ಅಪ್ರಾಪ್ತೆಯ ಅತ್ಯಾಚಾರ ಎಸಗಿದವಗೆ ಕಠಿಣ ಶಿಕ್ಷೆ; 10 ವರ್ಷ ಜೈಲು, ₹10 ಸಾವಿರ ದಂಡ

KannadaprabhaNewsNetwork | Updated : Mar 05 2024, 10:42 AM IST

ಸಾರಾಂಶ

ಏಳು ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ನಗರದ 2ನೇ ತ್ವರಿತಗತಿ ವಿಶೇಷ (ಪೋಕ್ಸೋ) ನ್ಯಾಯಾಲಯ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಏಳು ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ನಗರದ 2ನೇ ತ್ವರಿತಗತಿ ವಿಶೇಷ (ಪೋಕ್ಸೋ) ನ್ಯಾಯಾಲಯ ಆದೇಶಿಸಿದೆ.

ನಗರದ ಅಬ್ಬಿಗೆರೆ ನಿವಾಸಿ ನಾರಾಯಣ ಅಲಿಯಾಸ್‌ ಶ್ರೀನಿವಾಸ್‌ (32) ಶಿಕ್ಷೆಗೆ ಗುರಿಯಾದ ವ್ಯಕ್ತಿ. ಅಪರಾಧಿಗೆ ಶಿಕ್ಷೆಯ ಜೊತೆಗೆ ₹10 ಸಾವಿರ ದಂಡ ವಿಧಿಸಿರುವ ನ್ಯಾಯಾಲಯ, ಪ್ರಕರಣದ ಸಂತ್ರಸ್ತೆಗೆ ₹4 ಲಕ್ಷ ಪರಿಹಾರ ಪಾವತಿಸುವಂತೆ ಬೆಂಗಳೂರು ಜಿಲ್ಲಾ ಕಾನೂನುಗಳ ಸೇವೆಗಳ ಪ್ರಾಧಿಕಾರಕ್ಕೆ ಇದೇ ವೇಳೆ ನಿರ್ದೇಶಿಸಿದೆ.

ಸಂತ್ರಸ್ತೆಯ ಪೋಷಕರು ಕೂಲಿ ಕಾರ್ಮಿಕರಾಗಿದ್ದರು. 2015ರ ಮೇ 13ರಂದು ಸಂತ್ರಸ್ತೆಯನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು ಕೆಲಸಕ್ಕೆ ತೆರಳಿದ್ದರು. ಈ ವಿಚಾರ ತಿಳಿದಿದ್ದ ನಾರಾಯಣ, ಮನೆಯೊಳಗೆ ಹೋಗಿ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದ. 

ಘಟನೆ ತಿಳಿದ ಪೋಷಕರು ಗಂಗಮ್ಮಗುಡಿ ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದರು. ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದರು.

ತನಿಖಾಧಿಕಾರಿಯಾಗಿದ್ದ ಅಂದಿನ ಇನ್‌ಸ್ಪೆಕ್ಟರ್‌ ಮೇರಿ ಶೈಲಜಾ ಅವರು (ಯಶವಂತ ಉಪ ವಿಭಾಗದ ಹಾಲಿ ಎಸಿಪಿ) ತನಿಖೆ ಪೂರ್ಣಗೊಳಿಸಿ ಸೂಕ್ತ ಸಾಕ್ಷ್ಯಧಾರಗಳೊಂದಿಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 

ಪ್ರಕರಣದ ವಿಚಾರಣೆ ನಡೆಸಿದ 2ನೇ ತ್ವರಿತಗತಿ ವಿಶೇಷ ನ್ಯಾಯಾಲಯ ಎಲ್ಲ ಸಾಕ್ಷಿಗಳನ್ನು ವಿಚಾರಣೆ ನಡೆಸಿದ ಬಳಿಕ ಆರೋಪಿಯನ್ನು ದೋಷಿಯಾಗಿ ಪರಿಗಣಿಸಿ ಶಿಕ್ಷೆ ವಿಧಿಸಿದೆ. ತನಿಖಾಧಿಕಾರಿಗಳ (ಪ್ರಾಸಿಕ್ಯೂಷನ್‌) ಪರ ಸರ್ಕಾರಿ ಅಭಿಯೋಜಕ ಎ.ವಿ.ಮಧು ವಾದ ಮಂಡಿಸಿದ್ದರು.

Share this article