ಮನೆ ಕಳ್ಳತನದಿಂದ ಹಣ ಗಳಿಸಿ 20 ಮಕ್ಕಳ ಸ್ಕೂಲ್‌ ಫೀಜ್‌ ಕಟ್ಟಿದ!

KannadaprabhaNewsNetwork |  
Published : May 21, 2025, 02:01 AM IST
Theft 3 | Kannada Prabha

ಸಾರಾಂಶ

ಮನೆಗಳವು ಮಾಡಿ ಸಂಪಾದಿಸಿದ ಹಣದಲ್ಲಿ ತನ್ನ ಸ್ನೇಹಿತರಿಗೆ ಆಟೋ ಹಾಗೂ 20 ಮಕ್ಕಳ ವಿದ್ಯಾಭ್ಯಾಸಕ್ಕಾಗಿ 14 ಲಕ್ಷ ರು.ಗಳನ್ನು ನೆರವು ನೀಡಿದ್ದ ‘ಆಧುನಿಕ ರಾಬಿನ್‌ಹುಡ್’ ಹಾಗೂ ಆತನ ಇಬ್ಬರು ಸಹಚರರು ಈಗ ಸೆಂಟ್ರಲ್‌ ಜೈಲು ಸೇರಿದ್ದಾರೆ.

- ಸ್ನೇಹಿತರಿಗಾಗಿ 2 ಆಟೋ ಖರೀದಿಸಿಕೊಟ್ಟಿದ್ದ ಕಳ್ಳ- ‘ಆಧುನಿಕ ರಾಬಿನ್‌ಹುಡ್‌’ ಶಿವು ಗ್ಯಾಂಗ್‌ ಜೈಲಿಗೆ

===

- ಬೆಂಗಳೂರಿನ ಬ್ಯಾಡರಹಳ್ಳಿ ಸಮೀಪ ಕೆಲ ದಿನಗಳ ಹಿಂದೆ ಮನೆಕಳ್ಳತನವಾಗಿತ್ತು- ತನಿಖೆ ನಡೆಸಿದ ಪೊಲೀಸರು ಶಿವು ಗ್ಯಾಂಗ್‌ ಅನ್ನು ಬಂಧಿಸಿ ವಿಚಾರಣೆ ಮಾಡಿದ್ದರು- ಆ ವೇಳೆ ಆತನ ಪರೋಪಕಾರಿ ಗುಣ ಬಯಲಿಗೆ. 240 ಚಿನ್ನ ಕದ್ದು ಮಾರಿದ್ದ ಶಿವು ಟೀಂ- ಅದರಿಂದ ಬಂದ ಹಣದಲ್ಲಿ ಸ್ನೇಹಿತರಿಗೆ ಆಟೋ ಕೊಡಿಸಿದ್ದ. 20 ಮಕ್ಕಳ ಶುಲ್ಕ ಕಟ್ಟಿದ್ದ- ಇದಕ್ಕಾಗಿ 14 ಲಕ್ಷ ರು. ವ್ಯಯಿಸಿದ್ದ. ಈಗ ಆತನಿಂದ 24 ಲಕ್ಷ ರು. ಚಿನ್ನಾಭರಣ ಜಪ್ತಿ- ಕಳ್ಳತನ ಪ್ರಕರಣದಲ್ಲಿ ಆತ ಹಾಗೂ ಇನ್ನಿಬ್ಬರು ಸಹಚರರನ್ನು ಬಂಧಿಸಿ ಜೈಲಿಗೆ ಶಿಫ್ಟ್‌

---ಕನ್ನಡಪ್ರಭ ವಾರ್ತೆ ಬೆಂಗಳೂರು

ಮನೆಗಳವು ಮಾಡಿ ಸಂಪಾದಿಸಿದ ಹಣದಲ್ಲಿ ತನ್ನ ಸ್ನೇಹಿತರಿಗೆ ಆಟೋ ಹಾಗೂ 20 ಮಕ್ಕಳ ವಿದ್ಯಾಭ್ಯಾಸಕ್ಕಾಗಿ 14 ಲಕ್ಷ ರು.ಗಳನ್ನು ನೆರವು ನೀಡಿದ್ದ ‘ಆಧುನಿಕ ರಾಬಿನ್‌ಹುಡ್’ ಹಾಗೂ ಆತನ ಇಬ್ಬರು ಸಹಚರರು ಈಗ ಸೆಂಟ್ರಲ್‌ ಜೈಲು ಸೇರಿದ್ದಾರೆ.

ಬೆಂಗಳೂರಿನ ಬೇಗೂರು ನಿವಾಸಿ ಶಿವರಸನ್ ಅಲಿಯಾಸ್ ಶಿವು, ಆತನ ಸಹಚರರಾದ ಅನಿಲ್ ಅಲಿಯಾಸ್ ಜಗ್ಗ ಹಾಗೂ ವಿವೇಕಾನಂದ ಅಲಿಯಾಸ್ ಬಂಧಿತರಾಗಿದ್ದು, ಆರೋಪಿಗಳಿಂದ 24 ಲಕ್ಷ ರು. ಮೌಲ್ಯದ ಚಿನ್ನಾಭರಣ ಹಾಗೂ ಆಟೋ ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಬ್ಯಾಡರಹಳ್ಳಿ ಸಮೀಪದ ಮನೆಯಲ್ಲಿ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಶಿವು ಗ್ಯಾಂಗ್ ಅನ್ನು ಸೆರೆ ಹಿಡಿದು ವಿಚಾರಣೆಗೊಳಪಡಿಸಿದಾಗ ಆತನ ಪರೋಪಕಾರಿ ಅವತಾರ ಬಯಲಾಗಿದೆ.

ಕೊಡುಗೈ ದಾನಿಯಾದ ಮನೆಗಳ್ಳ:

ತಮಿಳುನಾಡು ಮೂಲದ ಶಿವು ಕುಟುಂಬ ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದು ನೆಲೆಸಿತ್ತು. ಮೊದಲು ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಆತ, ತರುವಾಯ ಸುಲಭವಾಗಿ ಹಣ ಸಂಪಾದನೆಗೆ ಅಡ್ಡದಾರಿ ಹಿಡಿದಿದ್ದಾನೆ. ಮನೆಗಳ್ಳತನವನ್ನೇ ವೃತ್ತಿಯಾಗಿಸಿಕೊಂಡ ಶಿವು ವಿರುದ್ಧ ನಗರದ ಬೇಗೂರು, ಎಲೆಕ್ಟ್ರಾನಿಕ್ ಸಿಟಿ, ಆನೇಕಲ್ ಹಾಗೂ ಜಿಗಣಿ ಸೇರಿದಂತೆ ಇತರೆ ಠಾಣೆಗಳಲ್ಲಿ 10ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಮನೆಗಳ್ಳತನಕ್ಕೆ ಕುಖ್ಯಾತನಾಗಿದ್ದ ಆತ, ತಾನು ಕಳ್ಳತನದಲ್ಲಿ ಸಂಪಾದಿಸಿದ್ದ ಹಣದಲ್ಲಿ ಸ್ಪಲ್ಪ ಹಣವನ್ನು ಜನರಿಗೆ ದಾನ ಮಾಡಿ ಕೊಡುಗೈ ದಾನಿ ಹಾಗೂ ರಾಬಿನ್‌ಹುಡ್‌ ಎಂದೆಲ್ಲ ಕರೆಸಿಕೊಳ್ಳುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಅಂತೆಯೇ ಬ್ಯಾಡರಹಳ್ಳಿ ಸಮೀಪ ಮನೆ ಬೀಗ ಮುರಿದು 240 ಗ್ರಾಂ ಚಿನ್ನವನ್ನು ಶಿವು ಕಳವು ಮಾಡಿದ್ದ. ನಂತರ ಆ ಚಿನ್ನವನ್ನು ತಮಿಳುನಾಡಿನಲ್ಲಿ ತನ್ನ ಗೆಳೆಯ ವಿವೇಕಾನಂದ ಮೂಲಕ ವಿಲೇವಾರಿ ಮಾಡಿಸಿದ್ದ. ಹೀಗೆ ಸಂಪಾದಿಸಿದ ಹಣದಲ್ಲಿ ತನ್ನ ಇಬ್ಬರು ಸ್ನೇಹಿತರಿಗೆ ಹೊಸ ಆಟೋ ಹಾಗೂ ತನ್ನ ಪರಿಚಿತರ ಸುಮಾರು 20 ಮಕ್ಕಳ ಶಾಲಾ ಶುಲ್ಕ ಪಾವತಿಸಲು ಶಿವು 14 ಲಕ್ಷ ರು. ನೆರವು ಕೊಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!
15 ವರ್ಷಗಳಿ ಸುವರ್ಣನ್ಯೂಸ್, ಕನ್ನಡಪ್ರಭದಲ್ಲಿ ಕೆಲಸ ಮಾಡುತ್ತಿದ್ದ ಮಹಿ‍ಳೆ ಅಪಘಾತದಲ್ಲಿ ದಾರುಣ ಸಾವು