ಮನೋರಂಜನ್ ಮನೆಗೆ ಕೇಂದ್ರ, ರಾಜ್ಯ ಗುಪ್ತಚರ ಪೊಲೀಸರ ಭೇಟಿ

KannadaprabhaNewsNetwork | Published : Dec 15, 2023 1:30 AM

ಸಾರಾಂಶ

ಸಂಸತ್‌ನಲ್ಲಿ ಹೊಗೆ ಬಾಂಬ್ ಸಿಡಿಸಿದ ಪ್ರಕರಣದಲ್ಲಿ ಬಂಧಿತ ಮನೋರಂಜನ್‌ನ ಮೈಸೂರು ಮನೆಗೆ ಕೇಂದ್ರ ಮತ್ತು ರಾಜ್ಯ ಗುಪ್ತಚರ ಪೊಲೀಸರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೋರಂಜನ್ ಕುಟುಂಬಸ್ಥರಿಂದ ಆತನ ಕುರಿತು ಮಾಹಿತಿ ಸಂಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರುಸಂಸತ್‌ನಲ್ಲಿ ಹೊಗೆ ಬಾಂಬ್ ಸಿಡಿಸಿದ ಪ್ರಕರಣದಲ್ಲಿ ಬಂಧಿತ ಮನೋರಂಜನ್‌ನ ಮೈಸೂರು ಮನೆಗೆ ಕೇಂದ್ರ ಮತ್ತು ರಾಜ್ಯ ಗುಪ್ತಚರ ಪೊಲೀಸರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೋರಂಜನ್ ಕುಟುಂಬಸ್ಥರಿಂದ ಆತನ ಕುರಿತು ಮಾಹಿತಿ ಸಂಗ್ರಹಿಸಿದರು.

ಕೇಂದ್ರ ಗುಪ್ತಚರ ಇಲಾಖೆ ಮೈಸೂರು ವಿಭಾಗದ ಉಪನಿರ್ದೇಶಕ ಪ್ರವೀಣ್ ನೇತೃತ್ವದ ತಂಡ ಒಂದು ಗಂಟೆಗೂ ಹೆಚ್ಚು ಕಾಲ ಮನೆಯಲ್ಲಿ ತಪಾಸಣೆ ನಡೆಸಿತಲ್ಲದೆ, ಮನೋರಂಜನ್ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಹೆಚ್ಚಿನ ಮಾಹಿತಿ ಸಂಗ್ರಹಿಸಿ, ಕೇಂದ್ರ ಕಚೇರಿಗೆ ಮಾಹಿತಿ ರವಾನಿಸಿದೆ. ಇದೇ ವೇಳೆ ಮನೋರಂಜನ್‌ನ ಕೊಠಡಿಯ ಇಂಚಿಂಚು ಪರಿಶೀಲಿಸಿರುವ ಗುಪ್ತಚರ ಪೊಲೀಸರು, ಆತನ ಸಂಪರ್ಕಿತರ ಸುಳಿವಿಗಾಗಿ ಹುಡುಕಾಟ ಆರಂಭಿಸಿದ್ದಾರೆ.ಅಕ್ಕಪಕ್ಕದವರ ವಿಚಾರಣೆ: ಮನೋರಂಜನ್ ನಿವಾಸದ ಸುತ್ತಮುತ್ತಲಿನ ಮನೆಯವರನ್ನೂ ಇದೇ ವೇಳೆ ಪೊಲೀಸರು ವಿಚಾರಣೆ ನಡೆಸಿ ಆತನ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಜತೆಗೆ, ಮನೆ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳುವ ಮೂಲಕ ಹೆಚ್ಚಿನ ನಿಗಾ ವಹಿಸಿದ್ದಾರೆ. ಅದೇ ರೀತಿ, ಮೈಸೂರಿನ ಹುಣಸೂರು ರಸ್ತೆ ಜಲದರ್ಶಿನಿ ಆವರಣದಲ್ಲಿರುವ ಸಂಸದ ಪ್ರತಾಪ್ ಸಿಂಹ ಅವರ ಕಚೇರಿ ಸುತ್ತಮುತ್ತವೂ ಬಂದೋಬಸ್ತ್‌ ಅನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.-ಬಾಕ್ಸ್-ಅಪ್ಪನ ಪರಿಚಯ ಹೇಳಿಕೊಂಡು ಪಾಸ್ ಪಡೆದಿದ್ದಮನೋರಂಜನ್‌ ಸಂಸತ್‌ ಪ್ರವೇಶಿಸಲು ಅಪ್ಪನ ಹೆಸರು ಬಳಸಿಕೊಂಡಿದ್ದ. ಮನೋರಂಜನ್‌ ಅವರ ತಂದೆ ದೇವರಾಜೇಗೌಡ ಅವರಿಗೆ ಸ್ವಲ್ಪ ರಾಜಕೀಯ ಒಡನಾಟವೂ ಇತ್ತು. ತಾನು ‌ಮೈಸೂರಿನ ವಿಜಯನಗರ ನಿವಾಸಿ, ನಮ್ಮ ತಂದೆ ದೇವರಾಜೇಗೌಡ ಎಂದು ಪರಿಚಯ ಮಾಡಿಕೊಂಡು ಪ್ರತಾಪ್ ಸಿಂಹ ಅವರ ಬಳಿ ಪಾಸ್‌ಗಾಗಿ ಮನವಿ ಮಾಡಿದ್ದ. ಮಂಗಳ‍ವಾರ ಮಧ್ಯಾಹ್ನ ದೆಹಲಿಯ ಸಂಸದರ ಕಚೇರಿಗೆ ಸಾಗರ್ ಶರ್ಮಾನನ್ನೂ ಕರೆದೊಯ್ದು ಸಹೋದ್ಯೋಗಿ ಎಂದು ಸಿಬ್ಬಂದಿಗೆ ಪರಿಚಯಿಸಿದ್ದ. ಇದಾದ ಬಳಿಕ ಸಾಗರ್ ಶರ್ಮಾ ಹೆಸರಿನಲ್ಲೂ ಪಾಸ್ ಕೊಡುವಂತೆ ಕೇಳಿಕೊಂಡಿದ್ದ. ಪಾಸನ್ನು ಸಂಗ್ರಹಿಸಿಟ್ಟುಕೊಳ್ಳಲು ಸಾಗರ್ ಶರ್ಮಾ ಬಯಸಿದ್ದಾರೆ. ಹೀಗಾಗಿ, ಅವರ ಹೆಸರಿನಲ್ಲೂ ಪಾಸ್ ಕೊಡಿ ಎಂದು ಹೇಳಿ ಪಾಸ್‌ ಪಡೆದಿದ್ದ.- ಬಾಕ್ಸ್‌-ಮೈಸೂರಿಗೆ ಭೇಟಿ ನೀಡಿದ್ದ ಸಾಗರ್ ಶರ್ಮಾಸಂಸತ್‌ ಒಳಗೆ ಹೊಗೆ ಬಾಂಬ್‌ ಸ್ಫೋಟಿಸಿದ ಆರೋಪದ ಮೇರೆಗೆ ಬಂಧನಕ್ಕೊಳಗಾಗಿರುವ ಆರೋಪಿ ಸಾಗರ್ ಶರ್ಮಾ ಮೈಸೂರಿಗೂ ಭೇಟಿ ನೀಡಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಉತ್ತರಪ್ರದೇಶದ ಸಾಗರ್ ಶರ್ಮಾ ಮೇ ತಿಂಗಳಲ್ಲಿ ಮೈಸೂರಿಗೆ ಆಗಮಿಸಿದ್ದ. ಈ ವೇಳೆ ಆತ ಮನೋರಂಜನ್‌ ಮನೆಗೂ ಭೇಟಿ ನೀಡಿದ್ದ ಎನ್ನಲಾಗಿದೆ. ಮೈಸೂರಲ್ಲಿ ಮನೋರಂಜನ್‌ ಮತ್ತು ಗೆಳೆಯರು ಸಭೆ ಸೇರಿದ್ದರು ಎಂದು ಮೂಲಗಳು ತಿಳಿಸಿವೆ.

ಫೋಟೋ- 14ಎಂವೈಎಸ್3

ಮೈಸೂರಿನ ವಿಜಯನಗರದಲ್ಲಿರುವ ಮನೋರಂಜನ್ ಮನೆ ಬಳಿ ಪೊಲೀಸರ ನಿಗಾ.

14ಎಂವೈಎಸ್4ಮೈಸೂರಿನ ಜಲದರ್ಶಿನಿ ಆವರಣದಲ್ಲಿರುವ ಸಂಸದ ಪ್ರತಾಪ್ ಸಿಂಹ ಕಚೇರಿ ಆವರಣದಲ್ಲಿ ಬಿಗಿ ಭದ್ರತೆ.

Share this article