)
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೆ.ಆರ್. ಪುರದ ದೇವಸಂದ್ರ ನಿವಾಸಿ ರೋಷನ್ (28) ಇರಿತಕ್ಕೊಳಗಾದವ. ವಸೀಂ, ಖಲೀಲ್ ಬಂಧಿತರು. ಆಶಿಕ್ ಮತ್ತು ಮಾಮು ಎಂಬುವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಫೆ.1 ರಂದು ರಾತ್ರಿ 8 ಗಂಟೆ ಸುಮಾರಿಗೆ ದೇವಸಂದ್ರದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವಿವರ:ರೋಷನ್ ಆಟೋ ಚಾಲಕನಾಗಿದ್ದು, ಮಾಮು ಹಾಗೂ ಇತರೆ ಆರೋಪಿಗಳು ಕೂಡ ಆಟೋ ಚಾಲನೆ ಹಾಗೂ ಇತರೆ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದರು. ರೋಷನ್ ಮತ್ತು ಮಾಮು, ಇಬ್ಬರು ನೇಪಾಳ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದರು. ಇದೇ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಫೆ1ರಂದು ರಾತ್ರಿ 8 ಗಂಟೆ ಸುಮಾರಿಗೆ ಮಾಮು, ರೋಷನ್‌ನನ್ನು ಮಾತನಾಡಲು ದೇವಸಂದ್ರ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾನೆ. ಆಗ ಇಬ್ಬರ ನಡುವೆ ಯುವತಿ ವಿಚಾರಕ್ಕೆ ಮತ್ತೆ ವಾಗ್ವಾದ ನಡೆದಿದೆ. ಕೆಲ ಕ್ಷಣದ ನಂತರ ಮಾಮುನ ಸ್ನೇಹಿತರು ಸ್ಥಳಕ್ಕೆ ಬಂದಿದ್ದಾರೆ.
ಇದೇ ವೇಳೆ ಇಬ್ಬರ ನಡುವಿನ ಜಗಳ ತಾರಕಕ್ಕೇರಿದೆ. ಆಗ ಏಕಾಏಕಿ ಮಾಮು ಮತ್ತು ಗ್ಯಾಂಗ್ ಚಾಕುವಿನಿಂದ ರೋಷನ್ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ರೋಷನ್‌ನನ್ನು ಕೆ.ಆರ್.ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.ಇಬ್ಬರು ಆರೋಪಿಗಳ ಬಂಧಿಸಲಾಗಿದ್ದು, ಮತ್ತಿಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಕೆ.ಆರ್ ಪುರ ಠಾಣೆಯಲ್ಲಿ ಹತ್ಯೆ ಯತ್ನ ಪ್ರಕರಣ ದಾಖಲಾಗಿದೆ.