ಕರೆಕ್ಟ್‌ ಟೈಮ್‌ ನೋಡ್ಕೊಂಡು ಅಜ್ಞಾತವಾಸಿ ಬಿಡುಗಡೆ ಮಾಡುತ್ತಿದ್ದೇನೆ : ಹೇಮಂತ್‌ ರಾವ್‌

KannadaprabhaNewsNetwork | Updated : Apr 05 2025, 06:05 AM IST

ಸಾರಾಂಶ

ಅಜ್ಞಾತವಾಸಿ ಸಿನಿಮಾ ಏ.11ಕ್ಕೆ ಬಿಡುಗಡೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕ ಹೇಮಂತ್‌ ರಾವ್‌ ಮಾತು.

 ಸಿನಿವಾರ್ತೆ 

‘ಅಜ್ಞಾತವಾಸಿ ಸಿನಿಮಾವನ್ನು ಸರಿಯಾದ ಸಮಯಕ್ಕೇ ರಿಲೀಸ್‌ ಮಾಡಬೇಕೆಂದು ಒಂದೊಳ್ಳೆ ಟೈಮ್‌ಗಾಗಿ ಕಾಯುತ್ತಿದ್ದೆ. ಸದ್ಯ ಇಂಡಸ್ಟ್ರಿ ಕೋವಿಡ್‌ ಸೃಷ್ಟಿಸಿದ ತಲ್ಲಣದಿಂದ ಚೇತರಿಸಿಕೊಂಡಿದೆ. ಓಟಿಟಿಗಳೂ ಆಶಾದಾಯಕ ಸ್ಥಿತಿಯಲ್ಲಿವೆ. ಇದೇ ನನ್ನ ನಿರ್ಮಾಣದ ಸಿನಿಮಾ ರಿಲೀಸ್‌ಗೆ ಸಕಾಲ ಅನಿಸಿತು.’

- ಇವು ಸದ್ಯ ನಿರ್ಮಾಪಕರಾಗಿರುವ ನಿರ್ದೇಶಕ ಹೇಮಂತ್‌ ರಾವ್‌ ಮಾತುಗಳು. ಇವರ ದಾಕ್ಷಾಯಿಣಿ ಟಾಕೀಸ್‌ ಬ್ಯಾನರ್‌ನಲ್ಲಿ ನಿರ್ಮಾಣಗೊಂಡಿರುವ ‘ಅಜ್ಞಾತವಾಸಿ’ ಏ.11ಕ್ಕೆ ತೆರೆಗೆ ಬರಲಿದೆ. ಇದರ ಟ್ರೇಲರ್‌ ಬಿಡುಗಡೆಯಾಗಿದೆ. ಈ ವೇಳೆ ಹೇಮಂತ್‌, ‘ನನ್ನ ಕೆರಿಯರ್‌ನ ಆರಂಭದ ದಿನಗಳಲ್ಲಿ ನಿರ್ಮಾಪಕರು ಸಿಗದೇ ಒದ್ದಾಟ ಅನುಭವಿಸಿದ್ದೇನೆ. ಸಿನಿಮಾ ಮಾಡೋದು ಆಮೇಲಿನ ಮಾತು, ಕಥೆ ಕೇಳೋದಕ್ಕೇ ನಿರ್ಮಾಪಕರು ಮುಂದೆ ಬರುತ್ತಿರಲಿಲ್ಲ. 

ಆ ದಿನಗಳಲ್ಲಿ ನಾನು ಮತ್ತು ರಕ್ಷಿತ್‌ ಶೆಟ್ಟಿ ಮಾತಾಡಿಕೊಳ್ಳುತ್ತಿದ್ದೆವು, ಒಂದು ವೇಳೆ ಸಿನಿಮಾದಿಂದ ದುಡ್ಡು ಬಂದರೆ ಅದನ್ನು ನಮಗಿಷ್ಟವಾಗುವಂಥಾ ಚಿತ್ರಗಳಿಗೆ ಜೀವ ತುಂಬಲು ಮೀಸಲಿಡಬೇಕು ಅಂತ. ಅದು ಈಗ ಸಾಕಾರಗೊಳ್ಳುತ್ತಿದೆ’ ಎಂದು ಹೇಳಿದ್ದಾರೆ.ಪ್ರಮುಖ ಪಾತ್ರಧಾರಿ ರಂಗಾಯಣ ರಘು, ‘ಅಜ್ಞಾತವಾಸಿಯ ಪಾತ್ರ ಹಲವು ರಾತ್ರಿಗಳ ನನ್ನ ನಿದ್ದೆಯನ್ನು ಕಿತ್ತುಕೊಂಡಿದೆ. ನನಗೆ ನಿರ್ದೇಶಕರು ಹೇಳಿದ್ದು ನೀವು ಪಾತ್ರದ ಜೊತೆ ಇದ್ದು ಬಿಡಿ ಅಂತ. ಆದರೆ ಹಾಗಿದ್ದ ಅನುಭವ ಮಾತ್ರ ನನ್ನನ್ನು ಅಲ್ಲಾಡಿಸಿಬಿಟ್ಟಿತ್ತು. 

ಇಂದಿಗೂ ಆ ಪಾತ್ರ ನನ್ನನ್ನು ಬಿಟ್ಟು ಹೋಗಿಲ್ಲ’ ಎಂದರು. ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ, ‘ಈ ಸಿನಿಮಾ ಸ್ಟೋರಿಯ ಐಡಿಯಾನೇ ಸ್ಪಾರ್ಕ್‌ನಂತಿದೆ. ಇದರಲ್ಲಿ ಕೊಲೆ ಮಾಡುವ ವಿಧಾನ ಮತ್ತು ಕೊಲೆ ಮಾಡಲು ಕೊಡುವ ಕಾರಣ ನನ್ನನ್ನು ಬಹಳ ಆಕರ್ಷಿಸಿದೆ. 1997ರ ಕಾಲಘಟ್ಟದಲ್ಲಿ ಮಲೆನಾಡಿನ ಪೊಲೀಸ್‌ ಸ್ಟೇಶನ್‌ನಲ್ಲಿ 25 ವರ್ಷಗಳ ಬಳಿಕ ಒಂದು ಕೇಸ್‌ ರಿಜಿಸ್ಟರ್‌ ಆಗುತ್ತದೆ. ಅಲ್ಲೀವರೆಗೆ ಜನ ಸಾಮಾನ್ಯರಂತೆ ಜೀವನ ಸಾಗಿಸುತ್ತಿದ್ದ ಪೊಲೀಸರು ಈ ಪ್ರಕರಣವನ್ನು ಹೇಗೆ ಟ್ರೀಟ್‌ ಮಾಡ್ತಾರೆ ಅನ್ನೋದೆ ಹೈಲೈಟ್‌’ ಎಂದರು. 

ನಾಯಕಿ ಪಾವನಾ, ‘ಪಂಕಜಾ ಎಂಬ ನನ್ನ ಪಾತ್ರ ತಾವರೆ ಹೂವಿನ ಗುಣವುಳ್ಳದ್ದು. ಲಾಂಗ್‌ ಡಿಸ್ಟೆನ್ಸ್‌ ರಿಲೇಶನ್‌ಶಿಪ್‌ನಲ್ಲಿರುವ ಈಕೆ ಅಂತರ್ಮುಖಿ. ಈ ಪಾತ್ರದ ಆಳ ನನ್ನನ್ನು ತಟ್ಟಿತು’ ಎಂದರು. ‘ಅಜ್ಞಾತವಾಸಿ’ ಟ್ರೇಲರ್‌ ಬಗ್ಗೆ ಶಿವರಾಜ್‌ ಕುಮಾರ್‌, ರಕ್ಷಿತ್‌ ಶೆಟ್ಟಿ ಸೇರಿದಂತೆ ಚಿತ್ರರಂಗದ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರೆಗಮ ಕನ್ನಡ ಯೂಟ್ಯೂಬ್‌ನಲ್ಲಿ ಈ ಟ್ರೇಲರ್‌ ನೋಡಬಹುದು. ಬಾಕ್ಸ್‌

ಸಿಲ್ಲಿ ಲಲ್ಲಿಯಲ್ಲಿ ಒತ್ತಾಯಕ್ಕೆ ಮಣಿದು ಹಾಸ್ಯ ಪಾತ್ರ ಮಾಡಿದ್ದೆ : ರವಿಶಂಕರ ಗೌಡ

ರವಿಶಂಕರ್‌ ಗೌಡ, ‘ನನಗೆ ಮೊದಲಿಂದಲೂ ಸೀರಿಯಸ್‌ ಪಾತ್ರಗಳಿಷ್ಟ. ಸಿಲ್ಲಿಲಲ್ಲಿಯಲ್ಲಿ ಕಾಮಿಡಿ ಪಾತ್ರ ಮಾಡಲು ಇಷ್ಟವೇ ಇರಲಿಲ್ಲ. ಒತ್ತಾಯಕ್ಕೆ ಕಟ್ಟುಬಿಟ್ಟು ಪಾತ್ರ ಮಾಡಿದೆ. ಅದು ಜನಪ್ರಿಯವಾಯ್ತು. ಆಮೇಲೆ ಎಲ್ಲ ಆ ಥರದ ಪಾತ್ರಗಳೇ ಬರುತ್ತಿದ್ದವು. ಆದರೆ ಅಜ್ಞಾತವಾಸಿ ನಿರ್ದೇಶಕರು ನನ್ನೊಳಗಿನ ಸೀರಿಯಸ್‌ ನಟನನ್ನು ಹೊರ ತೆಗೆದಿದ್ದಾರೆ’ ಎಂದರು.

Share this article