ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ಬಂಗಾಳದಿಂದ ವಿಮಾನ - ರೈಲಲ್ಲಿ ಬಂದು ಮನೆಗಳವು : ಆರು ಮಂದಿ ಅರೆಸ್ಟ್

KannadaprabhaNewsNetwork |  
Published : Jul 20, 2024, 01:50 AM ISTUpdated : Jul 20, 2024, 05:02 AM IST
malappuram theft

ಸಾರಾಂಶ

ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ಕಳವು ಮಾಡುತ್ತಿದ್ದ ಹೊರರಾಜ್ಯದ ನಾಲ್ವರು ಬಂಧಿತರಾಗಿರುವುದು.

 ಬೆಂಗಳೂರು :  ವಿಮಾನ-ರೈಲುಗಳಲ್ಲಿ ನಗರಕ್ಕೆ ಬಂದು ಉಳಿದುಕೊಂಡು ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ಕಳವು ಮಾಡುತ್ತಿದ್ದ ಹೊರರಾಜ್ಯದ ನಾಲ್ವರು ಹಾಗೂ ಕಳವು ಮಾಲು ಸ್ವೀಕರಿಸಿದ ಇಬ್ಬರು ಸೇರಿ ಆರು ಮಂದಿ ಆರೋಪಿಗಳನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ಸುಭಂಕರ್‌ಶೀಲ್‌(30), ಹರಿದಾಸ್‌ ಬರಾಯ್‌(32), ಗೌತಮ್‌ ಚೌದರಿ(22), ಸುಮನ್‌ ಬೋರ್‌ಗಾಯ್‌(26), ಕಳವು ಮಾಲು ಸ್ವೀಕರಿಸಿದ್ದ ಬಿಕಾಶ್‌ ಮಾಲಾಕರ್‌(40) ಹಾಗೂ ರಾಮೆನ್‌ ಕರ್ಮಕಾರ್‌(55) ಬಂಧಿತರು. ಆರೋಪಿಗಳಿಂದ ₹27 ಲಕ್ಷ ಮೌಲ್ಯದ 452 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೀಣ್ಯ ಸಮೀಪದ ಗೃಹಲಕ್ಷ್ಮಿ ಲೇಔಟ್‌ ನಿವಾಸಿಯೊಬ್ಬರು ಜೂ.19ರಂದು ಮನೆಗೆ ಬೀಗ ಹಾಕಿಕೊಂಡು ಅಮೆರಿಕದ ಮಗಳ ಮನೆಗೆ ತೆರಳಿದ್ದರು. ಎರಡು ದಿನಗಳ ಬಳಿಕ ಸಹೋದರನಿಗೆ ಕರೆ ಮಾಡಿ ಮನೆಯ ಸಿಸಿಟಿವಿ ಕ್ಯಾಮೆರಾ ಆಫ್‌ ಆಗಿರುವ ಬಗ್ಗೆ ತಿಳಿಸಿ, ಮನೆ ಬಳಿ ತೆರಳಿ ನೋಡುವಂತೆ ಸೂಚಿಸಿದ್ದರು. ಅದರಂತೆ ಸಹೋದರ ಮನೆ ಬಳಿ ತೆರಳಿ ನೋಡಿದಾಗ ಮನೆಯ ಹಿಂಬಾಗಿಲು ಮುರಿದು ದುಷ್ಕರ್ಮಿಗಳು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಇನ್‌ಸ್ಪೆಕ್ಟರ್‌ ಎಂ.ಎಸ್‌.ಅನಿಲ್‌ ಕುಮಾರ್‌ ನೇತೃತ್ವದಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ- ರೈಲುಗಳಲ್ಲಿ ಬಂದು ಕಳವು:

ಬಂಧಿತ ಆರು ಮಂದಿ ಆರೋಪಿಗಳ ಪೈಕಿ ಸುಭಂಕರ್‌ ಮತ್ತು ಹರಿದಾಸ್‌ ಐದಾರು ವರ್ಷಗಳ ಹಿಂದೆ ನಗರದಲ್ಲಿ ಸೆಕ್ಯೂರಿ ಗಾರ್ಡ್‌ ಕೆಲಸ ಮಾಡಿಕೊಂಡಿದ್ದರು. ಬಳಿಕ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಪಶ್ಚಿಮ ಬಂಗಾಳಕ್ಕೆ ತೆರಳಿ ಗ್ಯಾಂಗ್‌ ಕಟ್ಟಿಕೊಂಡು ಮನೆಗಳ್ಳತನ ಮಾಡುತ್ತಿದ್ದರು. ನಾಲ್ವರು ಆರೋಪಿಗಳು ವಿಮಾನ ಅಥವಾ ರೈಲುಗಳಲ್ಲಿ ಬೆಂಗಳೂರು ನಗರಕ್ಕೆ ಬಂದು ಲಾಡ್ಜ್‌ಗಳಲ್ಲಿ ರೂಮ್‌ ಬಾಡಿಗೆಗೆ ಪಡೆದು ತಂಗುತ್ತಿದ್ದರು.

ಕಳವು ಮಾಲು ಪಶ್ಚಿಮ ಬಂಗಾಳದಲ್ಲಿ ವಿಲೇವಾರಿ:

ಹಗಲು ಹೊತ್ತಿನಲ್ಲಿ ನಗರದ ವಿವಿಧೆಡೆ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಆ ಮನೆಗಳ ಬೀಗ ಮುರಿದು ಕಳವು ಮಾಡುತ್ತಿದ್ದರು. 10-15 ದಿನ ಹೀಗೆ ನಗರದಲ್ಲಿ ಮನೆಗಳವು ಮಾಡಿ ಬಳಿಕ ಪಶ್ಚಿಮ ಬಂಗಾಳಕ್ಕೆ ಪರಾರಿ ಆಗುತ್ತಿದ್ದರು. ಕದ್ದ ಮಾಲುಗಳನ್ನು ಜ್ಯುವೆಲ್ಲರಿ ಅಂಗಡಿ ಮಾಲೀಕರಾದ ಬಿಕಾಶ್‌ ಮಾಲಾಕರ್‌ ಮತ್ತು ರಾಮೆನ್‌ ಕರ್ಮಕಾರ್‌ಗೆ ಮಾರಾಟ ಮಾಡಿ ಹಣ ಪಡೆದು ಬಳಿಕ ಸಮವಾಗಿ ಹಂಚಿಕೊಂಡು ವ್ಯಯಿಸುತ್ತಿದ್ದರು. ಹಣ ಖಾಲಿಯಾದ ಬಳಿಕ ಮತ್ತೆ ನಗರಕ್ಕೆ ಬಂದು ಕಳವು ಮಾಡಿ ಪರಾರಿಯಾಗುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿಗಳ ಬಂಧನದಿಂದ ಪೀಣ್ಯ ಠಾಣೆಯ ಮೂರು, ರಾಮಮೂರ್ತಿನಗರ ಎರಡು, ಬಾಗಲಗುಂಟೆ, ಸೋಲದೇವನಹಳ್ಳಿ, ಬಾಣಸವಾಡಿ, ಇಂದಿರಾನಗರ, ಕೊಡಿಗೇಹಳ್ಳಿ ತಲಾ ಒಂದು ಸೇರಿ ಒಟ್ಟು 9 ಮನೆಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳ್ಳತನಕ್ಕೆ ಸ್ಕೆಚ್‌ ಹಾಕುವಾಗ ಬಲೆಗೆ

ಗೃಹಲಕ್ಷ್ಮಿ ಲೇಔಟ್‌ನ ಮನೆಗಳವು ಪ್ರಕರಣ ಸಂಬಂಧ ಪೊಲೀಸರು ತನಿಖೆಗೆ ಮುಂದಾದಾಗ, ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಇದರಲ್ಲಿ ಸಿಕ್ಕ ಸುಳಿವಿನ ಮೇರೆಗೆ ಆರೋಪಿಗಳ ಪತ್ತೆಗೆ ಶೋಧಿಸುವಾಗ, ಪೀಣ್ಯ ಸಮೀಪದ ಎಚ್‌ಎಂಟಿ ಲೇಔಟ್‌ನಲ್ಲಿ ಮೂವರು ಅನುಮಾನಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ದೊರೆತ ಮಾಹಿತಿ ಮೇರೆಗೆ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಮಾಡಿದಾಗ ಕಳವು ಕೃತ್ಯಗಳು ಬಯಲಾಗಿದೆ. ಬಳಿಕ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಪಶ್ಚಿಮ ಬಂಗಾಳಕ್ಕೆ ತೆರಳಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿ ಹಾಗೂ ಕಳವು ಮಾಲು ಸ್ವೀಕರಿಸಿದ್ದ ಜ್ಯುವೆಲ್ಲರಿ ಅಂಗಡಿಗಳ ಇಬ್ಬರು ಮಾಲೀಕರನ್ನು ಬಂಧಿಸಿ, ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಸಿಟಿವಿ ವೈರ್‌ ಕಟ್‌

ಆರೋಪಿಗಳು ಬೀಗ ಹಾಕಿದ ಮನೆಗಳ ಬೀಗ ಮುರಿದು ಮೊದಲಿಗೆ ಸಿಸಿಟಿವಿ ಕ್ಯಾಮೆರಾಗಳ ವೈಯರ್‌ ಕತ್ತರಿಸುತ್ತಿದ್ದರು. ಬಳಿಕ ಮನೆಯಲ್ಲಿನ ಚಿನ್ನಾಭರಣಗಳು, ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದರು. ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳು ಮನೆಗಳ ಹಿಂಬಾಗಿಲ ಬೀಗ ಮುರಿದೇ ಮುನೆ ಪ್ರವೇಶಿಸಿ ಬಳಿಕ ಸಿಸಿಟಿವಿ ಕ್ಯಾಮೆರಾಗಳ ವೈಯರ್‌ಗಳನ್ನು ಕತ್ತರಿಸಿ ಕಳ್ಳತನ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

PREV

Recommended Stories

ಮನೆಗಳ ಬೀಗ ಮುರಿದು ನಗ-ನಾಣ್ಯ ದೋಚುತ್ತಿದ್ದ ಮೂವರ ಬಂಧನ
ಬೆಂಗಳೂರಿನ ಸಿಂಧಿ ಶಾಲೆಯಲ್ಲಿ ಕನ್ನಡ ಮಾತಾಡಿದರೆ ದಂಡ: ಶಿಕ್ಷಣ ಇಲಾಖೆ ವಿಚಾರಣೆಯಲ್ಲಿ ದೃಢ