ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರ ಹೊರವಲಯದ ಮಾದಾವರದಲ್ಲಿ ಮೂರಂತಸ್ತಿನ ಕಟ್ಟಡದ ಪಾಯ ಭೂಮಿಯೊಳಗೆ ಕುಸಿದು, ಬಿರುಕು ಬಿಟ್ಟಿದ್ದು, ಕಟ್ಟಡದಲ್ಲಿನ ಆರು ಮನೆಗಳ ನಿವಾಸಿಗಳು ಹಾಗೂ ಒಂದು ಮಳಿಗೆಯ ಕಾರ್ಮಿಕರನ್ನು ತೆರವು ಮಾಡಿಸಲಾಗಿದೆ.ಮಾದಾವರದಲ್ಲಿ ಶ್ರೀನಿವಾಸ ರೆಡ್ಡಿ ಎಂಬುವರು ಎರಡು ವರ್ಷಗಳ ಹಿಂದಷ್ಟೇ ಮೂರಂತಸ್ತಿನ ಕಟ್ಟಡ ನಿರ್ಮಿಸಿದ್ದರು. ಅದರಲ್ಲಿ ಆರು ಮನೆಗಳನ್ನು ಬಾಡಿಗೆಗೆ ನೀಡಲಾಗಿತ್ತು. ಭಾನುವಾರ ಬೆಳಗ್ಗೆ ಕಟ್ಟಡದ ಪಾಯ ನೆಲದೊಳಗೆ ಇಳಿದಿರುವುದು ಹಾಗೂ ಬಿರುಕು ಬಿಟ್ಟಿರುವುದನ್ನು ಮಳಿಗೆ ಬಾಡಿಗೆದಾರ ಗಮನಿಸಿ ಮಾಲೀಕರಿಗೆ ಮಾಹಿತಿ ನೀಡಿದ್ದಾನೆ. ಮುಂಜಾಗ್ರತಾ ಕ್ರಮವಾಗಿ ಕಟ್ಟಡದಲ್ಲಿದ್ದ ಎಲ್ಲ ವಾಸಿಗಳನ್ನು ಹೊರಗೆ ಕರೆಸಿಕೊಳ್ಳಲಾಯಿತು.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮಾಲೀಕ ಶ್ರೀನಿವಾಸ ರೆಡ್ಡಿ, ನಾನು ಗುತ್ತಿಗೆದಾರನಾಗಿ ಕೆಲಸ ಮಾಡಿದ್ದೇನೆ. ಎರಡು ವರ್ಷಗಳ ಹಿಂದಷ್ಟೇ ಗುಣಮಟ್ಟ ಕಾಪಾಡಿಕೊಂಡು ಕಟ್ಟಿಸಿದ್ದೇನೆ. ಆದರೆ, ಕಟ್ಟಡ ಏಕೆ ಕುಸಿದಿದೆ ಎನ್ನುವುದು ಗೊತ್ತಾಗಿಲ್ಲ ಎಂದಿದ್ದಾರೆ.ಕಟ್ಟಡ ಕುಸಿಯುತ್ತಿದ್ದಂತೆ ಬಾಡಿಗೆದಾರರು ನಿರಾಶ್ರಿತರಾಗಿ ಬೀದಿಗೆ ಬಂದಿದ್ದಾರೆ. ಮನೆಯಲ್ಲಿನ ವಸ್ತುಗಳನ್ನು ಬೀದಿಯಲ್ಲಿ ಇಟ್ಟುಕೊಂಡು ಮುಂದೆ ಎಲ್ಲಿಗೆ ಹೋಗುವುದು ಎನ್ನುವ ಚಿಂತೆಯಲ್ಲಿ ಕುಳಿತಿದ್ದರು.
ಮಾದನಾಯಕನಹಳ್ಳಿ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇತ್ತೀಚೆಗೆ ಕೋರಮಂಗಲದ ವೆಂಕಟಾಪುರದಲ್ಲಿ 750 ಚದರಡಿ ಜಾಗದಲ್ಲಿ ನಿರ್ಮಿಸಿದ್ದ 5 ಅಂತಸ್ತಿನ ಕಟ್ಟಡ ವಾಲಿತ್ತು. ಕಟ್ಟಡದ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ.
ರಾಜಕಾಲುವೆ ಒತ್ತುವರಿ ಶಂಕೆ:ಕಟ್ಟಡ ಒತ್ತುವರಿಯಾಗಿರುವ ರಾಜಕಾಲುವೆ ಜಾಗದಲ್ಲಿ ನಿರ್ಮಾಣಗೊಂಡಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ರಾಜಕಾಲುವೆ ಇರುವ ಕಾರಣ ಆ ಜಾಗವನ್ನು ಬಿಡಬೇಕಿತ್ತು. ಆದರೆ, ಜಾಗ ಬಿಡದೆ ಮೇಲ್ಮೈಯಲ್ಲಿ ಮಣ್ಣು ಹಾಕಿ ಮುಚ್ಚಿ ಕಟ್ಟಡ ನಿರ್ಮಿಸಲಾಗಿದೆ. ಹೀಗಾಗಿ, ಬೃಹತ್ ಕಟ್ಟಡದ ಭಾರ ತಾಳದೆ ಮಣ್ಣು ಕುಸಿದು ಇಡೀ ಕಟ್ಟಡಕ್ಕೆ ಅಪಾಯವಾಗಿದೆ ಎಂದು ಸ್ಥಳೀಯ ಶಂಕಿಸಿದ್ದಾರೆ.