ರಿಯಲ್ ಎಸ್ಟೇಟ್‌ ಕಂಪನಿಯಲ್ಲಿ ₹25 ಲಕ್ಷ ದೋಚಿದ ಕೆಲಸಗಾರ!

KannadaprabhaNewsNetwork | Updated : May 16 2024, 06:05 AM IST

ಸಾರಾಂಶ

ರಿಯಲ್ ಎಸ್ಟೇಟ್ ಕಂಪನಿಯಲ್ಲಿ ₹25 ಲಕ್ಷ ಕಳವು ಮಾಡಿದ್ದ ಆ ಕಂಪನಿಯ ಕೆಲಸಗಾರನೊಬ್ಬನನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ರಿಯಲ್ ಎಸ್ಟೇಟ್ ಕಂಪನಿಯಲ್ಲಿ ₹25 ಲಕ್ಷ ಕಳವು ಮಾಡಿದ್ದ ಆ ಕಂಪನಿಯ ಕೆಲಸಗಾರನೊಬ್ಬನನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೂಡಲಪಾಳ್ಯದ ನಿವಾಸಿ ಮಹೇಶ್ ಬಂಧಿತನಾಗಿದ್ದು, ಕೆಲ ದಿನಗಳ ಹಿಂದೆ ಆರ್‌ಪಿಸಿ ಲೇಔಟ್ ಸಮೀಪದ ಕೆಎನ್‌ಎಸ್‌ ಕನ್‌ಸ್ಟ್ರಕ್ಷನ್‌ ಕಂಪನಿಯಲ್ಲಿ ಆತ ಹಣ ಕಳವು ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿವೃತ್ತ ಪಿಎಸ್‌ಐ ಪುತ್ರ:

ತನ್ನ ಕುಟುಂಬದ ಜತೆ ಮೂಡಲಪಾಳ್ಯದಲ್ಲಿ ನೆಲೆಸಿದ್ದ ಮಹೇಶ್‌, ಕೆಲ ದಿನಗಳಿಂದ ಕೆಎನ್‌ಎಸ್‌ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆತನ ತಂದೆ ನಿವೃತ್ತ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಆಗಿದ್ದಾರೆ. ಕಚೇರಿ ನಿರ್ವಹಣೆ ಹೊತ್ತಿದ್ದ ಆತನಿಗೆ ಕಂಪನಿ ಮಾಲಿಕ ಸುರೇಂದ್ರ ಅವರ ಹಣಕಾಸು ವಹಿವಾಟಿನ ಬಗ್ಗೆ ಮಾಹಿತಿ ಇತ್ತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಣ ವರ್ಗಾವಣೆ ಕಷ್ಟವಾಗಲಿದೆ ಎಂದು ಕಂಪನಿ ಮಾಲಿಕ, ಚುನಾವಣೆ ಆರಂಭಕ್ಕೂ ಮುನ್ನವೇ ಮಾರ್ಚ್‌ ತಿಂಗಳಲ್ಲಿ ತನ್ನ ಕೆಲಸಗಾರರಿಗೆ ಸಂಬಳ ವಿತರಿಸಲು ₹25 ಲಕ್ಷವನ್ನು ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಬಂದು ಕಚೇರಿಯಲ್ಲಿಟ್ಟಿದ್ದರು. 

ಈ ಹಣವನ್ನು ಕಳ್ಳತನಕ್ಕೆ ಸಂಚು ರೂಪಿಸಿದ ಮಹೇಶ್‌, ಮಾ.20ರಂದು ಕಚೇರಿಯ ಕ್ಯಾಶ್‌ ಸೆಕ್ಷನ್‌ನಲ್ಲಿಟ್ಟಿದ್ದ ಹಣವನ್ನು ಕಳವು ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಸ್ನೇಹಿತನ ಮನೆಯಲ್ಲಿ ಹಣ ಇಟ್ಟಿದ್ದ ಆರೋಪಿ:

ಹಣ ಕಳ್ಳತನದ ಬಗ್ಗೆ ಉದ್ಯಮಿ ನೀಡಿದ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರು, ಕೊನೆಗೆ ಮಡಿಕೇರಿ ಟೋಲ್‌ಗೇಟ್ ಬಳಿ ಆರೋಪಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದರು. ಬಳಿಕ ಮೂಡಲಪಾಳ್ಯದಲ್ಲಿ ಮಹೇಶ್ ಸ್ನೇಹಿತನ ಮನೆಯಲ್ಲಿದ್ದ ಕಳ್ಳತನ ಮಾಡಿದ್ದ ₹24.5 ಲಕ್ಷ ಜಪ್ತಿ ಮಾಡಲಾಯಿತು. ಇನ್ನುಳಿದ ಹಣವನ್ನು ಆತ ಖರ್ಚು ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Share this article