ಬೆಂಗಳೂರು : ಪಶ್ಚಿಮ ಬಂಗಾಳದವರು ವಾಸವಾಗಿದ್ದ 12 ಶೆಡ್‌ಗಳಿಗೆ ಬೆಂಕಿ ತಗುಲಿದ ಪರಿಣಾಮ ಸುಟ್ಟು ಕರಕಲಾಗಿರುವ ಘಟನೆ ಬಂಡೆಪಾಳ್ಯ ಠಾಣೆ ವ್ಯಾಪ್ತಿಯ ಸೋಮಸಂದ್ರಪಾಳ್ಯದಲ್ಲಿ ನಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎಚ್‌ಎಸ್‌ಆರ್ 2ನೇ ವಲಯದ 1ನೇ ಮುಖ್ಯರಸ್ತೆಯಲ್ಲಿ ಪ್ರಕಾಶ್ ಎಂಬುವರಿಗೆ ಸೇರಿದ 1.2 ಎಕರೆ ಜಾಗದಲ್ಲಿ ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ದುರ್ಘಟನೆ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಸುಮಾರು 100ಕ್ಕೂ ಹೆಚ್ಚು ಮಂದಿ ಚಿಂದಿ ಆಯುವ ಕೆಲಸ ಮಾಡಿಕೊಂಡು ಸೋಮಸಂದ್ರ ಪಾಳ್ಯದಲ್ಲಿರುವ ಪ್ರಕಾಶ್ ಎಂಬುವರಿಗೆ ಸೇರಿದ ಜಾಗದಲ್ಲಿರುವ ಶೆಡ್‌ಗಳಲ್ಲಿ ವಾಸವಾಗಿದ್ದಾರೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಎಲ್ಲರೂ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾರೆ. ಈ ಮಧ್ಯೆ ಮುಂಜಾನೆ 3 ಗಂಟೆ ಸುಮಾರಿಗೆ ಶೆಡ್‌ನಲ್ಲಿ ಆಕಸ್ಮಿಕ ಬೆಂಕಿ ತಗುಲಿ, ಶೆಡ್‌ನಲ್ಲಿದ್ದ 6 ಕ್ಕೂ ಹೆಚ್ಚು 5 ಕೆ.ಜಿ. ತೂಕದ ಸಿಲಿಂಡರ್‌ಗಳು, ಫ್ರಿಜ್‌ಗಳು ಸ್ಫೋಟಗೊಂಡಿವೆ. ಬೈಕ್‌ಗಳು, ಅಡುಗೆ ಮನೆಯ ವಸ್ತುಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಶೆಡ್‌ನಲ್ಲಿ ಯಾರು ಇಲ್ಲದ ಪರಿಣಾಮ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಂಜಾ ಸೇವಿಸಿದ್ದವರಿಂದ ಕೃತ್ಯ ನಡೆದಿದೆ ಎಂಬ ಆರೋಪವಿದೆ. ಆದರೆ, ಖಾಲಿ ಜಾಗವಾದರಿಂದ ಕೆಲ ಯುವಕರು ಬಂದು ಗುಂಪು ಸೇರುತ್ತಿದ್ದರು. ಗಾಂಜಾ ಸೇವನೆಯಿಂದ ಕೃತ್ಯ ನಡೆದಿರುವ ಬಗ್ಗೆ ಮಾಹಿತಿ ಇಲ್ಲ. ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೆಕೆಗೆ ನಿದ್ದೆ ಬರುತ್ತಿರಲಿಲ್ಲ. ಬಾಗಿಲು ತೆರೆದು ಹೊರಗೆ ಬಂದಾಗ ಬೆಂಕಿ ಉರಿಯುತ್ತಿತ್ತು. ಜನರೆಲ್ಲರೂ ಸೇರಿದ್ದರು. ಅದಕ್ಕೂ ಮೊದಲು ಗಾಂಜಾ ಸೇವಿಸಿದ್ದ ಹುಡುಗರು ಗಲಾಟೆ ಮಾಡುತ್ತಿದ್ದರು. ಗಲಾಟೆ ಬಳಿಕ ದುರಂತ ಸಂಭವಿಸಿದೆ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ನಾರಾಯಣ್ ಮತ್ತು ಬಂಡೇಪಾಳ್ಯ ಠಾಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸೋಮಸಂದ್ರ ಪಾಳ್ಯ ಸುತ್ತ-ಮುತ್ತ ಅಕ್ರಮ ವಾಸಿಗಳು ಹೆಚ್ಚಾಗಿದ್ದು, ಬಾಂಗ್ಲಾದೇಶದಿಂದ ಬಂದು ಪಶ್ಚಿಮ ಬಂಗಾಳ ಎಂದು ದಾಖಲೆ ತೋರಿಸುತ್ತಿದ್ದಾರೆ. ಮೊದಲು ಕಸ ಆಯುತ್ತಿದ್ದರು. ಇದೀಗ ಗಾಂಜಾ ಮಾರಾಟ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಕಳೆದ ಎರಡು ದಿನದಿಂದ ಎಲ್ಲರು ಊರಿಗೆ ಹೋಗಿದ್ದಾರೆ. ಸ್ಥಳೀಯ ಗಾಂಜಾ ಗಿರಾಕಿಗಳು ಬಂದು ಗಲಾಟೆ ಮಾಡಿದ್ದಾರೆ. ಗಾಂಜಾ ಸಿಕ್ತಿಲ್ಲ ಎಂಬ ಸಿಟ್ಟಿಗೆ ಗಲಾಟೆ ಮಾಡಿದ್ದಾರೆ. ಈ ವೇಳೆ ಬೆಂಕಿ ಹಚ್ಚಿರುವ ಬಗ್ಗೆ ಮಾಹಿತಿ ಬಂದಿದೆ. ಈ ಹಿಂದೆಯೂ ಗಾಂಜಾ ಸಂಬಂಧ ಪೊಲೀಸರಿಗೆ ದೂರು ಕೊಡಲಾಗಿತ್ತು. ಕೆಲವರನ್ನು ಬಂಧಿಸಿದ್ದರು. ಆದರೆ, ಸರಿಯಾದ ಕ್ರಮ ಆಗಿಲ್ಲ ಎಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಆರೋಪಿಸಿದ್ದಾರೆ.