ಬೆಂಗಳೂರು : ಸ್ನೇಹಿತೆಯ ಗಮನಕ್ಕೆ ಬಾರದಂತೆ ಆಕೆಯ ಹೆಸರಿನಲ್ಲಿ ಮೂರು ಬ್ಯಾಂಕ್‌ಗಳಲ್ಲಿ ₹30 ಲಕ್ಷ ಸಾಲ ಪಡೆದು ವಂಚಿಸಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾರತಹಳ್ಳಿ ಅಶ್ವತ್ಥನಗರದ ಮೆಲಿಸ್ಸಾ ಪೌರಬ್ಬಾಸ್ ಎಂಬುವವರು ನೀಡಿದ ದೂರಿನ ಮೇರೆಗೆ ಗುರಪ್ಪನಪಾಳ್ಯದ ಮೊಹಮ್ಮದ್ ವಸೀಮ್ ಶೇಖ್(28) ಎಂಬಾತನ ವಿರುದ್ಧ ನಂಬಿಕೆ ದ್ರೋಹ ಮತ್ತು ವಂಚನೆ ಆರೋಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?:
ದೂರುದಾರೆ ಮೆಲಿಸ್ಸಾ 2019ರಂದು ನಗರದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿದ್ದರು. ಈ ವೇಳೆ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ವಸೀಪ್ ಶೇಖ್ ಪರಿಚಯವಾಗಿದ್ದು, ಇಬ್ಬರು ಸ್ನೇಹಿತರಾಗಿದ್ದರು. 2021ರಲ್ಲಿ ಮೆಲಿಸ್ಸಾ ಆ ಕಂಪನಿಯಲ್ಲಿ ಉದ್ಯೋಗ ತೊರೆದು ಬೇರೊಂದು ಕಂಪನಿಗೆ ಸೇರಿದ್ದರು.
ಮೂತ್ರಪಿಂಡಗಳ ಕಸಿ ನೆಪ:
2022ರಲ್ಲಿ ಮೊಹಮ್ಮದ್ ವಸೀಮ್ ಶೇಖ್, ಮೆಲಿಸ್ಸಾ ಅವರನ್ನು ಭೇಟಿಯಾಗಿ ‘ನನ್ನ ಎರಡೂ ಮೂತ್ರಪಿಂಡಗಳು ಹಾಳಾಗಿವೆ. ಕಸಿ ಮಾಡಿಸಿಕೊಳ್ಳಲು ಹಣದ ಅಗತ್ಯವಿದೆ. ನನಗೆ ನಿನ್ನ ಬಿಟ್ಟರೆ ಬೇರೆ ಪರಿಚಯಸ್ಥರು ಇಲ್ಲ. ಕಸಿ ಮಾಡಿಸಲು ₹10 ಲಕ್ಷ ಅಗತ್ಯವಿದ್ದು, ನಿನ್ನ ಬ್ಯಾಂಕ್ ಖಾತೆಯಿಂದ ₹10 ಲಕ್ಷ ಸಾಲ ಕೊಡಿಸು’ ಎಂದು ಕೇಳಿದ್ದಾನೆ. ಇದಕ್ಕೆ ಮೆಲಿಸ್ಸಾ ಒಪ್ಪಿಗೆ ಸೂಚಿಸಿದ್ದಾರೆ.
ಮೂರು ಬ್ಯಾಂಕ್‌ಗಳಲ್ಲಿ ತಲಾ ₹10 ಲಕ್ಷ ಸಾಲ
ಮೊಹಮ್ಮದ್ ವಸೀಮ್ ಶೇಖ್, ಮೆಲಿಸ್ಸಾ ಗಮನಕ್ಕೆ ಬಾರದಂತೆ ಆಕೆಯ ಹೆಸರಿನಲ್ಲಿ ಮೂರು ಬೇರೆ ಬ್ಯಾಂಕ್‌ಗಳಲ್ಲಿ ತಲಾ ₹10 ಲಕ್ಷದಂತೆ ಒಟ್ಟು ₹30 ಲಕ್ಷ ಸಾಲ ತೆಗೆದುಕೊಂಡಿದ್ದಾನೆ. ಈ ವಿಚಾರ ಗೊತ್ತಾಗಿ ಮೆಲಿಸ್ಸಾ ಪ್ರಶ್ನೆ ಮಾಡಿದಾಗ ₹7 ಲಕ್ಷ ವಾಪಾಸ್ ನೀಡಿದ್ದಾನೆ. ಉಳಿದ ಹಣ ವಾಪಾಸ್ ಕೇಳಲು ಕರೆ ಮಾಡಿದಾಗ ಮೊಹಮ್ಮದ್ ವಸೀಮ್ ಶೇಖ್ ಮೊಬೈಲ್ ಸ್ವಿಚ್ಡ್ ಆಫ್ ಬಂದಿದೆ.
ಹೀಗಾಗಿ ತಮಗೆ ನಂಬಿಕೆ ದ್ರೋಹ, ಮೋಸ ಮಾಡಿರುವ ಮೊಹಮ್ಮದ್ ವಸೀಮ್ ಶೇಖ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮೆಲಿಸ್ಸಾ ಎಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.