ಯೋಗೇಶ್‌ಗೌಡ ಕೊಲೆ ಕೇಸ್‌ : ಶಾಸಕ ವಿನಯ್‌ ಕುಲಕರ್ಣಿ ಕೊಲೆಗಾರ

Published : Apr 16, 2026, 04:19 AM IST
 vinay kulkarni and yogesh gowda

ಸಾರಾಂಶ

 ಧಾರವಾಡ ಜಿ.ಪಂ. ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿ, ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿದ್ದ ಚನ್ನಕೇಶವ ಟಿಂಗರೀಕರ್‌ ಸೇರಿದಂತೆ 17 ಆರೋಪಿಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ದೋಷಿಗಳೆಂದು ಘೋಷಿಸಿ ಮಹತ್ವದ ತೀರ್ಪು ನೀಡಿದೆ

  ಬೆಂಗಳೂರು :  ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ, ಧಾರವಾಡ ಜಿ.ಪಂ. ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿ, ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿದ್ದ ಚನ್ನಕೇಶವ ಟಿಂಗರೀಕರ್‌ ಸೇರಿದಂತೆ 17 ಆರೋಪಿಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ದೋಷಿಗಳೆಂದು ಘೋಷಿಸಿ ಮಹತ್ವದ ತೀರ್ಪು ನೀಡಿದೆ. ಶಿಕ್ಷೆ ಪ್ರಮಾಣವನ್ನು ಗುರುವಾರಕ್ಕೆ ಕಾಯ್ದಿರಿಸಿದೆ.

ಯೋಗೇಶ್‌ ಗೌಡ ಕೊಲೆ ಪ್ರಕರಣ ಸಂಬಂಧ ಸುಮಾರು 8 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಸಂಜೆ ಅಂತಿಮ ತೀರ್ಪು ಪ್ರಕಟಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರು, 15ನೇ ಆರೋಪಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ವಿಕ್ರಮ್‌ ಬಳ‍್ಳಾರಿ, ಕೀರ್ತಿ ಕುಮಾರ್‌ ಬಸವರಾಜ್‌ ಕುರಹಟ್ಟಿ, ಸಂದೀಪ್‌ ಸವದತ್ತಿ, ವಿನಾಯಕ ಕಟಗಿ, ಮಹಾಬಲೇಶ್ವರ ಹೊಂಗಲ್‌, ಸಂತೋಷ್‌ ಸವದತ್ತಿ, ದಿನೇಶ್‌, ಅಶ್ವತ್ಥ್, ಸುನೀಲ್‌, ನಜೀರ್ ಅಹ್ಮದ್‌, ಶಹನವಾಜ್‌, ನೂತನ್‌, ಹರ್ಷಿತ್‌, ಚಂದ್ರಶೇಖರ್‌ ಇಂಡಿ, ವಿಕಾಸ್‌ ಕಲಬುರಗಿ, ಪೊಲೀಸ್‌ ಇನ್ಸ್‌ಪೆಕ್ಟರ್‌ ಚನ್ನಕೇಶವ ಬಿ.ಟಿಂಗರಿಕರ್‌ ಅವರನ್ನು ಅಪರಾಧಿಗಳು ಎಂದು ಘೋಷಣೆ ಮಾಡಿದ್ದಾರೆ. ಇಬ್ಬರನ್ನು ಮಾತ್ರ ಖುಲಾಸೆ ಮಾಡಲಾಗಿದೆ.

ಅಪರಾಧಿಗಳ ವಶಕ್ಕೆ ಪಡೆಯಲು ಸೂಚನೆ:

ಅಂತಿಮ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ವಿನಯ್‌ ಕುಲಕರ್ಣಿ ಸೇರಿದಂತೆ ಪ್ರಕರಣದ 21 ಮಂದಿ ಆರೋಪಿಗಳು ಬುಧವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣದಲ್ಲಿ 17 ಮಂದಿಯನ್ನು ದೋಷಿಗಳೆಂದು ಘೋಷಿಸಿದ ನ್ಯಾಯಾಧೀಶರು ಶಿಕ್ಷೆಯ ಪ್ರಮಾಣವನ್ನು ಗುರುವಾರ ಪ್ರಕಟಿಸುವುದಾಗಿ ತಿಳಿಸಿ ಕೂಡಲೇ ಅಪರಾಧಿಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಸಿಬಿಐ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನ್ಯಾಯಾಧೀಶರ ಸೂಚನೆಯ ಹಿನ್ನೆಲೆಯಲ್ಲಿ ಅಪರಾಧಿಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಕರೆದುಕೊಂಡು ಹೋದರು. ಗುರುವಾರ ಶಿಕ್ಷೆಯ ಪ್ರಮಾಣ ಪ್ರಕಟವಾಗುವ ಹಿನ್ನೆಲೆಯಲ್ಲಿ 17 ಅಪರಾಧಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ.

ಕೇಸ್‌ನಿಂದ ಇಬ್ಬರ ಖುಲಾಸೆ:

ಈ ಪ್ರಕರಣದ ಮೊದಲನೇ ಆರೋಪಿ ಬಸವರಾಜ್‌ ಮುತ್ತಗಿ ಮತ್ತು 17ನೇ ಆರೋಪಿ ಶಿವಾನಂದ್‌ ಅವರನ್ನು ಮಾಫಿ ಸಾಕ್ಷಿಯನ್ನಾಗಿಸಲಾಗಿದೆ. ಜತೆಗೆ 20ನೇ ಆರೋಪಿ ವಾಸುದೇವ್‌ ರಾಮ ನೀಲೆಕಣಿ ಮತ್ತು 21ನೇ ಆರೋಪಿ ಸೋಮಶೇಖರ್‌ ಬಸಪ್ಪ ನ್ಯಾಮಗೌಡ ಅವರನ್ನು ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಕೇಸ್‌ನಿಂದ ಖುಲಾಸೆ ಮಾಡಲಾಗಿದೆ.

ಈ ಮೊದಲು ಪ್ರಕರಣ ಸಂಬಂಧ ವಾದ-ಪ್ರತಿವಾದ ಆಲಿಸಿದ ಕೋರ್ಟ್ ಈ ಹಿಂದೆ ಏ.9ರಂದು ತೀರ್ಪು ನೀಡುವುದಾಗಿ ಹೇಳಿತ್ತು. ಆದರೆ, ಅಂದು ತೀರ್ಪು ಸಿದ್ಧಪಡಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದ ಕಾರಣ ಏ.15ಕ್ಕೆ ಮುಂದೂಡಿತ್ತು. ಇದೀಗ ತೀರ್ಪು ನೀಡಿರುವ ಕೋರ್ಟ್ 17 ಮಂದಿ ಆರೋಪಿಗಳು ಅಪರಾಧಿಗಳು ಎಂದು ಘೋಷಿಸಿದೆ.

ಪ್ರಕರಣದ 2 ರಿಂದ 16 ಮತ್ತು 18ನೇ ಆರೋಪಿಗಳು ಭಾರತೀಯ ದಂಡ ಸಂಹಿತೆ 302 (ಕೊಲೆ) ಆರೋಪದಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿ ಶಿಕ್ಷೆಗೊಳಗಾಗಿದ್ದಾರೆ. ಹಾಗೆಯೇ 2 ರಿಂದ 16 ಮತ್ತು 18 ಹಾಗೂ 19ನೇ ಆರೋಪಿಗಳು 120 (ಬಿ) (ಅಪರಾಧಿಕ ಒಳ ಸಂಚು) ರೂಪಿಸಿದ್ದಾರೆ ಮತ್ತು 201 (ಸಾಕ್ಷ್ಯ ನಾಶ ಪಡಿಸಿದ್ದಾರೆ). ಇನ್ನು ಆರೋಪಿ 2 ರಿಂದ 14 ಮತ್ತು 18ನೇ ಆರೋಪಿಗಳು 143, 149 (ಅಕ್ರಮ ಕೂಟ), 147 (ಗಲಭೆ), 148 (ಆಯುಧಗಳಿಂದ ಕೃತ್ಯ) ಎಸಗಿದ್ದಾರೆ. 19ನೇ ಆರೋಪಿ 218 ಅಡಿಯಲ್ಲಿ ಸಾರ್ವಜನಿಕ ಸೇವೆಯಲ್ಲಿದ್ದು ತಪ್ಪುದಾಖಲೆಗಳನ್ನು ಸೃಷ್ಟಿಸಿ ಆರೋಪಿಯನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾನೆ.

 ಇಂದು ವಾದ-ಪ್ರತಿವಾದ

ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಕರಣದಲ್ಲಿ ಭಾಗಿಯಾಗಿರುವ ವಿನಯ್ ಕುಲಕರ್ಣಿ ಸೇರಿ 17 ಮಂದಿ ದೋಷಿಗಳು ಎಂದು ತೀರ್ಪು ನೀಡಿದೆ. ವಿನಯ್ ಕುಲಕರ್ಣಿ ಅವರು ಈ ಕೊಲೆ ಪ್ರಕರಣದ 15ನೇ ಆರೋಪಿಯಾಗಿದ್ದು, ಹತ್ಯೆಯ ಹಿಂದೆ ನಡೆದ ಒಳಸಂಚಿನಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ. ಅಪರಾಧಿಗಳಿಗೆ ನೀಡಲಾಗುವ ಶಿಕ್ಷೆಯ ಪ್ರಮಾಣದ ಕುರಿತು ಗುರುವಾರ ನ್ಯಾಯಾಲಯದಲ್ಲಿ ವಾದ-ಪ್ರತಿವಾದ ನಡೆಯಲಿದ್ದು, ನಂತರ ಅಂತಿಮ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.

ಶಿಕ್ಷೆ ಏನಾಗಬಹುದು?

ಐಪಿಸಿ ಸೆಕ್ಷನ್‌ 302 ಅಡಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅಥವಾ ಗಲ್ಲು ಶಿಕ್ಷೆ ವಿಧಿಸುವ ಅವಕಾಶವಿದೆ. ಅತೀ ಅಪರೂಪದ ಪ್ರಕರಣದಲ್ಲಿ ಮಾತ್ರ ಗಲ್ಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

ಏನಿದು ಪ್ರಕರಣ?

ಧಾರವಾಡದ ಜಿ.ಪಂ. ಮಾಜಿ ಸದಸ್ಯ ಯೋಗೇಶ್‌ ಗೌಡ ಅವರನ್ನು 2016ರ ಜೂ.15ರಂದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದರು. ಈ ಸಂಬಂಧ ಧಾರವಾಡದ ಉಪನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಆರು ಜನರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಕೊಲೆಯಾದ ಯೋಗೇಶ್‌ ಗೌಡ ಕುಟುಂಬದ ಸದಸ್ಯರ ಒತ್ತಾಯದ ಮೇರೆಗೆ 2019ರಲ್ಲಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಸಿಬಿಐ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಕೊಲೆ ಎಂಬುದು ತಿಳಿದು ಬಂದಿತ್ತು. ಈ ಕೊಲೆಯಲ್ಲಿ ಮಾಜಿ ಸಚಿವ ವಿನಯ್‌ ಕುಲಕರ್ಣಿ ಕೈವಾಡವಿರುವ ಶಂಕೆ ಹಿನ್ನೆಲೆಯಲ್ಲಿ 2020ರ ನ.5ರಂದು ಸಿಬಿಐ ಅಧಿಕಾರಿಗಳು ವಿನಯ್‌ ಕುಲಕರ್ಣಿ ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ವಿನಯ್‌ ಸೇರಿ ಒಟ್ಟು 21 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು. ಇತ್ತೀಚೆಗಷ್ಟೇ ವಿನಯ್ ಕುಲಕರ್ಣಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದರು.

 ಹೇಳುವುದಕ್ಕೆ ಏನೂ ಇಲ್ಲ. ನ್ಯಾಯಾಂಗ ನೀಡಿರುವ ತೀರ್ಪಿಗೆ ತಲೆಬಾಗುತ್ತೇನೆ. ಮುಂದಿನ ಕಾನೂನು ಹೋರಾಟದ ಬಗ್ಗೆ ನಮ್ಮ ವಕೀಲರ ಬಳಿ ಚರ್ಚಿಸುತ್ತೇನೆ.

-ವಿನಯ್‌ ಕುಲಕರ್ಣಿ, ಶಾಸಕ ಹಾಗೂ ಕೊಲೆ ಪ್ರಕರಣದ ಅಪರಾಧಿ

ಟೈಮ್‌ ಲೈನ್‌

ತೀರ್ಪಿನ ಹಿನ್ನೆಲೆಯಲ್ಲಿ ಇಡೀ ದಿನ ಆರೋಪಿಗಳು ಕೋರ್ಟ್‌ನಲ್ಲಿಯೇ ಇದ್ದರು

ಸಂಜೆ 5.20: ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರು

ಸಂಜೆ 5.25: ತೀರ್ಪು ಪ್ರಕಟ

ಸಂಜೆ 5.25: ಅಪರಾಧಿಗಳನ್ನು ವಶಕ್ಕೆ ಪಡೆಯಲು ಸೂಚನೆ

ಸಂಜೆ 6: ಜೈಲಿಗೆ ಕರೆದೊಯ್ದ ಅಧಿಕಾರಿಗಳು

ಪ್ರಮುಖಾಂಶಗಳು

* ಬಿಜೆಪಿಗ ಯೋಗೇಶ್‌ ಗೌಡ ಅವರನ್ನು 2016 ರ ಜೂ.15ರಂದು ಕೊಲೆ ಮಾಡಲಾಗಿತ್ತು

* ರಾಜಕೀಯ ವೈಷಮ್ಯದಿಂದ ಕೊಲೆ ಆಗಿದೆ ಎಂಬ ಬಲವಾದ ಆರೋಪ ಕೇಳಿಬಂದಿತ್ತು

* ಧಾರವಾಡ ಪೊಲೀಸರಿಂದ 6 ಮಂದಿ ವಿರುದ್ಧ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಕೆ

* 2019ರಲ್ಲಿ ಪ್ರಕರಣಕ್ಕೆ ತಿರುವು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು.

* 2020ರ ನ.5ರಂದು ಸಿಬಿಐ ಅಧಿಕಾರಿಗಳಿಂದ ವಿನಯ್‌ ಕುಲಕರ್ಣಿ ಬಂಧನ

* ವಿನಯ್‌ ಸೇರಿ 21 ಮಂದಿ ಆರೋಪಿಗಳ ವಿರುದ್ಧ ಕೋರ್ಟ್‌ಗೆ ಚಾರ್ಜ್‌ಶೀಟ್‌

* ಏ.15ಕ್ಕೆ ತೀರ್ಪು. ವಿನಯ್ ಕುಲಕರ್ಣಿ ಸೇರಿ ಎಲ್ಲಾ 17 ಆರೋಪಿಗಳು ದೋಷಿ

* ಆರೋಪಿಗಳಾದ ವಾಸುದೇವ್‌, ಸೋಮಶೇಖರ್‌ ಕೇಸ್‌ನಿಂದ ಖುಲಾಸೆ

* ಎ-1 ಬಸವರಾಜ್‌ ಮುತ್ತಗಿ, ಎ-17 ಶಿವಾನಂದ್‌ ಮಾಫಿ ಸಾಕ್ಷಿ

ಶಾಸಕ ಸ್ಥಾನಕ್ಕೆ ಕುತ್ತು?

ಶಾಸಕ ವಿನಯ್‌ ಕುಲಕರ್ಣಿಗೆ ನೀಡಲಿರುವ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಗುರುವಾರ ಪ್ರಕಟಿಸಲಿದೆ. ಅದರ ಮೇಲೆ ವಿನಯ್‌ ಕುಲಕರ್ಣಿ ಅವರ ಶಾಸಕ ಸ್ಥಾನದ ಭವಿಷ್ಯ ಕೂಡ ನಿರ್ಧಾರವಾಗಲಿದೆ. ಯಾವುದೇ ಜನಪ್ರತಿನಿಧಿ ವಿರುದ್ಧ 2 ವರ್ಷಕ್ಕಿಂತ ಹೆಚ್ಚಿನ ವರ್ಷ ಜೈಲು ಶಿಕ್ಷೆ ಪ್ರಕಟವಾದರೆ ತಕ್ಷಣ ಅವರ ಶಾಸಕ ಸ್ಥಾನ ರದ್ದಾಗುತ್ತದೆ. ಸದ್ಯ ವಿನಯ್ ಕುಲಕರ್ಣಿ ಪ್ರಕರಣ ಸಂಬಂಧ ಕೊಲೆ ಹಾಗೂ ಒಳಸಂಚು ಆರೋಪ ಸಾಬೀತು ಹಿನ್ನೆಲೆ ಜೀವಾವಧಿ ಶಿಕ್ಷೆ, ಮರಣದಂಡನೆಗೆ ಅವಕಾಶವಿದ್ದು, 2 ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾದರೆ ಶಾಸಕ ಸ್ಥಾನದಿಂದ ಅನರ್ಹತೆಗೊಳ್ಳಲಿದ್ದಾರೆ. ಹೀಗಾಗಿ ವಿನಯ್ ಕುಲಕರ್ಣಿ ಶಾಸಕ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ.

ನಿಂತಲ್ಲೇ ಕುಸಿದು ಕಣ್ಣೀರಿಟ್ಟ ಶಾಸಕ

ನಾಯಾಧೀಶ ಸಂತೋಷ್‌ ಗಜಾನನ್‌ ಭಟ್‌ ಅವರು ಕೊಲೆ ಪ್ರಕರಣದಲ್ಲಿ ಕುಲಕರ್ಣಿ ದೋಷಿ ಎಂದು ತೀರ್ಪು ನೀಡುತ್ತಿದ್ದಂತೆ ನಿಂತಲ್ಲೇ ಕುಸಿದ ಅವರು ಕಣ್ಣೀರಿಡಲು ಆರಂಭಿಸಿದರು. ಇನ್ನು ಕುಲಕರ್ಣಿ ಕಣ್ಣೀರಿಡುವಾಗ ಅವರನ್ನು ನೋಡುತ್ತಿದ್ದ ಮೂವರು ಮಕ್ಕಳು ಕೂಡ ಕೋರ್ಟ್‌ನಲ್ಲಿ ಕಣ್ಣೀರಿಟ್ಟರು. ಅಂತಿಮ ತೀರ್ಪಿಗೂ ಮುನ್ನ ವಿನಯ್‌ ಕುಲಕರ್ಣಿ ಅವರು ಖುಲಾಸೆಯಾಗುವ ಭರವಸೆಯಲ್ಲಿದ್ದರು. ಆದರೆ ತೀರ್ಪು ಬರುತ್ತಿದಂತೆ ಕುಸಿದು ಕಣ್ಣೀರು ಹಾಕಿದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಇಬ್ಬರು ವಿದ್ಯಾರ್ಥಿನಿಯರ ನಾಪತ್ತೆ ಇನ್ನೂ ನಿಗೂಢ
4ನೇ ಮಹಡಿಯಿಂದ ಅನಾರೋಗ್ಯ ಪೀಡಿತ ತಾಯಿಯ ಎಸೆದು ಕೊಂದ!