ಕನ್ನಡಪ್ರಭ ವಾರ್ತೆ ಬೆಂಗಳೂರು
ಮೂಲ ಸೌಲಭ್ಯಗಳ ಉಸ್ತುವಾರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಜಲಮಂಡಳಿ ಹೊಣೆಗಾರಿಕೆ ಇದೆ. ಆದರೆ ಮಳೆ ಸಂಕಷ್ಟದಲ್ಲಿ ಜನರ ಸುರಕ್ಷೆಗೆ ಸಮರೋಪಾದಿಯಲ್ಲಿ ಪೊಲೀಸರು ಕೆಲಸಕ್ಕಿಳಿದಿದ್ದಾರೆ.
ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರ ನೋಡಿಕೊಳ್ಳಬೇಕಾದ ಪೊಲೀಸರು, ಈಗ ಮಳೆಯಲ್ಲಿ ಧರೆಗುರಳಿದ ಮರಗಳು ಹಾಗೂ ರಸ್ತೆಯಲ್ಲಿ ನಿರ್ಮಾಣವಾಗಿರುವ ‘ಕಿರು ಕೆರೆ’ಗಳಲ್ಲಿ ನೀರಿನ ತೆರವಿಗೆ ಪ್ರಯಾಸಪಡಬೇಕಾಗಿದೆ. ರಸ್ತೆಯಲ್ಲಿ ಜನರ ಸುರಕ್ಷತೆ ಮಾತ್ರವಲ್ಲದೆ, ವಾಹನಗಳಿಗೂ ತೊಂದರೆಯಾಗದಂತೆ ಪೊಲೀಸರು ಜಾಗೃತೆವಹಿಸಿದ್ದಾರೆ. ಇನ್ನು ಸುರಿಯುವ ಮಳೆಯಲ್ಲಿ ಜನರೆಲ್ಲ ರಕ್ಷಣೆಗೆ ಸುರು ಹುಡುಕಿದರೆ, ಅತ್ತ ಪೊಲೀಸರು ಹನಿಗಳಿಂದ ಜನರ ರಕ್ಷಣೆಗೆ ರಸ್ತೆಗಿಳಿಯುತ್ತಾರೆ.ಪ್ರತಿ ಮಳೆಗಾಲ ಸ್ವಾಗತಕ್ಕೆ ಸಂಚಾರ ವಿಭಾಗದ ಪೊಲೀಸರು ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಾರೆ. ತಮ್ಮ ಠಾಣಾ ಸರಹದ್ದಿನಲ್ಲಿ ಯಾವ್ಯಾವ ರಸ್ತೆಯಲ್ಲಿ ನೀರು ನಿಲ್ಲುತ್ತದೆ ಎಂದು ಗುರುತಿಸಿ ಬಿಬಿಎಂಪಿಗೆ ಮಾಹಿತಿ ನೀಡುತ್ತಾರೆ. ಅಲ್ಲದೆ ಆ ರಸ್ತೆಗಳಲ್ಲಿ ಮಳೆ ನೀರಿನಿಂದ ಸಮಸ್ಯೆ ಉಂಟಾಗದಂತೆ ತಾವೂ ಮುಂಜಾಗ್ರತೆ ವಹಿಸುತ್ತಾರೆ. ಇನ್ನು ಗಾಳಿ-ಮಳೆಗೆ ಧರಾಶಾಯಿ ಆಗುವಂತಹ ಮರಗಳನ್ನು ಸಹ ಗುರುತಿಸಿ ಅವುಗಳ ತೆರವಿಗೆ ಕೂಡ ಪೊಲೀಸರು ನಿಗಾವಹಿಸುತ್ತಾರೆ.
ಮಳೆ ಪರಿಣಾಮದ ಕುರಿತು ಹವಾಮಾನ ಇಲಾಖೆ ಅಥವಾ ಬಿಬಿಎಂಪಿಗಿಂತ ಕ್ಷಿಪ್ರಗತಿಯಲ್ಲಿ ಜನರಿಗೆ ಮಾಹಿತಿ ನೀಡುವ ಕೆಲಸವನ್ನು ಸಂಚಾರ ಪೊಲೀಸ್ ವಿಭಾಗ ಪರಿಣಾಮಕಾರಿ ನಡೆಸುತ್ತಿದೆ. ಮಳೆ ಶುರುವಾದ ಕೂಡಲೇ ತಮ್ಮ ವ್ಯಾಪ್ತಿಯಲ್ಲಿ ಯಾವ್ಯಾವ ರಸ್ತೆಯಲ್ಲಿ ನೀರು ನಿಲುಗಡೆಯಾಗಿ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಸಾರ್ವಜನಿಕರಿಗೆ 24*7 ಸುದ್ದಿವಾಹಿನಿಗಳಂತೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಚಾರ ವಿಭಾಗದ ಪೊಲೀಸರು ಮಾಹಿತಿ ನೀಡುತ್ತಾರೆ. ಈ ಮಾಹಿತಿ ಜತೆ ವಿಡಿಯೋ ಹಾಗೂ ಪೋಟೋ ಸಮೇತ ಸುದ್ದಿ ನೀಡುವುದು ಜನರಿಗೆ ಮಳೆ ಸಮಸ್ಯೆ ವಾಸ್ತವತೆ ಸಿಗುತ್ತದೆ.
ಇವಿ ಬಸ್‌ಗಳದ್ದೇ ತೊಂದರೆ
ಅಲ್ಲದೆ ಇವಿ ಬಸ್‌ಗಳನ್ನು ತೆರವುಗೊಳಿಸುವ ಯಂತ್ರಗಳು ಸಹ ಎಲ್ಲ ಠಾಣೆಯಲ್ಲಿ ಲಭ್ಯವಿರುವುದಿಲ್ಲ. ಹೀಗಾಗಿ ಈ ಸಂಬಂಧ ಬಿಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿಗೆ ಪತ್ರ ಬರೆದು ಮುಂಜಾಗ್ರತೆ ವಹಿಸುವಂತೆ ಸೂಚಿಸಿದ್ದೇವೆ ಎಂದರು.
ರಸ್ತೆಯಲ್ಲಿ ಉರುಳಿ ಬೀಳುವ ಮರ ತೆರವುಗೊಳಿಸುವ ಕಾರಣಕ್ಕೆ ಪ್ರತಿ ಠಾಣೆಗೆ ಮರ ಕತ್ತರಿಸುವ ಯಂತ್ರಗಳನ್ನು ಒದಗಿಸಲಾಗಿದೆ. ಆದರೆ ಆ ಯಂತ್ರ ಬಳಸಲು ಪೊಲೀಸರಿಗೆ ತಿಳಿವಳಿಕೆ ಕಡಿಮೆ ಇದೆ. ಹೀಗಾಗಿ ಮರ ಕತ್ತರಿಸುವ ಬಗ್ಗೆ ತರಬೇತಿ ನೀಡುವಂತೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಳೆಯಲ್ಲಿ ಪೊಲೀಸರ ಸುರಕ್ಷತೆ ಬಗ್ಗೆ ಸಹ ಇಲಾಖೆ ಕಾಳಜಿ ವಹಿಸಿದೆ. ಇದಕ್ಕಾಗಿ ಸಿಬ್ಬಂದಿಗೆ ರೈನ್ ಕೋಟ್ ಹಾಗೂ ಬೂಟ್ಸ್ ಅನ್ನು ಇಲಾಖೆ ವಿತರಿಸಿದೆ.