- ಸೆ.17ರ ಪ್ರಕರಣ ಈಗ ಬೆಳಕಿಗೆ । ಸ್ಥಳ ಪರಿಶೀಲಿಸಿದ ಕೇಂದ್ರ ತಂಡ
ಕನ್ನಡಪ್ರಭ ವಾರ್ತೆ ಯಾದಗಿರಿ
ಕಲ್ಯಾಣ ಕರ್ನಾಟಕ ಭಾಗದ ಜನರು ಸೆ.17ರಂದು ಹೈದರಾಬಾದ್ ಕರ್ನಾಟಕ ವಿಮೋಚನಾ ಸಂಭ್ರಮದಲ್ಲಿರುವಾಗ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶೆಳ್ಳಗಿ ಯಿಂದ ನಿಷೇಧಿತ ಸ್ಯಾಟಲೈಟ್ ಮೂಲಕ ವಿದೇಶಕ್ಕೆ ಕರೆ ಹೋಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಚೀನಾ ನಿರ್ಮಿತ ಸ್ಯಾಟ್‌ಲೈಟ್ ಫೋನಿಂದ ವಿದೇಶಕ್ಕೆ ಕರೆ ಹೋಗಿದೆ. ಪಾಕಿಸ್ತಾನಕ್ಕೆ ಈ ಕರೆ ಹೋಗಿರಬಹುದು ಎಂದು ಕೇಂದ್ರ ಸಂಸ್ಥೆಗಳು ಶಂಕಿಸಿವೆ. ಸೆ.17ರಂದು ಶೆಳ್ಳಗಿ ಗ್ರಾಮದ ಕೃಷಿ ಪ್ರದೇಶವೊಂದರಿಂದ ನಸುಕಿನ 3 ಗಂಟೆ ಸುಮಾರಿಗೆ ಈ ಕರೆ ಮಾಡಲಾಗಿದೆ.
ಪಾಕ್‌ಗೆ ಕರೆ ಶಂಕೆ?: ಶೆಳ್ಳಗಿಯಿಂದ ನಿಷೇಧಿತ ಸ್ಯಾಟ್ಲೈಟ್ ಫೋನ್‌ನಿಂದ ವಿದೇಶಕ್ಕೆ ಕರೆ ಹೋಗಿರುವುದು ಖಚಿತವಾಗಿದೆ. ಆದರೆ, ಇಂತಹುದ್ದೇ ಕಡೆಗೆ ಕರೆ ಹೋಗಿದೆ ಎಂದು ಗೊತ್ತಾಗಿಲ್ಲ ವಾದರೂ, ಪಾಕಿಸ್ತಾನಕ್ಕೆ ಹೋಗಿರುವ ಶಂಕೆ ವ್ಯಕ್ತವಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಸಿಮಿ ಉಗ್ರನ ಅರಸಿ ಬಂದರು!: ಮಧ್ಯಪ್ರದೇಶದ ಖಂಡ್ವಾ ಜೈಲಿನಿಂದ ತಪ್ಪಿಸಿಕೊಂಡಿದ್ದ ಸಿಮಿ ಉಗ್ರ ಮೆಹಬೂಬ್ ಅಲಿಯಾಸ್ ಗುಡ್ಡು ಸೇರಿದಂತೆ ಕೆಲವರು ಯಾದಗಿರಿ ಯನ್ನು ಅಡಗುತಾಣ ಮಾಡಿಕೊಂಡಿದ್ದರು ಎಂಬ ಮಾಹಿತಿ ಮೇರೆಗೆ ಕೇಂದ್ರ ಅಧಿಕಾರಿಗಳ ತಂಡ 2014ರಲ್ಲಿ ಇಲ್ಲಿಗೆ ಭೇಟಿ ನೀಡಿತ್ತು.