ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಪಾನಿಪೂರಿ ವ್ಯಾಪಾರಿಯ ಕೊಲೆ: ಇಬ್ಬರ ಬಂಧನ

KannadaprabhaNewsNetwork | Updated : Oct 22 2024, 04:44 AM IST

ಸಾರಾಂಶ

ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಇಬ್ಬರು ವ್ಯಕ್ತಿಗಳು ಪಾನಿಪೂರಿ ವ್ಯಾಪಾರಿ ತಲೆಗೆ ಪಾರ್ಕಿಂಗ್‌ ಟೈಲ್ಸ್‌ಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ಸುಮಾರು 11.30ಕ್ಕೆ ಬೆಂಗಳೂರು ಹೊಸೂರು ಮುಖ್ಯ ರಸ್ತೆಯ ಕೋನಪ್ಪನ ಅಗ್ರಹಾರದ ಸರ್ಕಲ್‌ ಬಳಿ ನಡೆದಿದೆ.

 ಬೆಂಗಳೂರು : ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಇಬ್ಬರು ವ್ಯಕ್ತಿಗಳು ಪಾನಿಪೂರಿ ವ್ಯಾಪಾರಿ ತಲೆಗೆ ಪಾರ್ಕಿಂಗ್‌ ಟೈಲ್ಸ್‌ಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ಸುಮಾರು 11.30ಕ್ಕೆ ಬೆಂಗಳೂರು ಹೊಸೂರು ಮುಖ್ಯ ರಸ್ತೆಯ ಕೋನಪ್ಪನ ಅಗ್ರಹಾರದ ಸರ್ಕಲ್‌ ಬಳಿ ನಡೆದಿದೆ.

ಕೋನಪ್ಪನ ಅಗ್ರಹಾರ ನಿವಾಸಿ ಸರ್ವೇಶ್‌ ಸಿಂಗ್‌(32) ಕೊಲೆಯಾದ ದುರ್ದೈವಿ. ಆರೋಪಿಗಳಾದ ಜಾರ್ಖಂಡ್‌ ಮೂಲದ ಸಹದೇವ(45) ಮತ್ತು ರಾಹುಲ್‌ ಕುಮಾರ್‌(26) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ:

ಉತ್ತರ ಪ್ರದೇಶ ಮೂಲದ ಸರ್ವೇಶ್‌ ಸಿಂಗ್‌ ಕಳೆದ 12 ವರ್ಷಗಳಿಂದ ಕೋನಪ್ಪನ ಅಗ್ರಹಾರ ಪುರಸಭೆ ಎದುರು ರಸ್ತೆ ಬದಿ ಪಾನಿಪೂರಿ ವ್ಯಾಪಾರ ಮಾಡುತ್ತಿದ್ದ ಕುಟುಂಬದೊಂದಿಗೆ ಕೋನಪ್ಪನ ಅಗ್ರಹಾರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಭಾನುವಾರ ರಾತ್ರಿ ಪಾನಿಪೂರಿ ವ್ಯಾಪಾರ ಮುಗಿಸಿಕೊಂಡು ಹೆದ್ದಾರಿ ಪಕ್ಕದಲ್ಲಿರುವ ಬಾರ್‌ಗೆ ತೆರಳಿ ಮದ್ಯ ಸೇವಿಸಲು ಮುಂದಾಗಿದ್ದಾನೆ.

ಈ ವೇಳೆ ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ಆರೋಪಿಗಳಾದ ಸಹದೇವ ಮತ್ತು ರಾಹುಲ್‌ ಕುಮಾರ್‌ ಪರಸ್ಪರ ಅವಾಚ್ಯ ಶಬ್ಧ ಬಳಸಿ ಜೋರಾಗಿ ಮಾತನಾಡುತ್ತಿದ್ದರು. ಈ ವೇಳೆ ಮೆಲ್ಲಗೆ ಮಾತನಾಡುವಂತೆ ಸರ್ವೇಶ್‌ ಸಿಂಗ್ ಹೇಳಿದ್ದಾನೆ. ಅಷ್ಟಕ್ಕೆ ಕೋಪಗೊಂಡ ಆರೋಪಿಗಳು, ಸರ್ವೇಶ್‌ ಸಿಂಗ್‌ ಜತೆಗೆ ಜಗಳ ತೆಗೆದಿದ್ದಾರೆ. ಈ ವೇಳೆ ಕೆಲ ಕಾಲ ಪರಪಸ್ಪರ ವಾಗ್ವಾದ ನಡೆದಿದೆ.

ಬಾರ್‌ನಿಂದ ಹೊರಗೆ ಬಂದ ಸರ್ವೇಶ್‌ ಸಿಂಗ್‌ ಸಿಗರೇಟ್ ಸೇದುವಾಗ ಮತ್ತೆ ಆರೋಪಿಗಳು ಬಂದು ಜಗಳ ತೆಗೆದಿದ್ದಾರೆ. ಬಳಿಕ ಸರ್ವೇಶ್‌ ಸಿಂಗ್‌ ಮನೆ ಕಡೆಗೆ ಹೊರಟ್ಟಿದ್ದಾನೆ. ಈ ವೇಳೆ ಆರೋಪಿಗಳ ಆತನನ್ನು ಹಿಂಬಾಲಿಸಿ ಮತ್ತೆ ಜಗಳ ತೆಗೆದು ಸರ್ವೆಶ್‌ ಸಿಂಗ್‌ ಮೇಲೆ ಹಲ್ಲೆ ಮಾಡಿ ಅಲ್ಲೇ ಬಿದ್ದಿದ್ದ ಪಾರ್ಕಿಂಗ್‌ ಟೈಲ್ಸ್‌ ತೆಗೆದು ತಲೆಗೆ ಹಲ್ಲೆ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಸರ್ವೇಶ್‌ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಜಾರ್ಖಂಡ್‌ ಮೂಲದವರಾಗಿದ್ದು, ಒಂದು ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದು, ಗಾರೆ ಕೆಲಸ ಮಾಡಿಕೊಂಡಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article