ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರ ವ್ಯಾಪ್ತಿಯಲ್ಲಿ ಪಾನಮತ್ತ ಖಾಸಗಿ ಶಾಲಾ ವಾಹನಗಳ ಚಾಲಕರ ವಿರುದ್ಧ ಬೆಳಗ್ಗೆ 7 ರಿಂದ 10 ಗಂಟೆವರೆಗೆ ಸಂಚಾರ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದರು. ಈ ವೇಳೆ ಒಟ್ಟು 510 ವಾಹನಗಳ ತಪಾಸಣೆ ನಡೆಸಿದ ಪೊಲೀಸರು, ಪಾನಮತ್ತರಾಗಿದ್ದ 26 ಚಾಲಕರ ವಿರುದ್ಧ ಐಎಂವಿ ಕಾಯ್ದೆ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಈ ಚಾಲಕರ ಚಾಲನಾ ಪರವಾನಿಗೆ ರದ್ದುಪಡಿಸುವಂತೆ ಸಾರಿಗೆ ಇಲಾಖೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಏಕಮುಖ ಸಂಚಾರ:ಕಾನೂನು ಉಲ್ಲಂಘಿಸಿ ಏಕಮುಖ ಸಂಚಾರ ರಸ್ತೆಯಲ್ಲಿ ವಾಹನ ಚಲಾಯಿಸಿದವರಿಗೂ ಪೊಲೀಸರು ದಂಡಿಸಿದ್ದಾರೆ.
ಈ ಸಂಬಂಧ ಬುಧವಾರ ಮತ್ತು ಗುರುವಾರ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಒಟ್ಟು 5,458 ಪ್ರಕರಣಗಳನ್ನು ದಾಖಲಿಸಿದ್ದಾರೆ. ಸಾರ್ವಜನಿಕರ ಸುರಕ್ಷತಾ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಸಲಾಗುತ್ತದೆ ಎಂದು ಜಂಟಿ ಆಯುಕ್ತರು (ಸಂಚಾರ) ತಿಳಿಸಿದ್ದಾರೆ.ನಗರದಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ಏಕಮುಖ ರಸ್ತೆಗಳಲ್ಲಿ ವಿರುದ್ಧವಾಗಿ ವಾಹನಗಳನ್ನು ಚಲಾಯಿಸುವ ಚಾಲಕರು ಮತ್ತು ಸವಾರರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.