ಕನ್ನಡಪ್ರಭ ವಾರ್ತೆ ಬೆಂಗಳೂರು
ಜುವೆಲ್ಲರಿ ಅಂಗಡಿ ಮಾಲೀಕ ಮೋಹನ್ ಲಾಲ್ ಬಂಧಿತ. ಶ್ವೇತಾಗೌಡ ವಿರುದ್ಧ ವಂಚನೆ ಪ್ರಕರಣ ದಾಖಲಾದ ಬೆನ್ನಲ್ಲೇ ಆರೋಪಿ ಮೋಹನ್ ಲಾಲ್ ತಲೆಮರೆಸಿಕೊಂಡಿದ್ದ. ಆರೋಪಿಯ ಬೆನ್ನುಬಿದ್ದಿದ್ದ ಪೊಲೀಸರು, ರಾಜಸ್ಥಾನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಶ್ವೇತಾಗೌಡ ಚಿನ್ನಾಭರಣ ಖರೀದಿ ನೆಪದಲ್ಲಿ ಜುವೆಲ್ಲರಿ ಅಂಗಡಿ ಮಾಲೀಕ ಮೋಹನ್ ಲಾಲ್‌ನನ್ನು ಪರಿಚಯಿಸಿಕೊಂಡಿದ್ದಳು. ಆರಂಭದಲ್ಲಿ ಚಿನ್ನಾಭರಣ ಅಡಮಾನ ಇರಿಸಿ ಹಣ ಪಡೆಯುತ್ತಿದ್ದಳು. ನಂತರ ವಂಚಿಸಿ ಪಡೆದಿದ್ದ ಚಿನ್ನಾಭರಣಗಳನ್ನು ಈ ಮೋಹನ್ ಲಾಲ್‌ಗೆ ಕೊಟ್ಟು ವಿಲೇವಾರಿ ಮಾಡಿಸುತ್ತಿದ್ದಳು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಮೋಹನ್ ಲಾಲ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.ಪ್ರಕರಣದ ಹಿನ್ನೆಲೆ:
ಆರೋಪಿ ಶ್ವೇತಾಗೌಡ ತಾನು ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆ ಎಂದು ಕಮರ್ಷಿಯಲ್‌ಸ್ಟ್ರೀಟ್‌ನ ನವರತ್ನ ಜುವೆಲ್ಲರಿ ಅಂಗಡಿ ಮಾಲೀಕ ಸಂಜಯ್ ಭಾಪ್ನಾಗೆ ಪರಿಚಯಿಸಿಕೊಂಡು ₹2.42 ಕೋಟಿ ಮೌಲ್ಯದ 2.9 ಕೆ.ಜಿ. ಚಿನ್ನಾಭರಣ ಖರೀದಿಸಿ ಬಳಿಕ ಹಣ ನೀಡದೆ ವಂಚಿಸಿದ್ದಳು. ಈ ಸಂಬಂಧ ಸಂಜಯ್ ಭಾಪ್ನಾ ನೀಡಿದ ದೂರಿನ ಮೇರೆಗೆ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಶ್ವೇತಾಗೌಡ, ಈಕೆಯಿಂದ ಚಿನ್ನಾಭರಣ ಪಡೆದ ಆರೋಪದಡಿ ಬೈರಾರಾಮ್ ಮತ್ತು ಚೆನ್ನಾರಾಮ್ ಎಂಬುವವರನ್ನು ಬಂಧಿಸಿದ್ದರು.