ನವದೆಹಲಿ: ಪಾಕಿಸ್ತಾನಿ ಗೂಢಚರ ಮಹಿಳೆಯೊಬ್ಬಳ ಹನಿಟ್ರ್ಯಾಪ್‌ಗೆ ಬಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಒಬ್ಬರು, ದೇಶದ ರಕ್ಷಣಾ ಪಡೆಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಆಕೆಯೊಂದಿಗೆ ಹಂಚಿಕೊಂಡ ಆಘಾತಕಾರಿ ಘಟನೆ ನಡೆದಿದೆ.
ವಾಯುಪಡೆ ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಮೇ 30ರಂದು ಅಧಿಕಾರಿಯನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಅಧಿಕೃತ ರಹಸ್ಯಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ತನಿಖೆಯನ್ನು ಪೂರ್ಣಗೊಳಿಸಿ ಜು.30ರಂದು ದೆಹಲಿಯ ಸಕ್ಷಮ ನ್ಯಾಯಾಲಯಕ್ಕೆ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ. ಭಾರತೀಯ ರಕ್ಷಣಾ ಪಡೆಗಳ ಗುಪ್ತ ಮಾಹಿತಿಗಳನ್ನು ಕಲೆಹಾಕಲು ಬೃಹತ್ ಜಾಲವೇ ಇದರ ಹಿಂದೆ ಕೆಲಸ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಚಾಟ್, ವಿಡಿಯೋ ಕಾಲ್: ಪಶ್ಚಿಮ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಈ ಅಧಿಕಾರಿ ತಮ್ಮ ವೈಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇದನ್ನೇ ಲಾಭವಾಗಿಸಿಕೊಂಡ ಪಾಕಿಸ್ತಾನಿ ಗೂಢಚರ ಮಹಿಳೆ ಸಾಮಾಜಿಕ ಜಾಲತಾಣದ ಮೂಲಕ ಅವರ ಸ್ನೇಹ ಬೆಳೆಸಿದ್ದಳು. ಆರಂಭದಲ್ಲಿ ಚಾಟಿಂಗ್ ಮೂಲಕ, ನಂತರ ವೀಡಿಯೊ ಕರೆಗಳು ಹಾಗೂ ಎನ್‌ಕ್ರಿಪ್ಟ್ ಮಾಡಲಾದ ಮೆಸೇಜಿಂಗ್ ಆ್ಯಪ್‌ಗಳ ಮೂಲಕ ಅಧಿಕಾರಿಗೆ ಬಲೆ ಹೆಣೆದಿದ್ದಳು. ಸೇನಾ ಚಲನವಲನಗಳು ಮತ್ತು ಪಡೆಗಳ ನಿಯೋಜನೆಗೆ ಸಂಬಂಧಿಸಿದ ವಿವರಗಳು, ಫೋಟೊಗಳು, ವಿಡಿಯೋಗಳು ಮತ್ತು ಇತರ ಸೂಕ್ಷ್ಮ ಮಾಹಿತಿಯನ್ನು ಅಧಿಕಾರಿಯಿಂದ ಪಡೆದುಕೊಂಡಿದ್ದಳು ಎಂದು ಪತ್ತೆ ಹಚ್ಚಲಾಗಿದೆ.
ಸ್ಪೈವೇರ್ ಆ್ಯಪ್‌ನಿಂದ ಸೋರಿಕೆ:
ಅಧಿಕಾರಿಯಿಂದ ರಹಸ್ಯ ಮಾಹಿತಿ ಪಡೆದುಕೊಂಡಿದ್ದಷ್ಟೇ ಅಲ್ಲದೆ, ಅವರ ಸಹೋದ್ಯೋಗಿಯ ಮೊಬೈಲ್‌ನಿಂದಲೂ ದತ್ತಾಂಶ ಕದಿಯುವ ಸಂಚು ರೂಪಿಸಲಾಗಿತ್ತು. ಅದಕ್ಕಾಗಿ ಸಹೋದ್ಯೋಗಿಯ ಮೊಬೈಲ್‌ನಲ್ಲಿ ಸ್ವೈವೇರ್ ಆ್ಯಪ್ ಒಂದನ್ನು ಇನ್‌ಸ್ಟಾಲ್ ಮಾಡುವಂತೆ ಸೂಚಿಸಿದ್ದಳು. ಈ ಆ್ಯಪ್ ಮೂಲಕ ಮತ್ತೊಬ್ಬ ಅಧಿಕಾರಿಗಳ ಫೋನ್‌ನಲ್ಲಿದ್ದ ಡೇಟಾ, ಲೊಕೇಷನ್ ಮತ್ತು ಸಂವಹನಗಳನ್ನೂ ಕದಿಯಲಾಗಿತ್ತು. ಮಹಿಳೆ ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ಸೂಚನೆಯಂತೆ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ವಾಯುಪಡೆಯ ಕಣ್ಣಾವಲು:
ಅಧಿಕಾರಿಯ ಸಂಶಯಾಸ್ಪದ ಡಿಜಿಟಲ್ ಚಟುವಟಿಕೆಗಳು ವಾಯುಪಡೆಯ ಆಂತರಿಕ ಗುಪ್ತಚರ ವಿಭಾಗದ ಎಲೆಕ್ಟ್ರಾನಿಕ್ ಕಣ್ಣಾವಲಿನಲ್ಲಿ ಸಿಕ್ಕಿಬಿದ್ದಿದ್ದವು. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಸಾಕ್ಷ್ಯಗಳನ್ನು ಸಂಗ್ರಹಿಸಿ, ಕಾನೂನು ಕ್ರಮಕ್ಕಾಗಿ ದೆಹಲಿ ಸ್ಪೆಷಲ್ ಸೆಲ್‌ಗೆ ಒಪ್ಪಿಸಿದ್ದರು. ಪ್ರಸ್ತುತ ಅಧಿಕಾರಿ ತಿಹಾರ್ ಜೈಲಿನಲ್ಲಿದ್ದು, ಪ್ರಕರಣವು ನ್ಯಾಯಾಲಯದ ಪರಿಶೀಲನೆಯಲ್ಲಿದೆ. ಕೇಂದ್ರ ಗುಪ್ತಚರ ಸಂಸ್ಥೆಗಳು ಹಾಗೂ ದೆಹಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
