆನಂದ್, ಪಿಎಸ್‌ಐ ದೇವರಾಜು, ಸಿಬ್ಬಂದಿ ನಟರಾಜು, ಮಹೇಶ್, ರಾಜಶೇಖರ್ ವಿಠ್ಠಲ್ ಜೆ.ಕರಿಗಾರ, ಎಚ್.ಸಿ.ಅರುಣ್, ಸುಬ್ರಮಣಿ, ಚೇತನ, ರವಿಕಿರಣ್, ಲೋಕೇಶ್, ವಾಸುದೇವ ಅವರನ್ನು ಜಿಲ್ಲಾ ಎಸ್ಪಿ ಅಭಿನಂದಿಸಿದರು.