ಪಾಕಿಸ್ತಾನ ಮೂಲದ ಗ್ಯಾಂಗ್‌ಸ್ಟರ್‌ಗಳ ಜೊತೆ ಸಾಮಾಜಿಕ ಜಾಲತಾಣ ಮೂಲಕ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.ದೊಡ್ಡಬಳ್ಳಾಪುರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ (28) ಬಂಧಿತ.

ದೊಡ್ಡಬಳ್ಳಾಪುರ : ಪಾಕಿಸ್ತಾನ ಮೂಲದ ಗ್ಯಾಂಗ್‌ಸ್ಟರ್‌ಗಳ ಜೊತೆ ಸಾಮಾಜಿಕ ಜಾಲತಾಣ ಮೂಲಕ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ದೊಡ್ಡಬಳ್ಳಾಪುರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ (28) ಬಂಧಿತ. ಕೌಂಟ‌ರ್ ಇಂಟಲಿಜೆನ್ಸ್ ಸೆಲ್ ಹಾಗೂ ಕೇಂದ್ರ ಗುಪ್ತಚರ ದಳ ಅಧಿಕಾರಿಗಳಿಂದ ಲಭಿಸಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಸೈಯದ್ ಅಬೂಬಕರ್‌ನನ್ನು ಬಂಧಿಸಿದ್ದಾರೆ.

2 ವರ್ಷಗಳಿಂದ ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳ ಜೊತೆ ಸಂಪರ್ಕ

ಪೊಲೀಸರ ಪ್ರಕಾರ, ಸೈಯದ್ ಅಬೂಬಕ‌ರ್ ಕಳೆದ 2 ವರ್ಷಗಳಿಂದ ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳ ಜೊತೆ ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಪಾಕಿಸ್ತಾನದ ಶಾಜದ್ ಬುಟ್ಟಿ ನೆಟ್‌ವರ್ಕ್ ಗ್ಯಾಂಗ್‌ಗೆ ಸಂಬಂಧಿಸಿದೆ ಎನ್ನಲಾದ ಇನ್‌ಸ್ಟಾಗ್ರಾಂ ಖಾತೆಯೊಂದರ ಮೂಲಕ ಆತ ಸಂಪರ್ಕ ಹೊಂದಿದ್ದ. ಗಣ್ಯ ವ್ಯಕ್ತಿಗಳು ಹಾಗೂ ಉದ್ಯಮಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ಚಟುವಟಿಕೆಗಳಲ್ಲಿ ಈ ಪಾಕಿಸ್ತಾನಿ ಗ್ಯಾಂಗ್ ತೊಡಗಿಸಿಕೊಂಡಿದೆ ಎನ್ನಲಾಗಿದೆ.

‘Hammadmemon33320’ ಇನ್‌ಸ್ಟಾಗ್ರಾಂ ಖಾತೆ

‘Hammadmemon33320’ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಆರೋಪಿ ಸಂಪರ್ಕದಲ್ಲಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯು ತನ್ನ ಆಧಾರ್ ಕಾರ್ಡ್ ಸೇರಿದಂತೆ ವೈಯಕ್ತಿಕ ದಾಖಲೆಗಳ ವಿವರಗಳನ್ನು ನೀಡಿ ಆ ಖಾತೆಗೆ ಲಾಗಿನ್ ಆಗಿದ್ದ. ಈ ಮೂಲಕ ಪಾಕಿಸ್ತಾನದಲ್ಲಿರುವ ಗ್ಯಾಂಗ್ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎಂಬ ಆರೋಪ ಕೇಳಿಬಂದಿದೆ. ಸೈಯದ್ ಅಬೂಬಕರ್ ದೊಡ್ಡಬಳ್ಳಾಪುರದಲ್ಲಿ ಎಸಿ ರಿಪೇರಿ ಕೆಲಸ ಮಾಡಿಕೊಂಡಿದ್ದ. ಇದರ ಜೊತೆಗೆ ಬೆಂಗಳೂರಿನ ಮಸೀದಿಯೊಂದರಲ್ಲಿ ಪಾಠ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ಯಾಂಗ್ ಸದಸ್ಯರ ಸೂಚನೆಯಂತೆ ಆತ ಕೇರಳ ಹಾಗೂ ದೆಹಲಿಗೆ ತೆರಳಿ ತರಬೇತಿಯನ್ನೂ ಪಡೆದುಕೊಂಡು ಬಂದಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯ ಚಟುವಟಿಕೆಗಳು ಹಾಗೂ ಪಾಕಿಸ್ತಾನಿ ಗ್ಯಾಂಗ್‌ನೊಂದಿಗಿನ ಸಂಪರ್ಕದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆರೋಪಿಯ ವಿರುದ್ಧ ಬಿಎನ್‌ಎಸ್ ಸೆಕ್ಷನ್ 113(3) ಹಾಗೂ 197(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿಂದೆ ಮತ್ತಷ್ಟು ವ್ಯಕ್ತಿಗಳ ಸಂಪರ್ಕವಿದೆಯೇ, ಆರೋಪಿ ಯಾವ ರೀತಿಯ ತರಬೇತಿ ಪಡೆದಿದ್ದ ಹಾಗೂ ಪಾಕಿಸ್ತಾನಿ ಗ್ಯಾಂಗ್‌ನೊಂದಿಗೆ ಆತನ ಸಂಪರ್ಕದ ಉದ್ದೇಶವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್

- ದೊಡ್ಡಬಳ್ಳಾಪುರದಲ್ಲಿ ಎಸಿ ಮೆಕ್ಯಾನಿಕ್‌. ಬೆಂಗಳೂರಿನ ಮಸೀದಿಯೊಂದರಲ್ಲಿ ಬೋಧಕನಾಗಿ ಕೆಲಸ

- 2 ವರ್ಷದಿಂದ ಪಾಕ್‌ ಗ್ಯಾಂಗ್‌ಸ್ಟರ್‌ ಬುಟ್ಟಿ ನೆಟ್‌ವರ್ಕ್‌ ಜತೆ ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕ

- ಕೇರಳ, ದೆಹಲಿಗೆ ಹೋಗಿ ತರಬೇತಿ ಪಡೆದುಕೊಂಡು ಬಂದಿರುವ ಶಂಕೆ ಹಿನ್ನೆಲೆಯಲ್ಲಿ ಬಂಧನ