ಪಾಗಲ್ ಪ್ರೇಮಿಯ ಕಿರುಕುಳಕ್ಕೆ ಬೇಸತ್ತು ಯುವತಿಯೊಬ್ಬಳು ಡೆತ್‌ನೋಟ್ ಬರೆದಿಟ್ಟು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
-ವಿಡಿಯೋ, ಫೋಟೋ ಕಳಿಸಿ ಬ್ಲಾಕ್ಮೇಲ್ । ಕರೆದಾಗಲೆಲ್ಲಾ ರೂಮಿಗೆ ಬಾ ಎಂದು ಹಿಂಸೆ-ಡೆತ್‌ನೋಟ್ ಬರೆದಿಟ್ಟು ಕೆರೆಗೆ ಹಾರಿದ ಯುವತಿ । ಎಚ್ಎಸ್ಆರ್ ಲೇಔಟ್‌ನಲ್ಲಿ ಘಟನೆ
---ಕನ್ನಡಪ್ರಭ ವಾರ್ತೆ ಬೆಂಗಳೂರು
ಪಾಗಲ್ ಪ್ರೇಮಿಯ ಕಿರುಕುಳಕ್ಕೆ ಬೇಸತ್ತು ಯುವತಿಯೊಬ್ಬಳು ಡೆತ್‌ನೋಟ್ ಬರೆದಿಟ್ಟು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಬೆಳಮಕ್ಕಿ ಮೂಲದ ವಾಣಿಶ್ರೀ(22) ಮೃತ ದುರ್ದೈವಿ. ಈ ಸಂಬಂಧ ಶಿವಮೊಗ್ಗ ಮೂಲದ ಅಭಿಷೇಕ್ (22) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?:
ವಾಣಿಶ್ರೀ ಮತ್ತು ಅಭಿಷೇಕ್ ಶಿವಮೊಗ್ಗದ ಕಾಲೇಜಿನಲ್ಲಿ ಒಟ್ಟಿಗೆ ಪದವಿ ವ್ಯಾಸಂಗ ಮಾಡುತ್ತಿದ್ದರು. ಈ ವೇಳೆ ಅಭಿಷೇಕ್‌ಗೆ ವಾಣಿಶ್ರೀ ಮೇಲೆ ಪ್ರೇಮಾಂಕುರವಾಗಿತ್ತು. ಹೀಗಾಗಿ ತನ್ನನ್ನು ಪ್ರೀತಿಸುವಂತೆ ವಾಣಿಶ್ರೀಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಪದವಿ ಮುಗಿದ ಹಿನ್ನೆಲೆಯಲ್ಲಿ ವಾಣಿಶ್ರೀ ಕೆಲಸ ಅರಸಿಕೊಂಡು ಕಳೆದ ವರ್ಷ ಬೆಂಗಳೂರಿಗೆ ಬಂದಿದ್ದರು. ನಗರದಲ್ಲಿ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಯುವಕ ಶಿವಮೊಗ್ಗದಲ್ಲಿಯೇ ವಾಸವಿದ್ದು, ಮೊಬೈಲ್ ಮೂಲಕ ಯುವತಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ವಿಡಿಯೋ, ಫೋಟೋ ಕಳುಹಿಸಿ ಬ್ಲಾಕ್‌ಮೇಲ್:
ಯುವತಿಗೆ ವಾಟ್ಸಪ್‌ನಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸಿ ಬ್ಲಾಕ್‌ಮೇಲ್ ಮಾಡುತಿದ್ದ. ನಾನು ಕರೆದಾಗಲೆಲ್ಲ ರೂಮಿಗೆ ಬರಬೇಕು ಎಂದು ಮೆಸೇಜ್ ಮಾಡುವ ಮೂಲಕ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ. ಈತನ ಕಿರುಕುಳಕ್ಕೆ ಬೇಸತ್ತ ವಾಣಿಶ್ರೀ ಡೆತ್‌ನೋಟ್ ಬರೆದಿಟ್ಟು ಎಚ್ಎಸ್ಆರ್ ಲೇಔಟ್‌ನಲ್ಲಿರುವ ಆಗರ ಕೆರೆಗೆ ಶುಕ್ರವಾರ ಬೆಳಗ್ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡೆತ್‌ನೋಟ್‌ನಲ್ಲಿ ಏನಿದೆ?
ನನ್ನ ಸಾವಿಗೆ ಎ.ಎಸ್.ಅಭಿಷೇಕ್ ಕಾರಣ. ನನಗೆ ವಿಡಿಯೋ ಮತ್ತು ಫೋಟೋ ಕಳುಹಿಸಿ ಕಾಲ್, ಮೆಸೇಜ್ ಮಾಡಿ ಹಿಂಸೆ ನೀಡುತ್ತಿದ್ದ. ಆದರೆ ಈ ವಿಷಯ ಬೇರೆಯವರ ಜತೆ ಹೇಳಿಕೊಳ್ಳಲು ಆಗದೆ ಒಬ್ಬಳೇ ತುಂಬಾ ಹಿಂಸೆ ಅನುಭವಿಸುತ್ತಿದ್ದೆ. ನನಗೆ ಕುಟುಂಬ ಎಂದರೆ ಜೀವ, ಅವರ ಮರ್ಯಾದೆ ಹೋಗಬಾರದು ಅಂತ ಈ ನಿರ್ಧಾರ ಮಾಡುತ್ತಿದ್ದೇನೆ. ನನ್ನ ಫೋಟೋ, ವಿಡಿಯೋ ಇಟ್ಟುಕೊಂಡು ನನಗೆ ಕಾಲ್ ಮತ್ತು ಮೆಸೇಜ್ ಮಾಡಿ ತುಂಬಾ ಭಯಪಡಿಸುತ್ತಿದ್ದ. ರೂಮ್‌ಗೆ ಬಾ, ಇಲ್ಲ ಅಂದರೆ ನಿಮ್ಮ ಮನೆ ಮರ್ಯಾದೆ ಹಾಳು ಮಾಡುತ್ತೇನೆ ಎಂದು ಹೇಳುತ್ತಿದ್ದ.
ಅಭಿಷೇಕ್‌ಗೆ ಶಿಕ್ಷೆ ಆಗಬೇಕು:
ಸಾರಿ ಪಪ್ಪಾ, ನನ್ನಿಂದ ನಿಮ್ಮ ಮರ್ಯಾದೆ ಹೋಗಬಾರದು. ನನ್ನ ನೆನಪು ಮಾಡಿಕೊಳ್ಳಬೇಡಿ. ನೀವು ಎಲ್ಲರೂ ಚೆನ್ನಾಗಿ ಇರಿ. ಅಷ್ಟೇ. ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳಿ. ನನ್ನಿಂದ ನನ್ನ ಸ್ನೇಹಿತರಿಗೆ ಬೇಜಾರಾಗಿದ್ದರೆ ಸಾರಿ. ನನ್ನ ಪರಿಸ್ಥಿತಿಯನ್ನು ಯಾರೊಂದಿಗೂ ಹೇಳಲಾಗದೆ ನಾನು ಸತ್ತು ಹೋಗಬೇಕೆಂಬ ನಿರ್ಧಾರ ಮಾಡಿದ್ದೀನಿ. ನಾನು ಸತ್ತ ಮೇಲೆ ಅಭಿಷೇಕ್ ಸುಳ್ಳು ಹೇಳಿ ನಾಟಕ ಮಾಡುತ್ತಾನೆ. ಅಭಿಷೇಕ್‌ಗೆ ಶಿಕ್ಷೆ ಆಗಬೇಕು, ಇದೆ ನನ್ನ ಕೊನೆ ಆಸೆ, ಬೇಜಾರು ಆಗಬೇಡಿ ಪಪ್ಪಾ ಎಂದು ಯುವತಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.