ಕನ್ನಡ ಮಾತಾಡಬೇಕೆಂಬ ನಿಯಮ ಎಲ್ಲಿದೆ?: ಎಸ್‌ಬಿಐ ಮ್ಯಾನೇಜರ್‌ ದರ್ಪ

KannadaprabhaNewsNetwork | Published : May 20, 2025 11:45 PM
ನಾನು ಮಾತನಾಡುವುದು ಹಿಂದಿಯಲ್ಲಿ ಮಾತ್ರ. ಕನ್ನಡದಲ್ಲಿ ಮಾತನಾಡುವುದಿಲ್ಲ. ಕನ್ನಡದಲ್ಲಿ ಮಾತನಾಡಬೇಕೆಂದು ಎಲ್ಲಿದೆ ನಿಯಮ? ಇದು ಕರುನಾಡ ರಾಜಧಾನಿ ಬೆಂಗಳೂರಿನ ಹೊರವಲಯದ ಚಂದಾಪುರದ ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾದ ಮ್ಯಾನೇಜರ್‌ವೊಬ್ಬರು ಕನ್ನಡಿಗ ಗ್ರಾಹಕರ ಮೇಲೆ ತೋರಿದ ದರ್ಪ.
Follow Us

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾನು ಮಾತನಾಡುವುದು ಹಿಂದಿಯಲ್ಲಿ ಮಾತ್ರ. ಕನ್ನಡದಲ್ಲಿ ಮಾತನಾಡುವುದಿಲ್ಲ. ಕನ್ನಡದಲ್ಲಿ ಮಾತನಾಡಬೇಕೆಂದು ಎಲ್ಲಿದೆ ನಿಯಮ? ಇದು ಕರುನಾಡ ರಾಜಧಾನಿ ಬೆಂಗಳೂರಿನ ಹೊರವಲಯದ ಚಂದಾಪುರದ ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾದ ಮ್ಯಾನೇಜರ್‌ವೊಬ್ಬರು ಕನ್ನಡಿಗ ಗ್ರಾಹಕರ ಮೇಲೆ ತೋರಿದ ದರ್ಪ.

ಬ್ಯಾಂಕ್‌ ಗ್ರಾಹಕರೊಬ್ಬರು ಕನ್ನಡದಲ್ಲಿ ಮಾತನಾಡಿ ಎಂದು ಕೋರಿದ್ದಕ್ಕೆ ಉತ್ತರ ಭಾರತ ಮೂಲದ ಎಸ್‌ಬಿಐ ಬ್ಯಾಂಕ್‌ನ ಮ್ಯಾನೇಜರ್‌ ಪ್ರಿಯಾಂಕಾ ಸಿಂಗ್‌ ಕನ್ನಡ ಮಾತನಾಡುವುದಿಲ್ಲ. ಏನು ಮಾಡುತ್ತಿರೋ ಮಾಡಿ ಎಂದು ದಾರ್ಷ್ಟ್ಯ ಮೆರೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ವಿಡಿಯೋದಲ್ಲಿ ಮಹಿಳಾ ಮ್ಯಾನೇಜರ್‌, ನನಗೆ ಹಿಂದಿ ಮಾತ್ರ ಗೊತ್ತಿದೆ. ನನಗೆ ಕನ್ನಡ ಗೊತ್ತಿಲ್ಲ. ಕನ್ನಡ ಮಾತನಾಡುವುದು ಕಡ್ಡಾಯವೂ ಇಲ್ಲ, ಅಗತ್ಯವೂ ಇಲ್ಲ. ಹೀಗಾಗಿ, ಕನ್ನಡ ಮಾತನಾಡುವುದೇ ಇಲ್ಲ. ಗ್ರಾಹಕರೊಂದಿಗೆ ಕನ್ನಡದಲ್ಲಿ ಮಾತನಾಡಬೇಕು ಎಂದು ಯಾವ ನಿಯಮವಿದೆ? ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕನ್ನಡದಲ್ಲಿ ಮಾತನಾಡಬೇಕು ಎಂದು ಹೇಳಿದೆಯೇ? ನೀವು ನನಗೆ ಕೆಲಸ ಕೊಟ್ಟಿಲ್ಲ. ಅದರ ಬಗ್ಗೆ ಏನಾದರೂ ಕೇಳಬೇಕಿದ್ದರೆ ಹೋಗಿ ನಮ್ಮ ಬ್ಯಾಂಕಿನ ಚೇರ್ಮನ್ ಬಳಿ ಕೇಳಿ ಎಂದು ಆರ್ಭಟಿಸುತ್ತಾಳೆ.

ಘಟನೆಯ ವಿವರ:

ಹಣ ವರ್ಗಾವಣೆಗಾಗಿ ಬೆಳಗ್ಗೆ 10.27ಕ್ಕೆ ಬ್ಯಾಂಕಿಗೆ ತೆರಳಿದ್ದೆ. ಯಾವ ಕೌಂಟರ್‌ಗಳಲ್ಲೂ ಸಿಬ್ಬಂದಿ ಕಾಣಿಸಲಿಲ್ಲ. ಅಲ್ಲಿದ್ದ ಒಬ್ಬರನ್ನು ಪ್ರಶ್ನಿಸಿದಾಗ ನಾವು ಬರುವವರೆಗೆ ಕಾಯಿರಿ ಎಂದರು. ಈ ವರ್ತನೆಯಿಂದ ಬೇಸರವಾಗಿ, ಕೆಲಸದ ಅವಧಿಯಲ್ಲಿ ಸಿಬ್ಬಂದಿ ಏಕೆ ಕೌಂಟರ್‌ನಲ್ಲಿಲ್ಲ? ಇದನ್ನು ವ್ಯವಸ್ಥಾಪಕರ ಬಳಿ ಪ್ರಶ್ನಿಸುತ್ತೇನೆ ಎಂದು ಅವರ ಕೊಠಡಿ ಬಳಿ ತೆರಳಿದ್ದೆ ಎಂದು ಘಟನೆ ಕುರಿತು ಮಹೇಶ್ ವಿವರಿಸಿದರು.

‘ಸಮಯ 10.30 ಆದರೂ, ಸಿಬ್ಬಂದಿ ಇಲ್ಲ’ ಎಂದು ಸೌಮ್ಯವಾಗಿಯೇ ವ್ಯವಸ್ಥಾಪಕರಲ್ಲಿ ಮನವಿ ಮಾಡಿದೆ. ‘ನನಗೆ ಕನ್ನಡ ಗೊತ್ತಿಲ್ಲ. ಹಿಂದಿಯಲ್ಲಿ ಮಾತನಾಡು’ ಎಂದು ಅತ್ಯಂತ ದರ್ಪದಿಂದ ಅವರು ಮಾತನಾಡಿದರು. ಈ ನಾಡಿನ ಭಾಷೆ ಕನ್ನಡ, ಕನ್ನಡದಲ್ಲಿ ಸೇವೆ ಒದಗಿಸಬೇಕಾಗಿರುವುದು ಬ್ಯಾಂಕ್ ಕರ್ತವ್ಯ. ಈ ಬಗ್ಗೆ ಆದೇಶ ಮತ್ತು ನಿಯಮವಿದೆ ಎಂದು ಹೇಳಿದೆ. ಆಗ ಮತ್ತಷ್ಟು ಕೆರಳಿದ ಅವರು ದುರ್ವತನೆ ತೋರಲು ಆರಂಭಿಸಿದಾಗ ಫೇಸ್‌ಬುಕ್‌ನಲ್ಲಿ ಲೈವ್ ಆರಂಭಿಸಿದೆ ಎಂದು ಮಹೇಶ್ ಹೇಳಿದರು.

‘ವ್ಯವಸ್ಥಾಪಕಿ ಈ ಶಾಖೆಗೆ ಬಂದು ಅನೇಕ ತಿಂಗಳುಗಳು ಕಳೆದಿದೆ ಎನ್ನಲಾಗಿದೆ. ಆದರೂ, ಕನ್ನಡ ಕಲಿತಿಲ್ಲ. ಅಲ್ಲದೆ, ನಾನು ಕನ್ನಡದಲ್ಲಿ ಮಾತನಾಡುವುದೇ ಇಲ್ಲ. ನಮ್ಮ ಬ್ಯಾಂಕ್ ಚೇರ್ಮನ್ ಬಳಿ ಕೇಳು ಎಂದು ಅಗೌರವದಿಂದ ಮಾತನಾಡಿದ್ದಾರೆ. ಕನ್ನಡನಾಡಿನ ಬ್ಯಾಂಕಿನಲ್ಲಿ ಕನ್ನಡದಲ್ಲಿ ಸೇವೆ ಕೇಳುವುದು ತಪ್ಪೇ?’ ಎಂದು ಮಹೇಶ್ ಪ್ರಶ್ನಿಸಿದರು.ಕ್ರಮಕ್ಕೆ ಆಗ್ರಹ: ಬಿಳಿಮಲೆ

ಕನ್ನಡ ಮಾತಾಡುವುದಿಲ್ಲ ಎಂದಿರುವ ಅಧಿಕಾರಿಯ ದುರಹಂಕಾರದ ನಡತೆ ನಾನು ಖಂಡಿಸುತ್ತೇನೆ. ಬ್ಯಾಂಕ್ ಅಧಿಕಾರಿಗಳು ಸ್ಥಳೀಯ ಭಾಷೆಯಲ್ಲೇ ವ್ಯವಹರಿಸಬೇಕು. ಘಟನೆ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತೇನೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಇಂಗ್ಲಿಷ್, ಹಿಂದಿಗೆ ಪ್ರಾಧಾನ್ಯತೆಯ ಫಲ!:

ಐಬಿಪಿಎಸ್ ಪರೀಕ್ಷೆಗಳಲ್ಲಿ ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಗೆ ಪ್ರಾಧಾನ್ಯತೆ ನೀಡಲಾಗಿದೆ. ಕನ್ನಡನಾಡಿನಲ್ಲಿ ಕೆಲಸ ಮಾಡುವವರಿಗೆ ಕನ್ನಡ ಭಾಷಾ ಜ್ಞಾನದ ಪರೀಕ್ಷೆ ಕಡ್ಡಾಯ ಮಾಡದಿರುವುದರಿಂದ ಕನ್ನಡಕ್ಕೆ ಈ ಪರಿಸ್ಥಿತಿ ಬಂದಿದೆ. ಪ್ರತಿಯೊಂದು ಬ್ಯಾಂಕಿನ ಸಿಬ್ಬಂದಿ ಕನ್ನಡದಲ್ಲಿ ಮಾತನಾಡುವುದನ್ನು ಕಡ್ಡಾಯಗೊಳಿಸಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಕನ್ನಡಕ್ಕೆ ಅಗೌರವ ತೋರಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಾಲತಾಣಗಳಲ್ಲಿ ಸಾರ್ವಜನಿಕರು ಆಗ್ರಹಿಸಿದ್ದಾರೆ.