ಕಂಪನಿಯಲ್ಲಿ ಲ್ಯಾಪ್‌ಟಾಪ್‌ ಕದಿಯುತ್ತಿದ್ದ ಕೆಲಸಗಾರರು; ಐವರ ಬಂಧನ

KannadaprabhaNewsNetwork |  
Published : Mar 13, 2024, 02:10 AM IST
COP 1 | Kannada Prabha

ಸಾರಾಂಶ

ತಾವು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಲ್ಯಾಪ್‌ಟಾಪ್‌ ಕ‍ಳವು ಮಾಡುತ್ತಿದ್ದ ಖಾಸಗಿ ಕಂಪನಿಯ ಇಬ್ಬರು ನೌಕರರು ಸೇರಿದಂತೆ ಐವರನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಾವು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಲ್ಯಾಪ್‌ಟಾಪ್‌ ಕ‍ಳವು ಮಾಡುತ್ತಿದ್ದ ಖಾಸಗಿ ಕಂಪನಿಯ ಇಬ್ಬರು ನೌಕರರು ಸೇರಿದಂತೆ ಐವರನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬನಶಂಕರಿ 2ನೇ ಹಂತದ ಎಂ.ದರ್ಶನ್‌, ಪರಪ್ಪನ ಅಗ್ರಹಾರದ ಸಿ.ಎಸ್‌.ಸುಜಯ್‌, ಶ್ರೀನಗರದ ಕಾರ್ತಿಕ್‌, ಜಯನಗರ 7ನೇ ಹಂತದ ಯಡಿಯೂರಿನ ಎ.ಕೆ.ಕಾಲೋನಿಯ ಎ.ಶಶಿಕುಮಾರ್‌ ಅಲಿಯಾಸ್ ಶಶಿ ಹಾಗೂ ತ್ಯಾಗರಾಜನಗರದ ಎಸ್.ನೀಲೇಶ್ ಜಾಧವ್‌ ಅಲಿಯಾಸ್ ನೀಲೇಶ್‌ ಬಂಧಿತರು. ಆರೋಪಿಗಳಿಂದ 29 ವಿವಿಧ ಕಂಪನಿಯ ಲ್ಯಾಪ್‌ಟಾಪ್‌ಗಳು ಹಾಗೂ 59 ಕ್ರೋಮ್ ಬಾಕ್ಸ್‌ಗಳು ಸೇರಿ ₹16 ಲಕ್ಷ ಮೌಲ್ಯದ ಎಲೆಕ್ಟ್ರಿಕ್‌ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನ್ಯೂ ಜೈಸಾ ಟೆಕ್ನಾಲಜಿ ಕಂಪನಿಯಲ್ಲಿ ಲ್ಯಾಪ್‌ಟಾಪ್ ಹಾಗೂ ಕ್ರೋಮ್ ಬಾಕ್ಸ್‌ ಕಳ್ಳತನವಾಗಿದ್ದವು. ಈ ಬಗ್ಗೆ ಆ ಕಂಪನಿಯ ವ್ಯವಸ್ಥಾಪಕ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಐವರು ಪ್ರತ್ಯೇಕವಾಗಿ ಲ್ಯಾಪ್‌ಟಾಪ್ ಕಳವು:

ಕುಮಾರಸ್ವಾಮಿ ಲೇಔಟ್‌ನ ನ್ಯೂ ಜೈಸಾ ಟೆಕ್ನಾಲಜಿ ಕಂಪನಿಯು ಐಟಿ-ಬಿಟಿ ಕಂಪನಿಗಳಲ್ಲಿ ಬಳಸಿದ ಲ್ಯಾಪ್‌ಟಾಪ್‌ಗಳನ್ನು ಸೆಕೆಂಡ್ಸ್‌ನಲ್ಲಿ ಖರೀದಿಸಿ ಬಳಿಕ ಅವುಗಳನ್ನು ರಿಪೇರಿ ಮಾಡಿ ಮಾರಾಟ ಮಾಡುವ ಕಂಪನಿಯಾಗಿದೆ. ಈ ಬ್ಯುಸಿನೆಸ್‌ ಸಂಬಂಧ ಅಮೆಜಾನ್ ಜತೆ ಜೈಸಾ ಒಡಂಬಡಿಕೆ ಮಾಡಿಕೊಂಡಿದ್ದು, ಸೆಕೆಂಡ್ಸ್ ಲ್ಯಾಪ್‌ಟಾಪ್‌ಗಳನ್ನು ಅಮೆಜಾನ್‌ ಮೂಲಕ ಆನ್‌ಲೈನ್‌ನಲ್ಲಿ ₹20-30 ಸಾವಿರಕ್ಕೆ ಆ ಕಂಪನಿಯು ಮಾರಾಟ ಮಾಡುತ್ತಿದೆ. ಕಂಪನಿಗೆ ತಿಳಿಯದಂತೆ ಎರಡು ರೀತಿಯಲ್ಲಿ ಲ್ಯಾಪ್‌ಟಾಪ್‌ಗಳನ್ನು ಆರೋಪಿಗಳು ಕಳವು ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕಂಪನಿಯಲ್ಲಿ ಲ್ಯಾಪ್‌ಟಾಪ್‌ ಟೆಕ್ನಿಶಿಯನ್‌ಗಳಾಗಿ ಸುಜಯ್‌ ಹಾಗೂ ಕಾರ್ತಿಕ್‌ ಕೆಲಸ ಮಾಡುತ್ತಿದ್ದರು. ಲ್ಯಾಪ್‌ಟಾಪ್ ಖರೀದಿ ಸಂಬಂಧ ಐಟಿ ಕಂಪನಿಗಳಲ್ಲಿ ಲ್ಯಾಪ್‌ಟಾಪ್‌ಗಳ ಪರಿಶೀಲನೆ ಸಲುವಾಗಿ ಫೀಲ್ಡ್ ವಿಸಿಟ್‌ಗೆ ಸುಜಯ್‌ನನ್ನು ಅಧಿಕಾರಿಗಳು ಕಳುಹಿಸಿದ್ದರು. ಆಗ ಲ್ಯಾಪ್‌ಟಾಪ್‌ಗಳನ್ನು ತಪಾಸಣೆ ನೆಪದಲ್ಲಿ ತಂದು ಸುಜಯ್ ಕಳವು ಮಾಡುತ್ತಿದ್ದ. ಈ ಕೃತ್ಯಕ್ಕೆ ಆತನಿಗೆ ಕಾರ್ತಿಕ್ ಸಹಕರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಕದ್ದ ಲ್ಯಾಪ್‌ಟಾಪ್‍ ಜಾಗದಲ್ಲಿ ಮರದ ತುಂಡಿಟ್ಟು ವಂಚನೆ:

ಇನ್ನು ತಾಂತ್ರಿಕ ದೋಷ ಅಥವಾ ಇಷ್ಟವಾಗದ ಕಾರಣಗಳಿಗೆ ಗ್ರಾಹಕರಿಂದ ಹಿಂತಿರುಗಿದ ಲ್ಯಾಪ್‌ಟಾಪ್‌ಗಳನ್ನು ಜೈಸಾ ಕಂಪನಿಗೆ ಅಮೆಜಾನ್‌ ಮರಳಿ ಕಳುಹಿಸುತ್ತಿತ್ತು. ಹೀಗೆ ಗೋದಾಮಿನಿಂದ ಗೋದಾಮಿಗೆ ಸಾಗಿಸುವಾಗ ಲ್ಯಾಪ್‌ಟಾಪ್‌ಗಳನ್ನು ಕದ್ದು ಅವುಗಳ ಬಾಕ್ಸ್‌ಗೆ ಮರದ ತುಂಡು ಇಟ್ಟು ಜೈಸಾ ಕಂಪನಿಗೆ ಅಮೆಜಾನ್‌ನ ಡಿಲವರಿ ಬಾಯ್ ಶಶಿ, ವಾಹನ ಚಾಲಕು ದರ್ಶನ್‌ ಹಾಗೂ ನೀಲೇಶ್ ವಂಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!