ಮದ್ದೂರು : ಚೀಟಿ, ಅಧಿಕ ಬಡ್ಡಿ ನೀಡುವುದಾಗಿ ಹಣ ಪಡೆದು ಮತ್ತು ಕೆಲಸ ಕೊಡಿಸುವ ಆಮಿಷವೊಡ್ಡಿ ಸರ್ಕಾರಿ ನೌಕರರು, ಮಹಿಳೆಯರು ಹಾಗೂ ಸಾರ್ವಜನಿಕರಿಗೆ ಕೋಟ್ಯಂತರ ರು. ನಗದು ಹಾಗೂ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ವಂಚಿಸಿರುವ ಆರೋಪದ ಮೇಲೆ ದಂಪತಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ಲೀಲಾವತಿ ಬಡಾವಣೆಯ ಟಿ.ಆರ್. ದಿವ್ಯಾರಾಣಿ, ಈಕೆ ಪತಿ ಚಂದನ್, ಸಹೋದರ ಶಿವಪುರ ನಿವಾಸಿ ನೂತನ್ ವಿರುದ್ಧ ಬಡಾವಣೆ ನಿವಾಸಿ ಶೈಲಜಾ ಹಾಗೂ ಕೆ.ಎಚ್.ನಗರದ ನಿವಾಸಿ ಸಿ.ಪಿ.ನಾಗರಾಜು ಅವರು ನೀಡಿದ ದೂರಿನನ್ವಯ ಪೊಲೀಸರು ಬಂಧಿಸಿದ್ದಾರೆ.
ನಗದು, ಚಿನ್ನಾಭರಣ ವಂಚನೆ ನಂತರ ತಲೆಮರೆಸಿಕೊಂಡಿದ್ದ ದಿವ್ಯಾರಾಣಿ ಮತ್ತು ಚಂದನ್ ಅವರನ್ನು ತುಮಕೂರು ಜಿಲ್ಲೆ, ತುರುವೇಕೆರೆಯಲ್ಲಿ ವಶಕ್ಕೆ ಪಡೆದಿದ್ದರೆ, ನೂತನ್‌ನ್ನು ಶಿವಪುರದಲ್ಲಿ ಕಾರ್ಯಾಚರಣೆ ನಡೆಸಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ತಲೆಮರೆಸಿಕೊಂಡಿದ್ದ ಎಲ್ಲಾ ಆರೋಪಿಗಳ ವಿರುದ್ಧ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 173ರನ್ವಯ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಬಂಧಿತರನ್ನು ವಿಚಾರಣೆ ನಂತರ ಪಟ್ಟಣದ ಜೆಎಂಎಫ್‌ಸಿ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮಳವಳ್ಳಿ ಸಾರ್ವಜನಿಕ ಆಸ್ಪತ್ರೆ ಪ್ರಯೋಗಾಲಯದ ತಂತ್ರಜ್ಞನಾಗಿದ್ದ ಸಿ.ಆರ್.ದಿವ್ಯಾರಾಣಿ, 2ನೇ ಆರೋಪಿ ಅದೇ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರನಾಗಿರುವ ಚಂದನ್ ಅವರು ಪಟ್ಟಣ ಲೀಲಾವತಿ ಬಡಾವಣೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
3ನೇ ಆರೋಪಿ ಚಂದನ್ ಸಹೋದರ ನೂತನ್ ಮೈಸೂರಿನ ಕೆಎಸ್ಆರ್‌ಟಿಸಿ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದನು. ಈ ಎಲ್ಲಾ ಆರೋಪಿಗಳು ಮಂಡ್ಯ ವೈದ್ಯಕೀಯ ಕಾಲೇಜು, ಮಂಡ್ಯ, ಮಳವಳ್ಳಿ ಆಸ್ಪತ್ರೆ ವೈದ್ಯರು, ನರ್ಸ್‌ಗಳು, ಡಿ ಗ್ರೂಪ್ ನೌಕರರು ಹಾಗೂ ಕ್ಷಯರೋಗ ಆಸ್ಪತ್ರೆ ಕಚೇರಿ ಸಿಬ್ಬಂದಿ ಮತ್ತು ತೂಬಿನಕೆರೆ ಹೊರಾವರಣ ಕೇಂದ್ರದ ಸಿಬ್ಬಂದಿಗೆ ಚೀಟಿ, ಹೆಚ್ಚಿನ ಬಡ್ಡಿ ಹಣದ ಆಸೆ ತೋರಿಸಿ ಸುಮಾರು 5 ಕೋಟಿಗೂ ಮೀರಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಿ.ಆರ್.ದಿವ್ಯಾರಾಣಿ ಮತ್ತು ನೂತನ್ ಮದುವೆ ಮತ್ತಿತರ ಕಾರ್ಯಗಳಿಗೆ ತೆರಳವ ಅಮಾಯಕ ಮಹಿಳೆಯರಿಂದ ಚಿನ್ನಾಭರಣಗಳನ್ನು ಪಡೆದು ಸುಮಾರು 70 ರು. ಮೌಲ್ಯದ ಚಿನ್ನಾಭರಣಗಳನ್ನು ಪಡೆದು ವಂಚಿಸಿ ಪರಾರಿಯಾಗಿದ್ದರು.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದಿವ್ಯಾರಾಣಿ ಮತ್ತು ಚಂದನ್ ಮದ್ದೂರಿನ ಲೀಲಾವತಿ ಬಡಾವಣೆಯಲ್ಲಿದ್ದ ಮನೆ ಖಾಲಿ ಮಾಡಿಕೊಂಡು ಆನೆಕಲ್‌ನಲ್ಲಿ ತಮಗೆ ಪರಿಚಿತವಾಗಿರುವ ಮನೆ ಬಾಡಿಗೆ ಪಡೆದು ವಾಸವಾಗಿದ್ದರು.
ಪೊಲೀಸರು ತಮ್ಮ ಶೋಧ ಕಾರ್ಯ ಕೈಗೊಂಡ ಮಾಹಿತಿ ಅರಿತ ದಂಪತಿ ಬಾಡಿಗೆ ಮನೆಗೆ ಬೀಗ ಹಾಕಿಕೊಂಡು ತುರುವೇಕೆರೆಯಲ್ಲಿ ವಾಸವಾಗಿದ್ದರು. ಈ ಬಗ್ಗೆ ಮಾಹಿತಿ ಅರಿತ ಪೊಲೀಸರು ದಿವ್ಯಾರಾಣಿ ಮತ್ತು ಚಂದನ್, ಮತ್ತೋರ್ವ ಆರೋಪಿ ನೂತನ್‌ನನ್ನು ಮದ್ದೂರಿನ ಶಿವಪುರದಲ್ಲಿ ಬಂಧಿಸಿದ್ದಾರೆ.
ಬಂಧಿತ ಎಲ್ಲಾ ಆರೋಪಿಗಳು ವಂಚನೆ ಆರೋಪದ ಜೊತೆಗೆ ಗೆಜ್ಜಲಗೆರೆ ಮನ್ಮುಲ್‌ನಲ್ಲಿ ಮತ್ತು ಆರೋಗ್ಯ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಕೆಲ ಯುವಕರ ಪೋಷಕರಿಗೆ ಯಾಮಾರಿಸಿದ್ದರು. ರಾಮನಗರ, ಕೆ.ಆರ್.ನಗರದಲ್ಲಿ ಪ್ಯಾರಾಮೆಡಿಕಲ್ ಕಾಲೇಜು ತೆರೆಯುವುದಾಗಿ ಹಣ ವಸೂಲಿ ಮಾಡಿರುವುದೂ ಸಹ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಆರೋಪಿಗಳು ಇನ್ನೂ ವಂಚನೆ ಮತ್ತು ಮಹಿಳೆಯರ ಚಿನ್ನಾಭರಣ ದೋಚಿರುವ ಪ್ರಕ್ರಣದಲ್ಲಿ ಪೊಲೀಸರು ವಿವಿಧ ಆಯಾದಲ್ಲಿ ತನಿಖೆ ಕೈಗೊಂಡಿದ್ದಾರೆ.