ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಕರಣವೊಂದರಲ್ಲಿ ಗ್ರಾಹಕನಿಗೆ ಪರಿಹಾರ ನೀಡುವಂತೆ ಹೊರಡಿಸಲಾಗಿದ್ದ ಆದೇಶವನ್ನು ಪಾಲಿಸಲು ವಿಫಲವಾಗಿರುವ ಖಾಸಗಿ ಮಳಿಗೆಯೊಂದರ ವ್ಯವಸ್ಥಾಪಕ ನಿರ್ದೇಶಕನ ಬಂಧನಕ್ಕೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ವಾರೆಂಟ್ ಜಾರಿ ಮಾಡಿದೆ.
ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿರುವ ಸ್ಟ್ಯಾನ್ಲಿ ಆಟೋಮೋಟಿವ್ ಮಳಿಗೆಯ ವ್ಯವಸ್ಥಾಪಕ ನಿರ್ದೇಶಕನನ್ನು ಬಂಧಿಸಿ ಹಾಜರುಪಡಿಸುವಂತೆ ನಗರ ಪೊಲೀಸ್ ಆಯುಕ್ತರು ಹಾಗೂ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ನಿರ್ದೇಶನ ನೀಡಲಾಗಿದೆ.
ನಗರದ ನಿವಾಸಿ ದೀಪಕ್ ಗೌಡ ಎಂಬುವರು ತಮ್ಮ ಜಾಗ್ವಾರ್ ಕಾರಿಗೆ ಲೇದರ್ ಸೀಟ್ ಮತ್ತು ಒಳಾಂಗಣ ವಿನ್ಯಾಸ ಮಾಡಿಸಲು ಸ್ಟ್ಯಾನ್ಲಿ ಆಟೋಮೋಟಿವ್ ಮಳಿಗೆಯಲ್ಲಿ ಆರ್ಡರ್ ಮಾಡಿ ₹6.96 ಲಕ್ಷ ಪಾವತಿಸಿದ್ದರು. ಆದರೆ, ವಿನ್ಯಾಸ ಮತ್ತು ಸೀಟ್ ಕವರ್ ದೋಷಪೂರಿತವಾಗಿತ್ತು. ಈ ಹಿನ್ನೆಲೆಯಲ್ಲಿ ದೂರು ನೀಡಿದಾಗ, ಸರಿಪಡಿಸಿಕೊಡುವುದಾಗಿ ಹೇಳಿ ಕಾರನ್ನು ಪಡೆದಿದ್ದ ಮಳಿಗೆಯವರು ಸರಿಪಡಿಸಿರಲಿಲ್ಲ. ತಿಂಗಳುಗಟ್ಟಲೇ ಕಾರು ಮಳಿಗೆಯಲ್ಲೇ ನಿಂತಿತ್ತು. ಈ ಹಿನ್ನೆಲೆಯಲ್ಲಿ ದೀಪಕ್ ಗೌಡ ಅವರು ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವೇದಿಕೆ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ ವೇದಿಕೆ, ಸ್ಟ್ಯಾನ್ಲಿ ಮಳಿಗೆಯವರ ಸೇವೆಯಲ್ಲಿ ಲೋಪವಿರುವ ಕಾರಣ ಮಾಲೀಕರಿಂದ ಕಟ್ಟಿಸಿಕೊಂಡಿದ್ದ ₹6.57 ಲಕ್ಷವನ್ನು ಬಡ್ಡಿ ಸಮೇತ ಮರಳಿಸುವ ಜೊತೆಗೆ ಕಾನೂನು ಹೋರಾಟದ ಶುಲ್ಕವಾಗಿ ₹10 ಸಾವಿರ ಮರಳಿಸುವಂತೆ ಆದೇಶಿಸಿತ್ತು.
ಗ್ರಾಹಕರ ವೇದಿಕೆ ಆದೇಶ ನೀಡಿ ಮೂರು ವರ್ಷಗಳು ಕಳೆದರೂ ಪರಿಹಾರ ಮೊತ್ತ ಪಾವತಿಸದ ಹಿನ್ನೆಲೆಯಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕನನ್ನು ಬಂಧಿಸಿ ವೇದಿಕೆ ಎದುರು ಹಾಜರುಪಡಿಸುವಂತೆ 2023ರ ಡಿಸೆಂಬರ್ ತಿಂಗಳಲ್ಲಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸ್ ಠಾಣಾಧಿಕಾರಿಗೆ ನಿರ್ದೇಶನ ನೀಡಲಾಗಿತ್ತು. ಆದರೆ, ಆರೋಪಿಯನ್ನು ಹಾಜರುಪಡಿಸದ ಹಿನ್ನೆಲೆಯಲ್ಲಿ ಫೆ. 7ರಂದು ನಗರ ಪೊಲೀಸ್ ಆಯುಕ್ತರಿಗೆ ಪರಿಹಾರ ವೇದಿಕೆ ನಿರ್ದೇಶನ ನೀಡಿದೆ. ಅದರಂತೆ ಆಯುಕ್ತರು ಠಾಣಾ ಸಿಬ್ಬಂದಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.