31ಕ್ಕೆ ಬೆಂಗಳೂರು ನಗರದಲ್ಲಿ ತಂಬಾಕು ಜಾಗೃತಿ ಕಾರ್ಯಕ್ರಮ : ಪೊಲೀಸ್‌ ಆಯುಕ್ತ ದಯಾನಂದ

KannadaprabhaNewsNetwork |  
Published : May 29, 2025, 01:38 AM ISTUpdated : May 29, 2025, 04:17 AM IST
B Dayananda

ಸಾರಾಂಶ

ನಗರ ಪೊಲೀಸ್‌ ಘಟಕದಿಂದ ‘ವಿಶ್ವ ಧೂಮಪಾನ ನಿಷೇಧ ದಿನ’ದ ಪ್ರಯುಕ್ತ ಮೇ 31ರಂದು ತಂಬಾಕು ನಿಯಂತ್ರಣ ಕಾನೂನುಗಳ ಪಾಲನೆ ಕುರಿತು ನಗರದಾದ್ಯಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.

 ಬೆಂಗಳೂರು : ನಗರ ಪೊಲೀಸ್‌ ಘಟಕದಿಂದ ‘ವಿಶ್ವ ಧೂಮಪಾನ ನಿಷೇಧ ದಿನ’ದ ಪ್ರಯುಕ್ತ ಮೇ 31ರಂದು ತಂಬಾಕು ನಿಯಂತ್ರಣ ಕಾನೂನುಗಳ ಪಾಲನೆ ಕುರಿತು ನಗರದಾದ್ಯಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಪೊಲೀಸ್‌ ಘಟಕದಿಂದ ನಗರದಲ್ಲಿ ಜೂ.2ರವರೆಗೆ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು, ಅಪ್ರಾಪ್ತರಿಗೆ ತಂಬಾಕು ಮಾರಾಟ, ಶಿಕ್ಷಣ ಸಂಸ್ಥೆಗಳ ಬಳಿ ತಂಬಾಕು ಮಾರಾಟ ಮಾಡುವವರ ವಿರುದ್ಧ ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಲಿದ್ದಾರೆ ಎಂದು ಹೇಳಿದರು.

ಇ-ಸಿಗರೇಟ್‌ಗಳು ಮತ್ತು ವೇಪಿಂಗ್‌ ಸಾಧನಗಳನ್ನು ಒಳಗೊಂಡ ಎಲೆಕ್ಟ್ರಾನಿಕ್‌ ನಿಕೋಟಿನ್‌ ಡೆಲಿವರಿ ಸಿಸ್ಟಮ್ಸ್‌ಗಳ ನಿಷೇಧ ಸಂಬಂಧ ಮಾಲ್‌ಗಳು, ಕಾಫಿ ಬಾರ್‌ಗಳು ಮತ್ತು ಅಂಗಡಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಲಾಗುವುದು. ನಿಷೇಧಿತ ಹುಕ್ಕಾ ಬಾರ್‌ಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ಇದೀಗ ಅಂತಹ ಅಕ್ರಮ ಸ್ಥಳಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದರು.

ತಂಬಾಕು ವ್ಯಾಪಾರಿಗಳು ಬಿಬಿಎಂಪಿಯಿಂದ ಲೈಸೆನ್ಸ್‌ ಪಡೆಯುವುದು ಕಡ್ಡಾಯವಾಗಿದೆ. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ವ್ಯಾಪಾರಿಕ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲಿದ್ದಾರೆ. ತಂಬಾಕು ಮಾರಾಟ ಲೈಸೆನ್ಸ್‌ ಪಡೆಯುವ ಅಗತ್ಯತೆ ಮತ್ತು ಪ್ರಕ್ರಿಯೆ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.

ಟೋಯಿಂಗ್‌ ಶೀಘ್ರವೇ ರೂಪುರೇಷೆ ಸಿದ್ಧ‍: ನಗರದಲ್ಲಿ ಟೋಯಿಂಗ್‌ ಮರು ಜಾರಿ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ನಮ್ಮದೇ ವಾಹನಗಳನ್ನು ಬಳಸಬೇಕಾ ಅಥವಾ ಹೊಸ ವಾಹನ ಖರೀದಿಸಿ ಟೋಯಿಂಗ್‌ ಮಾಡಬೇಕಾ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಶೀಘ್ರದಲ್ಲೇ ಅದರ ರೂಪುರೇಷೆಗಳು ಸಿದ್ಧವಾಗಬೇಕಿದೆ. ಶೀಘ್ರದಲ್ಲೇ ನಗರದ ಸಂಚಾರ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ಟೋಯಿಂಗ್‌ ಮರು ಜಾರಿಯಾಗಲಿದೆ ಎಂದು ಪೊಲೀಸ್‌ ಆಯುಕ್ತ ದಯಾನಂದ ತಿಳಿಸಿದ್ದಾರೆ.

PREV
Read more Articles on

Recommended Stories

ಮೂವರು ಡ್ರಗ್ಸ್‌ ಪೆಡ್ಲರ್‌ ಬಂಧನ: 1,650 ಗ್ರಾಂ ಗಾಂಜಾ ಜಪ್ತಿ
ಪತಿಯ ಅನೈತಿಕ ಸಂಬಂಧಕ್ಕೆ ನೊಂದು ಪತ್ನಿ ಆತ್ಮಹತ್ಯೆ