ಪತಿ-ಪತ್ನಿ ಜಗಳವಾಡಿದ್ದಕ್ಕೆ ದಂಪತಿ ತಲೆ ಬೋಳಿಸಿದ ಗ್ರಾಮದ ಮುಖಂಡರು..!

KannadaprabhaNewsNetwork |  
Published : Sep 03, 2025, 01:00 AM IST
ಪತಿ, ಪತ್ನಿ ಜಗಳವಾಡಿದ್ದಕ್ಕೆ ತಲೆ ಬೋಳಿಸಿದ ಗ್ರಾಮದ ಮುಖಂಡರು, ಯಜಮಾನರು | Kannada Prabha

ಸಾರಾಂಶ

ಕ್ಷಲ್ಲಕ ಕಾರಣಕ್ಕೆ ಪತಿ, ಪತ್ನಿ ಜಗಳವಾಡಿದ್ದಕ್ಕೆ ಊರಿನ ಮುಖಂಡರು ದಂಪತಿಯ ತಲೆ ಬೋಳಿಸಿರುವ ಘಟನೆ ಮಳವಳ್ಳಿ ತಾಲೂಕಿನ ದ್ಯಾವಪಟ್ಟಣ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮಸ್ಥರ ವಿರುದ್ಧ ನೊಂದ ಮಹಿಳೆಯಿಂದ ದೂರು ದಾಖಲು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಕ್ಷಲ್ಲಕ ಕಾರಣಕ್ಕೆ ಪತಿ, ಪತ್ನಿ ಜಗಳವಾಡಿದ್ದಕ್ಕೆ ಊರಿನ ಮುಖಂಡರು ದಂಪತಿಯ ತಲೆ ಬೋಳಿಸಿರುವ ಘಟನೆ ತಾಲೂಕಿನ ದ್ಯಾವಪಟ್ಟಣ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಆಗಸ್ಟ್ 17ರಂದು ಬೆಳಗ್ಗೆ ಸುಮಾರು 6 ಗಂಟೆ ಸಮಯದಲ್ಲಿ ಮಹಿಳೆ ಹಾಗೂ ಮಕ್ಕಳು ತನ್ನ ಪತಿಯೊಂದಿಗೆ ಕುಡಿತದ ವಿಚಾರವಾಗಿ ಜಗಳವಾಡಿದ್ದಾರೆ. ಆಗ ಪತಿಯ ಬಲಗಾಲಿನ ಚಪ್ಪಲಿ ಆಕಸ್ಮಿಕವಾಗಿ ಪತ್ನಿಗೆ ತಗುಲಿದೆ.

ಜಗಳದ ಬಗ್ಗೆ ಗ್ರಾಮದ ಯಜಮಾನರುಗಳಿಗೆ ತಿಳಿಸಿ ಗಂಡನಿಗೆ ಬುದ್ಧಿವಾದ ಹೇಳಿಸಿದ್ದಾರೆ. ಆಗ ಗ್ರಾಮದ ಯಜಮಾನರು ನಿನ್ನ ಗಂಡ ಯಾರದೋ ಮಾತು ಕೇಳಿಕೊಂಡು ನಿನಗೆ ಚಪ್ಪಲಿಯಲ್ಲಿ ಹೊಡೆದಿದ್ದಾನೆ. ಆದ್ದರಿಂದ ನಿನಗೆ ಹಾಗೂ ನಿನ್ನ ಗಂಡನಿಗೆ ತಲಾ 5 ಸಾವಿರ ರು. ದಂಡ ಹಾಗೂ ಇಬ್ಬರೂ ತಲೆ ಕೂದಲು ಬೋಳಿಸಿಕೊಳ್ಳುವಂತೆ ಗ್ರಾಮದ ನ್ಯಾಯದ ಕಟ್ಟೆಯಲ್ಲಿ ತೀರ್ಪು ನೀಡಿದ್ದಾರೆ.

ಇಷ್ಟಕ್ಕೂ ಸುಮ್ಮನಾಗದ ಯಜಮಾನರು ನನ್ನ ಹಾಗೂ ನನ್ನ ಗಂಡನ ಮೇಲೆ ಒತ್ತಡ ಹಾಕಿ ತಲೆ ಕೂದಲು ತೆಗೆಸಿದ್ದಾರೆ. ಇದರಿಂದ ನಾನು ಮಹಿಳೆಯಾಗಿ ಗ್ರಾಮದ ಬೀದಿಗಳಲ್ಲಿ ತಿರುಗಾಡಲು ಆಗದೆ ತುಂಬಾ ತೊಂದರೆ ಅನುಭವಿಸುತ್ತಿದ್ದೇನೆ. ಊರಿನ ಯಜಮಾನರು ನನ್ನ ಪತಿಗೆ ಬುದ್ಧಿ ಹೇಳಲಿ ಎಂದು ಮನವಿ ಮಾಡಿದರೆ, ನಮಗೆ ಈ ರೀತಿ ಅವಮಾನ ಮಾಡಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೊಂದ ಮಹಿಳೆ ದೂರು ನೀಡಿದ್ದಾರೆ.

ದೂರು ಸ್ವೀಕರಿಸಿರುವ ಮಳವಳ್ಳಿ ತಾಲೂಕಿನ ಬೆಳಕವಾಡಿ ಠಾಣೆ ಪಿಎಸ್ ಐ ಬಿ.ವಿ ಪ್ರಕಾಶ್ ಪ್ರಕರಣ ದಾಖಲು ಮಾಡಿಕೊಂಡು ದ್ಯಾವಪಟ್ಟಣ ಗ್ರಾಮದ ನಾಗಣ್ಣ, ಮಹಾದೇವ, ಕುಮಾರ, ಸೋಮಣ್ಣ ಹಾಗೂ ಮಲ್ಲಯ್ಯ ಸೇರಿದಂತೆ ಐದು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಚಿರತೆ ದಾಳಿಗೆ ಎರಡು ಮೇಕೆಗಳು ಬಲಿ

ಹಲಗೂರು:

ಚಿರತೆ ದಾಳಿಯಿಂದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೇಕೆಗಳು ಬಲಿಯಾಗಿರುವ ಘಟನೆ ಸಮೀಪದ ಲಿಂಗಪಟ್ಟಣ ಗ್ರಾಮದಲ್ಲಿ ಮಂಗಳವಾರ ಮುಸುಕಿನ ಜಾವದಲ್ಲಿ ನಡೆದಿದೆ.

ಗ್ರಾಮದ ರೈತ ರಮೇಶ್ ಅವರು ಮೇಕೆ ಮತ್ತು ಹಸು ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ತಮ್ಮ ಮನೆ ಹಿಂಭಾಗದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕುರಿಗಳ ಮೇಲೆ ಮಂಗಳವಾರ ಮುಂಜಾನೆ ಏಕಾಏಕಿ ದಾಳಿ ಮಾಡಿದ ಚಿರತೆ ಕೊಟ್ಟಿಗೆ ಕಾಂಪೌಂಡ್ ಹಾರಿ ಎರಡು ಮೇಕೆಗಳನ್ನು ತಿಂದು ಹಾಕಿದೆ. ಪಕ್ಕದಲ್ಲಿ ಕಟ್ಟಿದ್ದ ಮೇಕೆಗಳ ಮೇಲೂ ದಾಳಿ ಮಾಡಿ ಗಾಯಗೊಳಿಸಿದೆ.

ಕುರಿ, ಮೇಕೆಗಳ ಚೀರಾಟ ಕೇಳಿದ ಮನೆಯವರು ಹೊರಗೆ ಬಂದು ನೋಡಿದಾಗ ಚಿರತೆ ಮೇಕೆಗಳನ್ನು ಬಿಟ್ಟು ಓಡಿ ಹೋಗಿದೆ. ಘಟನೆಯಿಂದಾಗಿ ಬೆಲೆಬಾಳುವ ಮೇಕೆಗಳು ಸತ್ತು ಹೋಗಿದ್ದು, ಸುಮಾರು 40 ಸಾವಿರ ರು. ನಷ್ಟ ಉಂಟಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಮಾಲೀಕರಾದ ರಮೇಶ್ ಮನವಿ ಮಾಡಿದರು.

ಚಿರತೆ ದಾಳಿ ಕಂಡು ಗ್ರಾಮದಲ್ಲಿ ಸಾರ್ವಜನಿಕರು ಓಡಾಡಲು ಭಯ ಬೀತರಾಗಿದ್ದಾರೆ. ಕೂಡಲೇ ಸಂಬಂಧಿಸಿದ ಅರಣ್ಯ ಇಲಾಖೆಯವರು ಬೋನು ಇಟ್ಟು, ಚಿರತೆ ಸೆರೆಗೆ ಕ್ರಮವಹಿಸಬೇಕೆಂದು ಗ್ರಾಮದ ಮುಖಂಡ ಗಂಗಾಧರ್ ಒತ್ತಾಯಿಸಿದರು.

ವಿಷಯ ತಿಳಿದ ಅರಣ್ಯ ಇಲಾಖೆ ಗಸ್ತು ಅರಣ್ಯ ಪಾಲಕ ಪಿ.ಎಂ.ಕೃಷ್ಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸಂತ್ರಸ್ತರಿಗೆ ಅರಣ್ಯ ಇಲಾಖೆ ವತಿಯಿಂದ ಸೂಕ್ತ ಪರಿಹಾರ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

PREV

Recommended Stories

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ವ್ಯಕ್ತಿ ಸಾವು
ಆಸ್ತಿಗಾಗಿ ಮಗನಿಂದಲೇ ತಂದೆಗೆ ಬ್ಲಾಕ್ ಮೇಲ್ ..!