ಜಿಂಕೆ ಕೊಂದು ಮಾಂಸ ಸಾಗಿಸುತ್ತಿದ್ದ ಮೂವರ ಬಂಧನ

KannadaprabhaNewsNetwork | Updated : Mar 29 2024, 08:19 AM IST

ಸಾರಾಂಶ

ಮುತ್ಯಾಲಮಡು ಕಾಡಿನಲ್ಲಿ ಜಿಂಕೆ ಕೊಂದು ಮಾಂಸ ಹಂಚಿಕೊಂಡು ಸಾಗಿಸುತ್ತಿದ್ದ ಮೂವರನ್ನು ಆನೇಕಲ್‌ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಆನೇಕಲ್

ಜಿಂಕೆಯನ್ನು ಬೇಟೆಯಾಡಿ ಕೊಂದು ಮಾಂಸ ಹಂಚಿಕಂಡವರನ್ನು ಮಾಲು ಸಹಿತ ಆನೇಕಲ್ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಿದ ಘಟನೆ ಆನೇಕಲ್ ಪ್ರಾದೇಶಿಕ ವಲಯದಲ್ಲಿ ನಡೆದಿದೆ.

ಹಾರೋಹಳ್ಳಿ ತಾಲೂಕಿನ ಮರಳವಾಡಿಯ ದೇವರಾಜು, ಆನೇಕಲ್ ತಾಲೂಕಿನ ಆದೂರು‌ ಮೂಲದ ರಾಮಕೃಷ್ಣ ಮತ್ತು ಆನೇಕಲ್ ತಾಲೂಕು ಇಂಡ್ಲವಾಡಿ ಮೂಲದ ಕಿಶೋರ್ ಬಂಧಿತರು. 

ಇಂದು ಬೆಳಗಿನ ಜಾವ ಜಿಂಕೆಯನ್ನು ಕೊಂದು ತಮ್ಮ ಪಾಲಿನ ಮಾಂಸ ತೆಗೆದುಕೊಂಡು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಆನೇಕಲ್ ಪ್ರವಾಸಿ ತಾಣ ಮುತ್ಯಾಲಮಡು ಬಳಿ ನಾಕಾ ಬಂದಿ ರಚಿಸಿದ ಅಧಿಕಾರಿಗಳ ತಂಡ ಮೂವರನ್ನು ವಶಕ್ಕೆ ಪಡೆದರು. ವಿಚಾರಣೆ ನಡೆಸಿದಾಗ ಇನ್ನೂ ಮೂವರ ಬಗ್ಗೆ ಮಾಹಿತಿ ನೀಡಿದರು ಎಂದು ವಲಯ ಅರಣ್ಯಾಧಿಕಾರಿ ರಘು ತಿಳಿಸಿದರು.

ನಂತರ ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದಾಗ ಉಳಿದ ಮೂವರು ಸಮೀಪದ ಕಾಡಂಚಿನಲ್ಲಿ ತಮ್ಮ ಫೋರ್ಡ್ ಕಾರಿನಲ್ಲಿದ್ದು, ಅರಣ್ಯಾಧಿಕಾರಿಗಳನ್ನು ಕಂಡ ಕೂಡಲೇ ಕಾರನ್ನು ಲಾಕ್ ಮಾಡಿಕೊಂಡು ಪರಾರಿಯಾದರು.

ಕಾರನ್ನು ತೆರೆದು ನೋಡಿದಾಗ ಅದರಲ್ಲಿ ಗುಂಡುಗಳ ಸಹಿತ ಇದ್ದ ಬಂದೂಕು, ಮಚ್ಚು, ಕುಡುಗೋಲು ಪತ್ತೆ ಆಗಿದೆ. ಬೈಕ್ ಹಾಗೂ ಕಾರನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಆರೋಪಿಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ರಘು ತಿಳಿಸಿದರು.

Share this article