ಮಹಿಳಾ ವೈದ್ಯೆ ಸೇರಿ ಮೂವರು ವೈದ್ಯರ ಬಂಧನ

KannadaprabhaNewsNetwork |  
Published : Apr 29, 2026, 01:30 AM ISTUpdated : Apr 29, 2026, 04:39 AM IST
Dr Divya chethana

ಸಾರಾಂಶ

ಭ್ರೂಣಲಿಂಗ ಅಕ್ರಮ ಪತ್ತೆ ಪ್ರಕರಣದ ಆರೋಪದ ಮೇರೆಗೆ ಕೆ.ಆರ್.ಪೇಟೆಯ ಎರಡು ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳಲ್ಲಿ ಓರ್ವ ಮಹಿಳಾ ವೈದ್ಯೆಯೂ ಸೇರಿದಂತೆ ಮೂವರು ವೈದ್ಯರನ್ನು  ಪೊಲೀಸರು ಬಂಧಿಸಿದ್ದಾರೆ.  

  ಮಂಡ್ಯ : ಭ್ರೂಣಲಿಂಗ ಅಕ್ರಮ ಪತ್ತೆ ಪ್ರಕರಣದ ಆರೋಪದ ಮೇರೆಗೆ ಕೆ.ಆರ್.ಪೇಟೆಯ ಎರಡು ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳಲ್ಲಿ ಓರ್ವ ಮಹಿಳಾ ವೈದ್ಯೆಯೂ ಸೇರಿದಂತೆ ಮೂವರು ವೈದ್ಯರನ್ನು ಕೆ.ಆರ್.ಪೇಟೆ ಪಟ್ಟಣ ಮತ್ತು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೋರ್ವ ಮಹಿಳಾ ವೈದ್ಯೆಗಾಗಿ ಶೋಧನಾ ಕಾರ್ಯ ನಡೆಸುತ್ತಿದ್ದಾರೆ.

ಕೆ.ಆರ್.ಪೇಟೆಯ ಚೇತನ ಮೆಟರ್ನಿಟಿ ಸೆಂಟರ್‌

ಕೆ.ಆರ್.ಪೇಟೆಯ ಚೇತನ ಮೆಟರ್ನಿಟಿ ಸೆಂಟರ್‌ನ ಡಾ.ದಿವ್ಯಚೇತನಾ, ನಾವಿ ಡಯಾಗ್ನೋಸ್ಟಿಕ್ ಸೆಂಟರ್‌ನ ಡಾ.ವೈ.ಆರ್.ಹರ್ಷಿತ್, ಕುಶಾಲ್ ಡಯಾಗ್ನೋಸ್ಟಿಕ್ ಸೆಂಟರ್‌ನ ಡಾ.ಹರೀಶ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಡಾ.ಪ್ರಿಯಾಂಕ ಎಂಬ ವೈದ್ಯೆ ತಲೆಮರೆಸಿಕೊಂಡಿದ್ದು, ಆಕೆಗಾಗಿ ಪೊಲೀಸರು ಎಲ್ಲೆಡೆ ಶೋಧನೆ ನಡೆಸುತ್ತಿದ್ದಾರೆ.

ಅಕ್ರಮವಾಗಿ ಬಳಕೆ ಮಾಡಿಕೊಂಡು ಲಿಂಗಪತ್ತೆ

ಕೆ.ಆರ್.ಪೇಟೆಯ ಎರಡು ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳು ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರಗಳನ್ನು ಅಕ್ರಮವಾಗಿ ಬಳಕೆ ಮಾಡಿಕೊಂಡು ಲಿಂಗಪತ್ತೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ರಾಮನಗರ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಗೆ ಶೋಧನೆ ಮಾಡಲು ಆದೇಶ ಹೊರಡಿಸಿದ್ದರು.

ಅದರಂತೆ ಏ.೧೬ರಂದು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಕೆ.ಆರ್.ಪೇಟೆಯ ನಾವಿ ಡಯಾಗ್ನೋಸ್ಟಿಕ್ ಸೆಂಟರ್, ಕುಶಾಲ್ ಡಯಾಗ್ನೋಸ್ಟಿಕ್ ಸೆಂಟರ್, ಡಿಎಚ್‌ಒ ಕಚೇರಿಯ ಜಾರಿ ಅಧಿಕಾರಿ ಕಚೇರಿ ಹಾಗೂ ೬ ಸಾರ್ವಜನಿಕ ಆಸ್ಪತ್ರೆ ಸೇರಿ ೯ ಕಡೆ ದಾಳಿ ನಡೆಸಿ ಸರ್ಕಾರಿ ನೌಕರರ ಅಧಿಕಾರ ದುರುಪಯೋಗ ಹಾಗೂ ಅಪರಾಧಿ ಕೃತ್ಯ ನಡೆಸಿರುವುದನ್ನು ಪತ್ತೆ ಹಚ್ಚಿದ್ದರು.

ಕುಶಾಲ್‌ ಡಯಾಗ್ನೋಸ್ಟಿಕ್‌ ಸೆಂಟರ್‌ನಲ್ಲಿ ೭ ಪ್ರಕರಣಗಳಲ್ಲಿ ೧೮ ವರ್ಷಕ್ಕಿಂತ ಕೆಳಗಿನ ಹೆಣ್ಣು ಮಕ್ಕಳಿಗೆ ಸ್ಕ್ಯಾನಿಂಗ್ ಮಾಡಿರುವುದು. ೬೪ ಪ್ರಕರಣಗಳಲ್ಲಿ ೧೮ ವರ್ಷಕ್ಕಿಂತ ಹೆಚ್ಚು ೨೦ ವರ್ಷಕ್ಕಿಂತ ಕಡಿಮೆ ಇರುವ ಹೆಂಗಸರಿಗೆ ವಯಸ್ಸಿನ ದೃಢೀಕರಣ ದಾಖಲೆಗಳನ್ನು ಪಡೆದುಕೊಳ್ಳದೆ ಸ್ಕ್ಯಾನಿಂಗ್ ಮಾಡಲಾಗಿತ್ತು. ಕಡತಗಳಲ್ಲಿ ಮಹಿಳೆಯರ ವಯಸ್ಸಿನ ದೃಢೀಕರಣ ದಾಖಲೆ ಪಡೆದು ಪರಿಶೀಲಿಸದೆ ಸ್ಕ್ಯಾನಿಂಗ್ ಮಾಡಿರುವುದು ಕಂಡುಬಂದಿತ್ತು.

ಕೆ.ಆರ್.ಪೇಟೆ ತಾಲೂಕು ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞರು ಮಹಿಳೆಯರ ಗರ್ಭಧಾರಣೆ ಸಂಬಂಧ ಪರೀಕ್ಷೆಗಳನ್ನು ನಡೆಸಲು ಉನ್ನತ ದರ್ಜೆಯ ಸರ್ಕಾರಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಬೇಕಿದ್ದರೂ ಸಹ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳ ಲೆಟರ್‌ಹೆಡ್‌ಗಳಲ್ಲಿ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳಿಗೆ ಶಿಫಾರಸು ಮಾಡುವ ಮೂಲಕ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳ ಆಡಳಿತ ಮಂಡಳಿಗೆ ಅನುಕೂಲ ಮಾಡಿಕೊಡುತ್ತಿರುವುದು ಬೆಳಕಿಗೆ ಬಂದಿತ್ತು.

ಸರ್ಕಾರಿ ವೈದ್ಯಾಧಿಕಾರಿಗಳ ಈ ಧೋರಣೆಯಿಂದ ಸಾರ್ವಜನಿಕರು ವಿಧಿಯಿಲ್ಲದೆ ಹೆಚ್ಚಿನ ಶುಲ್ಕವನ್ನು ಭರಿಸಿ ಪರೀಕ್ಷೆಗೆ ಒಳಪಡಬೇಕಾದ ಅನಿವಾರ್ಯತೆ ಉಂಟಾಗಿರುವುದು ಕೂಡ ಲೋಕಾಯುಕ್ತ ತನಿಖೆಯಿಂದ ಗೊತ್ತಾಗಿತ್ತು.

ಕೆ.ಆರ್.ಪೇಟೆಯ ನಾವಿ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಪಿಸಿ ಪಿಎನ್‌ಡಿಟಿ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿ ೨೦೨೪ರಲ್ಲಿ ೧೮ ಮತ್ತು ೨೦೨೫ರಲ್ಲಿ ೫ ಪ್ರಕರಣ ಸೇರಿದಂತೆ ಒಟ್ಟು ೨೪ ಬಾಲ ಗರ್ಭಿಣಿಯರನ್ನು ಸ್ಕ್ಯಾನ್ ಮಾಡಲಾಗಿದೆ. ನಾವಿ ಡಯಾಗ್ನೋಸ್ಟಿಕ್ ಸೆಂಟರ್‌ನ ರೇಡಿಯಾಲಜಿಸ್ಟ್ ಡಾ.ವೈ.ಆರ್.ಹರ್ಷಿತ್ ಸ್ಥಳೀಯ ಪೊಲೀಸ್ ಠಾಣೆ ಮತ್ತು ಸಕ್ಷಮ ಪ್ರಾಧಿಕಾರಕ್ಕೆ ವರದಿ ಮಾಡದೆ ಪೋಕ್ಸೋ ಕಾಯ್ದೆಯ ಸೆಕ್ಷನ್ ೧೯ ಉಲ್ಲಂಘಿಸಿ ಅಪ್ರಾಪ್ತ ಗರ್ಭಿಣಿಯರ ಸ್ಕ್ಯಾನಿಂಗ್ ಪ್ರಕ್ರಿಯೆ ನಡೆಸಿರುವುದಾಗಿ ವರದಿಯಲ್ಲಿ ತಿಳಿಸಿದ್ದರು.

ಲೋಕಾಯುಕ್ತ ವರದಿಯಾಧರಿಸಿ ಏ.೨೨ರಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪಿ.ಎಸ್.ಆಶಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಶ್ಮಿ ಅವರು ಪೋಕ್ಸೋ ಕಾಯ್ದೆಯಡಿ ನ್ಯೂನತೆಗಳಿರುವ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳಿಗೆ ಖುದ್ದು ಪರಿಶೀಲನೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಲು ಉಪ ಲೋಕಾಯುಕ್ತರು ನಿರ್ದೇಶಿಸಿದ್ದರ ಮೇರೆಗೆ ಮೂವರು ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಿದ್ದರು.

ಈ ಕೃತ್ಯವು ಕಲಂ ೬೫(೧), ೬೪(೨)(ಎಂ), ೩೭೬(೨)(ಎನ್) ಭಾರತೀಯ ನ್ಯಾಯ ಸಂಹಿತೆ-೨೦೨೩ ಮತ್ತು ೬ ಮತ್ತು ೨೧ ಫೋಕ್ಸೋ ಕಾಯ್ದೆ ೨೦೧೨ರಡಿ ಬರುವುದರಿಂದ ಒಟ್ಟು ೧೨ ಮೊಕದ್ದಮೆಗಳನ್ನು ಕೆ.ಆರ್.ಪೇಟೆ ಪಟ್ಟಣ ಮತ್ತು ಗ್ರಾಮಾಂತರ ಠಾಣೆಯಲ್ಲಿ ದಾಖಲಿಸಿ ಪೊಲೀಸರ ಮೂಲಕ ಮೂವರು ವೈದ್ಯರನ್ನು ಬಂಧಿಸಿದ್ದರು.

ಈ ಕ್ರಮವು ಕೆ.ಆರ್.ಪೇಟೆ ತಾಲೂಕು ವ್ಯಾಪ್ತಿಗೆ ಮಾತ್ರ ಸಂಬಂಧಪಟ್ಟಿದ್ದು, ಉಳಿದಂತೆ ಜಿಲ್ಲೆಯ ಮಳವಳ್ಳಿ, ಮದ್ದೂರು, ನಾಗಮಂಗಲ, ಕೆ.ಆರ್.ಪೇಟೆ, ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ತಾಲೂಕುಗಳಿಗೆ ಸಂಬಂಧಪಟ್ಟ ತನಿಖೆಯು ಪ್ರಗತಿಯಲ್ಲಿರುವುದಾಗಿ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಅಮಿತ್‌ ಶಾ ವಿಶೇಷ ಕರ್ತವ್ಯಾಧಿಕಾರಿ ಎಂದು ನಂಬಿಸಿ ವೈದ್ಯನಿಗೆ 2.70 ಕೋಟಿ ರು. ವಂಚನೆ
ಪೆಟ್ರೋಲ್‌ ಬಾಂಬ್‌ ಸ್ಫೋಟಿಸಿ ರಜತ್‌ ರೀಲ್ಸ್‌ ಶೂಟ್‌: ಮತ್ತೆ ಪುಂಡಾಡ