ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರವೂ ಮಳೆಯಾಗುವುದರೊಂದಿಗೆ ಮಳೆಯಿಂದ ಎದುರಾದ ಸಮಸ್ಯೆಯ ಸರಮಾಲೆಯೂ ಮುಂದುವರಿದಿದೆ. ಜಲಾವೃತಗೊಂಡ ಬಡಾವಣೆ, ರಸ್ತೆಗಳಲ್ಲಿ ಸ್ವಲ್ಪಮಟ್ಟಿಗೆ ಪ್ರವಾಹ ತಗ್ಗಿದ್ದರೂ ಜನರ ಆತಂಕ ಮಾತ್ರ ದೂರವಾಗಿಲ್ಲ. ಮತ್ತೆ ಯಾವಾಗ ಮಳೆ ಆರಂಭಗೊಳ್ಳಲಿದೆಯೋ, ನೀರು ಮನೆಗಳಿಗೆ ನುಗ್ಗಿ ಬರಲಿದೆಯೋ ಎಂಬ ಭೀತಿಯಲ್ಲಿಯೇ ಕಾಲ ಕಳೆಯುವಂತಾಗಿದೆ.ಭಾನುವಾರ ತಡ ರಾತ್ರಿ ಹಾಗೂ ಸೋಮವಾರ ಸುರಿದ ಮಳೆಗೆ ನಗರದ ಸುಮಾರು 50ಕ್ಕೂ ಅಧಿಕ ಬಡಾವಣೆಗಳು ಅಕ್ಷರಶಃ ದ್ವೀಪಗಳಾಗಿ ಮಾರ್ಪಟಿದ್ದವು. ರಸ್ತೆ, ವಿದ್ಯುತ್ ಸಂಪರ್ಕ ಕಳೆದುಕೊಂಡಿದ್ದು, ಕುಡಿಯುವ ನೀರು, ಹಾಲಿಗೂ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಗಳವಾರವೂ ಭಾಗಶಃ ಅದೇ ಪರಿಸ್ಥಿತಿ ಬಹುತೇಕ ಕಡೆ ಮುಂದುವರಿದಿತ್ತು. ಕೆಲವು ಕಡೆ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಪ್ರವಾಹ ಮಟ್ಟ ತಗ್ಗಿತ್ತು. ಆದರೆ, ಮಂಗಳವಾರ ಬೆಳಗ್ಗೆ ಮತ್ತು ಮಧ್ಯಾಹ್ನ ಸುರಿದ ಮಳೆಯಿಂದ ಮತ್ತದೇ ಪರಿಸ್ಥಿತಿ ಎದುರಾಯಿತು.ಜೆಸಿಬಿಯಲ್ಲಿ ಮನೆಮನೆಗೆ ಆಹಾರ ನಗರದ ಇತರೆ ಭಾಗದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಸಾಯಿ ಲೇಔಟ್ ಬಳಿಯ ರಾಜಕಾಲುವೆ ಹೆಚ್ಚಿನ ಪ್ರಮಾಣ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಬಡಾವಣೆಯ ನೀರಿನ ಮಟ್ಟ ಹೆಚ್ಚಾಗಿತ್ತು. ಮಂಗಳವಾರ ಸಹ ಅಲ್ಲಿನ ನಿವಾಸಿಗಳನ್ನು ದೋಣಿಗಳ ಮೂಲಕ ಸ್ಥಳಾಂತರ ಮಾಡುವ ಕಾರ್ಯ ಮುಂದುವರಿದಿತ್ತು. ಇನ್ನು ಬಡಾವಣೆಯಲ್ಲಿ ನಿಂತುಕೊಂಡಿರುವ ನೀರನ್ನು ಹೊರ ಹಾಕುವ ಕಾರ್ಯ ಮುಂದುವರಿಸಲಾಯಿತು. ಬಿಬಿಎಂಪಿಯಿಂದ ಜೆಸಿಬಿ ಯಂತ್ರದಲ್ಲಿ ಪ್ರತಿ ಮನೆಗೆ ತೆರಳಿ ಆಹಾರ, ಕುಡಿಯುವ ನೀರು ಹಾಗೂ ಅಗತ್ಯ ಸಾಮಗ್ರಿಗಳನ್ನು ತಲುಪಿಸುವ ಕಾರ್ಯ ಮಾಡಬೇಕಾಯಿತು. ಜಲಾವೃತಗೊಂಡಿರುವ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಎಚ್ಎಸ್ಆರ್, ಅನುಗ್ರಹ ಲೇಔಟ್ ನಲ್ಲಿ ಬಹುತೇಕ ಇದೇ ಪರಿಸ್ಥಿತಿ ಮುಂದುವರಿದಿದೆ.
ಚರಂಡಿಗಳ ಸ್ಲ್ಯಾಬ್ ತೆಗೆದು ಜೆಸಿಬಿ ಹಾಗೂ ಸಿಬ್ಬಂದಿ ಮೂಲಕ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗಿದೆ.ಆರೋಗ್ಯ ತಂಡ ನಿಯೋಜನೆಕಳೆದ ಮೂರ್ನಾಲ್ಕು ದಿನಗಳಿಂದ ಸಾಯಿಲೇಔಟ್ ನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ಬಿಬಿಎಂಪಿಯಿಂದ ವೈದ್ಯರ ತಂಡ ನಿಯೋಜನೆ ಮಾಡಲಾಗಿದೆ. ಶೀತ, ಕೆಮ್ಮು, ನೆಗಡಿ, ಜ್ವರ ಸೇರಿದಂತೆ ಚರ್ಮದ ಸಮಸ್ಯೆಗಳಿಗೆ ತುರ್ತು ಔಷಧಿ ನೀಡಲಾಯಿತು.
ಸಿಲ್ಕ್ ಬೋರ್ಡ್ ಜಂಕ್ಷನ್ ನೀರಿನ ಮಟ್ಟ ಇಳಿಕೆ:ಮಡಿವಾಳ ಕೆರೆ ಕೋಡಿಯಿಂದ ಜಲಾವೃತಗೊಂಡ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಪ್ರವಾಹ ಮಟ್ಟ ಕಡಿಮೆಯಾಗಿದ್ದು, ವಾಹನ ಸಂಚಾರ ನಿಧಾನಗತಿಯಲ್ಲಿ ಆರಂಭಗೊಂಡಿದೆ. ನೀರು ಹರಿದು ಹೋಗುವುದಕ್ಕೆ ಬೇಕಾದ ತಾತ್ಕಾಲಿಕ ವ್ಯವಸ್ಥೆಯನ್ನು ಬಿಬಿಎಂಪಿ ಸಿಬ್ಬಂದಿ ಮಾಡುತ್ತಿದ್ದರು.
ಮಡಿವಾಳದ ಅಯ್ಯಪ್ಪ ಅಂಡರ್ ಪಾಸ್ ಜಲಾವೃತವಾಗಿ ಹೊಸೂರು ಮುಖ್ಯರಸ್ತೆಯಲ್ಲಿ ಬೆಂಗಳೂರಿನ ಹೊರಭಾಗಕ್ಕೆ ಹೋಗುವ ಮತ್ತು ನಗರದ ಒಳಭಾಗದ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಅಂಡರ್‌ಪಾಸ್‌ನಲ್ಲಿ ಹೋಗಲಾಗದೆ ದ್ವಿಚಕ್ರ ವಾಹನ ಸವಾರರು ಪರದಾಡಬೇಕಾಯಿತು. ಬಿಟಿಎಂ ಲೇಔಟ್, ಶಾಂತಿನಗರ ಬಸ್ ಡಿಪೋ ಸೇರಿದಂತೆ ಮೊದಲಾದ ಕಡೆ ಮಂಗಳವಾರವೂ ರಸ್ತೆಯಲ್ಲಿ ಭಾರೀ ಪ್ರಮಾಣ ನೀರು ನಿಂತುಕೊಂಡಿದ್ದರಿಂದ ವಾಹನ ಸವಾರರು ಪರದಾಡಿದರು.ವ್ಯಾಪಾರಿಗಳಿಗೆ ಮಳೆಯಿಂದ ನಷ್ಟ
ಕೆಆರ್ ಮಾರುಕಟ್ಟೆಯಲ್ಲಿ ಮಳೆಯ ಅವಾಂತರದಿಂದ ಹೂವು ವ್ಯಾಪಾರಿಗಳು ಪರದಾಡಬೇಕಾಯಿತು. ಸಾವಿರಾರು ಮೌಲ್ಯದ ಹೂವು ಮಳೆಯಿಂದ ಹಾನಿಯಾಗಿದೆ. ಮಳೆಯಿಂದ ಗ್ರಾಹಕರು ಮಾರುಕಟ್ಟೆ ಕಡೆ ಬಾರದ ಹಿನ್ನೆಲೆಯಲ್ಲಿ ನಷ್ಟ ಅನುಭವಿಸಬೇಕಾಯಿತು. ಇನ್ನೂ ಮಾರುಕಟ್ಟೆಯಲ್ಲಿ ಸೊಪ್ಪು, ತರಕಾರಿ ವ್ಯಾಪಾರಿಗಳ ಪರಿಸ್ಥಿತಿಯೂ ಇದೇ ರೀತಿ ಕಂಡು ಬಂತು. ಕೆಆರ್ ಮಾರುಕಟ್ಟೆಯ ಬೇಸ್ ಮೆಂಟ್ ಪಾರ್ಕಿಂಗ್ ನಿಲ್ದಾಣದಲ್ಲಿ ನೂರಕ್ಕೂ ಹೆಚ್ಚು ಬೈಕ್, ಕಾರು, ವ್ಯಾಪರಸ್ಥರ ತಳ್ಳುಗಾಡಿ ಸೇರಿದಂತೆ ಎಲ್ಲವೂ ಜಲಾವೃತವಾಗಿದೆ. ಪ್ರತಿ ಬಾರಿ ಮಳೆ ಬಂದಾಗಲೂ ಕೊಳಚೆ ನೀರು ಪಾರ್ಕಿಂಗ್ ಸ್ಥಳದಲ್ಲಿ ತುಂಬಿಕೊಂಡು ಸಮಸ್ಯೆ ಉಂಟು ಮಾಡುತ್ತದೆ. ಮಾರುಕಟ್ಟೆ ನಿರ್ವಹಣೆ ಮಾಡುವ ಬಿಬಿಎಂಪಿ ಅಧಿಕಾರಿಗಳಿಗೆ ಎಷ್ಟು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ವ್ಯಾಪಾರಿಗಳು ದೂರಿದ್ದಾರೆ.41 ಮರ ಧರೆಗೆ ಗಿರಿನಗರದ 80 ಅಡಿ ರಸ್ತೆಯಲ್ಲಿ ಕಾರಿನ ಮೇಲೆ ಮರ ಬಿದ್ದಿದ್ದು, ಕಾರು ಸಂಪೂರ್ಣ ಜಖಂ ಆಗಿದೆ. ಟ್ರಿನಿಟಿ ಬಳಿ ಮರವು ಓಮ್ನಿ ಕಾರಿನ ಮೇಲೆ ಬಿದ್ದಿದೆ. ನಗರ ಸಿಟಿ ಸಿವಿಲ್ ಕೋರ್ಟ್ ಬಳಿಯು ಮರ ಬಿದ್ದು ವಾಹನ ಸಂಚಾರದಲ್ಲಿ ಸಮಸ್ಯೆ ಉಂಟಾಯಿತು. ಒಟ್ಟಾರೆ ನಗರದಲ್ಲಿ 41 ಮರ ಹಾಗೂ 75ಕ್ಕೂ ಮರದ ರೆಂಬೆಕೊಂಬೆ ಧರೆಗೆ ಬಿದ್ದ ವರದಿಯಾಗಿದೆ.
ಆಶ್ರಮದ ದವಸ ಧಾನ್ಯ ನೀರು ಪಾಲು: ಆರ್‌ಆರ್ ನಗರದ ಪುನರ್ಜನ್ಮ ಆಶ್ರಮಧಾಮದ ಕಟ್ಟಡಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ತಕ್ಷಣ ಆಶ್ರಮ ವೃದ್ಧರನ್ನು ಮೊದಲ ಮಹಡಿಗೆ ಸ್ಥಳಾಂತರ ಮಾಡಲಾಗಿದೆ. ಆದರೆ, ಸಂಗ್ರಹಿಸಿದ್ದ ದವಸ- ಧಾನ್ಯಗಳು ನೀರು ಪಾಲಾಗಿವೆ.ನಗರದಲ್ಲಿ 75 ಕೆರಗೆಳು ಭರ್ತಿ:ನಗರದ 183 ಕೆರೆಗಳಿದ್ದು, ಕೆಲವು ಕೆರೆಗಳನ್ನು ಹೊರತು ಪಡಿಸಿ ಬಹುತೇಕ ಕೆರೆಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿತ್ತು. ಇದೀಗ ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದ 75 ಕೆರೆಗಳು ಭರ್ತಿಯಾಗಿವೆ.
ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯಜಲಾವೃತಗೊಂಡು ಪ್ರವಾಹ ಮಟ್ಟ ಕಡಿಮೆಯಾದ ಪ್ರದೇಶದಲ್ಲಿ ಮಂಗಳವಾರ ಬಿಬಿಎಂಪಿಯ ಸಿಬ್ಬಂದಿ ರಸ್ತೆಗಳನ್ನು ಸ್ವಚ್ಛಗೊಳಿಸುವುದರಲ್ಲಿ ನಿರತವಾಗಿದ್ದರು. ಇನ್ನೂ ಮನೆಗಳಿಗೆ ನುಗ್ಗಿದ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ ನೀರು ಶೇಖರಣೆ ತೊಟ್ಟಿ, ಮನೆಗಳನ್ನು ಸ್ವಚ್ಛಗೊಳಿಸುತ್ತಿರುವುದು ಕಂಡು ಬಂತು.
ಹಾನಿ ಪರಿಶೀಲನೆ ಆರಂಭ:ಮಳೆಯಿಂದ ಸಾವಿರಾರು ಸಂಖ್ಯೆಯ ಮನೆಗಳಿಗೆ ನೀರು ನುಗ್ಗಿ, ಅಗತ್ಯ ವಸ್ತುಗಳು, ದವಸ, ಧಾನ್ಯ ಕೊಚ್ಚಿಕೊಂಡು ಹೋಗಿವೆ. ಕಾರು, ಬೈಕ್, ಆಟೋ ಕೆಟ್ಟು ನಿಂತಿವೆ. ಗೃಹ ಬಳಕೆಯ ಹಾಸಿಗೆ, ದಿಂಬು, ಟಿವಿ, ಫ್ರೀಡ್ಜ್, ವಾಷಿಂಗ್ ಮಿಷನ್ ಸೇರಿದಂತೆ ಮೊದಲಾದವುಗಳು ಹಾಳಾಗಿವೆ, ಈ ಬಗ್ಗೆ ಪರಿಶೀಲನೆ ಮಾಡಿ ಮಾಹಿತಿ ಸಂಗ್ರಹಿಸಿ ವಿಪತ್ತು ಪರಿಹಾರ ನಿಧಿಯಡಿ ಪರಿಹಾರ ನೀಡಬೇಕಾದ ಬಿಬಿಎಂಪಿಯು ಇನ್ನೂ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಆರಂಭಿಸಿಲ್ಲ ಎಂಬ ದೂರು ಕೇಳಿ ಬಂದಿದೆ.ಹಾವುಗಳ ಕಾಟ: ಸಾಯಿ ಲೇಔಟ್ ಸೇರಿದಂತೆ ಜಲಾವೃತಗೊಂಡ ಬಡಾವಣೆಗಳಲ್ಲಿ ಇದೀಗ ಹಾವು ಹಾಗೂ ಹಾವಿನ ಮರಿಗಳ ಕಾಟ ಹೆಚ್ಚಾಗಿದೆ. ಸಾಯಿಲೇಔಟ್‌ನಲ್ಲಿ ಪ್ರವಾಹ ಮುಕ್ತವಾದ ಮನೆಗಳಲ್ಲಿ ಹಾವಿನ ಮರಿಗಳು ಪತ್ತೆಯಾಗಿವೆ. ಉರಗ ತಜ್ಞರು, ನೀರು ತೆರವುಗೊಂಡ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಬಾಕ್ಸ್‌ಎಲ್ಲೆಲ್ಲಿ ಎಷ್ಟು ಮಳೆ?ನಗರದಲ್ಲಿ ಮಂಗಳವಾರ ಸರಾಸರಿ 11.9 ಮಿ.ಮೀ. ಮಳೆಯಾಗಿದೆ. ಅತಿ ಹೆಚ್ಚು ಪುಲಕೇಶಿನಗರದಲ್ಲಿ 3.2 ಸೆಂ.ಮೀ ಮಳೆಯಾಗಿದೆ. ಹಂಪಿನಗರದಲ್ಲಿ 2.7, ಬಸವೇಶ್ವರ ನಗರದಲ್ಲಿ 2.1, ಕಾಟನ್‌ಪೇಟೆಯಲ್ಲಿ 1.9, ನಾಯಂಡಹಳ್ಳಿ ಹಾಗೂ ಪೀಣ್ಯದಲ್ಲಿ ತಲಾ 1.8, ಹೇರೋಹಳ್ಳಿ ಹಾಗೂ ಚೌಡೇಶ್ವರಿಯಲ್ಲಿ ತಲಾ 1.7, ಬಾಣಸವಾಡಿ 1.6, ಆರ್‌ಆರ್‌ನಗರ 1.5, ಸಂಪಂಗಿರಾಮನಗರ, ನಾಗಪುರ, ವಿದ್ಯಾಪೀಠ, ಕೆಂಗೇರಿಯಲ್ಲಿ ತಲಾ 1.4 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.--ಬಾಕ್ಸ್--ಸಂತ್ರಸ್ತರಿಗೆ ತ್ವರಿತವಾಗಿ
ಸ್ಪಂದಿಸಲು ಪಾಲಿಕೆ ಸೂಚನೆನಗರದಲ್ಲಿ ನಿರಂತವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಹಾಗೂ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರವಾಹ ಉಂಟಾಗುವ ಸ್ಥಳಗಳಲ್ಲಿ ಶ್ವಾಶತ ಹಾಗೂ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಮಳೆಯಿಂದ ತೊಂದರೆಗೆ ಒಳಗಾದವರಿಗೆ ತ್ವರಿತವಾಗಿ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.--
ಇಂದು ಸಿಎಂಸಿಟಿ ರೌಂಡ್ಸ್
ನಗರದ ಮಳೆ ಹಾನಿ ಪ್ರದೇಶಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಈ ಕುರಿತು ಸೋಮವಾರವೇ ಮುಖ್ಯಮಂತ್ರಿ ಮಾಹಿತಿ ನೀಡಿದ್ದರು.