ಪಾಕ್‌ನ ಕಂಠ ನಾಳವನ್ನೇ ಕತ್ತರಿಸಿ : ಪೆಂಟಗನ್‌ ಮಾಜಿ ಅಧಿಕಾರಿ ಸಲಹೆ

KannadaprabhaNewsNetwork | Updated : Apr 25 2025, 06:29 AM IST

ಸಾರಾಂಶ

ವೆ. ಹಮಾಸ್‌ ದುಸ್ಸಾಹಸಕ್ಕೆ ಇಸ್ರೇಲ್‌ ಯಾವ ರೀತಿಯ ಪಾಠ ಕಲಿಸಿತೋ ಅದೇ ರೀತಿಯ ಪಾಠವನ್ನು ಇದೀಗ ಭಾರತ ಐಎಸ್‌ಐಗೆ ಕಲಿಸಬೇಕು. ಕಾಶ್ಮೀರವನ್ನು ಪಾಕಿಸ್ತಾನದ ಕಂಠನಾಳ ಎಂದು ಪಾಕ್‌ ಸೇನಾ ಮುಖ್ಯಸ್ಥ ಆಸಿಫ್‌ ಮುನೀರ್‌ ಹೇಳಿದ್ದಾರೆ. ಈಗ ಅದರ ಕಂಠ ನಾಳವನ್ನೇ ಭಾರತ ಕತ್ತರಿಸಬೇಕು!

ನವದೆಹಲಿ: ಪಹಲ್ಗಾಮ್‌ ದಾಳಿಗೂ ಕಳೆದ ವರ್ಷ ಅ.7ರಂದು ಇಸ್ರೇಲ್‌ ಮೇಲೆ ಹಮಾಸ್‌ ನಡೆಸಿದ ದಾಳಿಗೂ ಸಾಮ್ಯತೆಗಳಿವೆ. ಹಮಾಸ್‌ ದುಸ್ಸಾಹಸಕ್ಕೆ ಇಸ್ರೇಲ್‌ ಯಾವ ರೀತಿಯ ಪಾಠ ಕಲಿಸಿತೋ ಅದೇ ರೀತಿಯ ಪಾಠವನ್ನು ಇದೀಗ ಭಾರತ ಐಎಸ್‌ಐಗೆ ಕಲಿಸಬೇಕು. ಕಾಶ್ಮೀರವನ್ನು ಪಾಕಿಸ್ತಾನದ ಕಂಠನಾಳ ಎಂದು ಪಾಕ್‌ ಸೇನಾ ಮುಖ್ಯಸ್ಥ ಆಸಿಫ್‌ ಮುನೀರ್‌ ಹೇಳಿದ್ದಾರೆ. ಈಗ ಅದರ ಕಂಠ ನಾಳವನ್ನೇ ಭಾರತ ಕತ್ತರಿಸಬೇಕು!

ಪಹಲ್ಗಾಮ್‌ ದಾಳಿ ಹಿನ್ನೆಲೆಯಲ್ಲಿ ಉಗ್ರದಾಳಿಯನ್ನು ಹೇಗೆ ನಿಯಂತ್ರಿಸಬೇಕೆಂಬ ಕುರಿತು ಅಮೆರಿಕದ ರಕ್ಷಣಾ ಇಲಾಖೆ (ಪೆಂಟಗನ್‌)ಯ ಮಾಜಿ ಅಧಿಕಾರಿ ಮೈಕಲ್‌ ರುಬಿನ್‌ ಅವರು ಭಾರತಕ್ಕೆ ನೀಡಿದ ಸಲಹೆ ಇದು.

ಅ.7ರ ಹಮಾಸ್‌ ದಾಳಿ ಗುರಿ ಯೆಹೂದಿಯರಷ್ಟೇ ಆಗಿರಲಿಲ್ಲ, ಬದಲಾಗಿ ಗಾಜಾ ಪಟ್ಟಿಯಲ್ಲಿ ಶಾಂತಿ ಸ್ಥಾಪನೆಯಾಗಬೇಕೆಂಬ ನಿಲುವು ಹೊಂದಿರುವ ಬಹುಸಂಖ್ಯಾತ ಉದಾರವಾದಿಗಳೂ ಆಗಿದ್ದರು. ಅದೇ ರೀತಿ ಪಾಕಿಸ್ತಾನ ಇದೀಗ ಪ್ರವಾಸಕ್ಕೆ ಹೋಗಿದ್ದ ಹಿಂದೂ ಮಧ್ಯಮವರ್ಗದವರನ್ನೇ ಗುರಿಯಾಗಿಸಿ ದಾಳಿ ನಡೆಸಿದೆ. ಹಮಾಸ್‌ನಂತೆ ನಿರ್ದಿಷ್ಟ ಧರ್ಮ ಮತ್ತು ಉದಾರವಾದಿಗಳೇ ಉಗ್ರರ ಗುರಿಯಾಗಿದ್ದರು. ಆದರೆ ಅ.7ರ ದಾಳಿ ಬಳಿಕ ಹಮಾಸ್‌ ನಾಯಕತ್ವವನ್ನೇ ಇಸ್ರೇಲ್‌ ಚೆಂಡಾಡಿತು. ಈಗ ಭಾರತ ಕೂಡ ಐಎಸ್‌ಐ ನಾಯಕತ್ವವನ್ನೇ ನಿರ್ವಂಶ ಮಾಡಬೇಕು. ಐಎಸ್‌ಐ ಅನ್ನು ಘೋಷಿತ ಉಗ್ರ ಸಂಘಟನೆಯ ರೀತಿಯಲ್ಲೇ ನೋಡಬೇಕು. ಭಾರತದ ಎಲ್ಲ ಭಾರತದ ಎಲ್ಲ ಮಿತ್ರ ರಾಷ್ಟ್ರಗಳೂ ಇದೇ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಹಂದಿಗೆ ಎಷ್ಟೇ ಲಿಪ್‌ಸ್ಟಿಕ್‌ ಹಾಕಿದ್ರೂ ಹಂದಿ ಹಂದಿಯೇ!

ಪಾಕಿಸ್ತಾನವನ್ನು ಉಗ್ರರಿಗೆ ಬೆಂಬಲ ನೀಡುವ ರಾಷ್ಟ್ರ ಹಾಗೂ ಪಾಕ್‌ ಸೇನಾ ಮುಖ್ಯಸ್ಥ ಆಸಿಂ ಮುನೀರ್‌ನನ್ನು ಭಯೋತ್ಪಾದಕ ಎಂದು ಕರೆಯುವಂತೆ ಅಮೆರಿಕಕ್ಕೆ ಮೈಕಲ್ ರುಬಿನ್‌ ಆಗ್ರಹಿಸಿದ್ದಾರೆ. ಮುನೀರ್‌ರನ್ನು ಭಯೋತ್ಪಾದಕ ಒಸಮಾ ಬಿಲ್‌ ಲಾಡೆನ್‌ಗೆ ಹೋಲಿಸಿರುವ ಅ‍ವರು, ಇವರಿಬ್ಬರ ನಡುವಿನ ಏಕೈಕ ವ್ಯತ್ಯಾಸವೆಂದರೆ ಲಾಡೆನ್‌ ಗುಹೆಯಲ್ಲಿ ವಾಸಿಸುತ್ತಿದ್ದ, ಮುನೀರ್‌ ಅರಮನೆಯಲ್ಲಿದ್ದಾರೆ. ಇದನ್ನು ಹೊರತುಪಡಿಸಿ ಇಬ್ಬರೂ ಒಂದೇ. ಅವರ ಅಂತ್ಯ ಕೂಡ ಒಂದೇ ತೆರನಾಗಿರಬೇಕು ಎಂದು ಹೇಳಿದರು. ನೀವು ಹಂದಿಗೆ ಎಷ್ಟೇ ಲಿಪ್‌ಸ್ಟಿಕ್‌ ಹಾಕಿದ್ರೂ ಹಂದಿ ಹಂದಿಯೇ, ಅದೇ ರೀತಿ ನೀವು ಪಾಕಿಸ್ತಾನ ಉಗ್ರರ ಪೋಷಕನಲ್ಲ ಎಂಬಂತೆ ನಟಿಸಬಹುದು, ಆದರೆ, ಎಷ್ಟೇ ಪ್ರಯತ್ನಪಟ್ಟರೂ ಅದು ಉಗ್ರ ಪೋಷಕನಾಗಿಯೇ ಉಳಿಯುತ್ತದೆ ಎಂದಿದ್ದಾರೆ.

ರಾಷ್ಟ್ರಪತಿ ಜತೆ ಶಾ, ಜೈಶಂಕರ್ ಮಾತುಕತೆ

ನವದೆಹಲಿ: ಪಹಲ್ಗಾಂ ದಾಳಿ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ , ವಿದೇಶಾಂಗ ಸಚಿವ ಎಸ್‌ ಜೈಶಂಕರ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ರಾಷ್ಟ್ರಪತಿ ಕಚೇರಿಯು ಸಭೆಯ ಫೋಟೋ ಸಹಿತ ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಕೇಂದ್ರ ಗೃಹ ವ್ಯವಹಾರ ಮತ್ತು ಸಹಕಾರ ಸಚಿವ ಅಮಿತ್‌ ಶಾ ಮತ್ತು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ರಾಷ್ಟ್ರಪತಿ ಮುರ್ಮು ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾದರು’ ಎಂದಿದೆ.

ಉತ್ತರಾಖಂಡ ತೊರೆಯುವಂತೆ ಕಾಶ್ಮೀರಿಗಳಿಗೆ ಬೆದರಿಕೆ

ಡೆಹ್ರಾಡೂನ್: ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ದಾಳಿ ಬೆನ್ನಲ್ಲೇ ಉತ್ತರಾಖಂಡ್‌ನಲ್ಲಿ ನೆಲೆಸಿರುವ ಕಾಶ್ಮೀರಿ ಮುಸ್ಲಿಮರಿಗೆ ರಾಜ್ಯ ಬಿಟ್ಟು ಹೋಗುವಂತೆ ಕೆಲ ಸಂಘಟನೆಗಳು ಬೆದರಿಕೆಯೊಡ್ಡಿವೆ. ಈ ಬೆನ್ನಲ್ಲೇ ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಬೇರೆ ರಾಜ್ಯದಲ್ಲಿನ ತಮ್ಮ ನಾಗರಿಕರ ರಕ್ಷಣೆಗೆ ಸಿದ್ಧ ಎಂದಿದ್ದಾರೆ. ಉತ್ತರಾಖಂಡ ರಾಜ್ಯದಲ್ಲಿ ನೆಲೆಸಿರುವ ಕಾಶ್ಮೀರಿ ಪ್ರಜೆಗಳಿಗೆ ಬೆದರಿಕೆ ಹಾಕುತ್ತಿರುವ ವಿಡಿಯೋವೊಂದು ಜಾಲತಾಣದಲ್ಲಿ ಹರಿದಾಡಿದ್ದು, ಅದರಲ್ಲಿ ಹಿಂದೂ ರಕ್ಷಾ ದಳದ ನಾಯಕರೊಬ್ಬರು ‘ ಯಾವುದೇ ಕಾಶ್ಮೀರಿ ಮುಸ್ಲಿಮರನ್ನು ರಾಜ್ಯದಲ್ಲಿ ಕಂಡರೆ ಶಿಕ್ಷಿಸುತ್ತೇವೆ. ರಾಜ್ಯ ಬಿಟ್ಟು ಹೊರಡಿ ಇಲ್ಲದಿದ್ದರೆ ನೀವು ಊಹಿಸಲು ಸಾಧ್ಯವಾಗದೇ ಕ್ರಮವನ್ನು ಎದುರಿಸಬೇಕಾಗುತ್ತದೆ’ ಎಂದಿದ್ದರು. ಬೆದರಿಕೆ ಬೆನ್ನಲ್ಲೇ ಉತ್ತರಾಖಂಡದಲ್ಲಿ ವಿದ್ಯಾಭ್ಯಾಸದ ಮಾಡುತ್ತಿದ್ದ ಕಾಶ್ಮೀರದ ವಿದ್ಯಾರ್ಥಿಗಳು ತಮ್ಮ ತವರಿಗೆ ತೆರಳಿದ್ದಾರೆ.ಈ ನಡುವೆ ಇತರೆ ರಾಜ್ಯಗಳಲ್ಲಿರುವ ಕಾಶ್ಮೀರಿಗಳ ರಕ್ಷಿಸುವಂತೆ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಮನವಿ ಮಾಡಿದ್ದಾರೆ.

ಪಾಕ್ ನಟನ ಹಿಂದಿ ಸಿನಿಮಾಗೆ ಭಾರತದಲ್ಲಿಲ್ಲ ಬಿಡುಗಡೆ ಭಾಗ್ಯ

ನವದೆಹಲಿ: ಪಹಲ್ಗಾಂ ಭಯೋತ್ಪಾದಕ ದಾಳಿ ಬೆನ್ನಲ್ಲೇ ಪಾಕ್ ನಟ ಫವಾದ್ ಖಾನ್ ಅಭಿನಯದ ಹಿಂದಿ ಸಿನಿಮಾ ಅಬಿರ್ ಗುಲಾಲ್ ಸಿನಿಮಾವನ್ನು ಭಾರತದಲ್ಲಿ ಬಿಡುಗಡೆ ಮಾಡದಿರಲು ನಿರ್ಧರಿಸಲಾಗಿದೆ. ಈ ಬಗ್ಗೆ ಸರ್ಕಾರದ ಮೂಲಗಳು ಮಾಹಿತಿ ನೀಡಿದ್ದು ‘ ಮೇ.9 ರಂದು ಬಿಡುಗಡೆಯಾಗಬೇಕಿದ್ದ ಪಾಕಿಸ್ತಾನ ನಟ ಫವಾದ್‌ ಅಭಿಯನದ ಅಬೀರ್ ಗುಲಾಲ್ ಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡಲು ಅನುಮತಿಸಲಾಗುವುದಿಲ್ಲ’ ಎಂದಿದೆ. ಆರತಿ ಎಸ್‌ ಬಾಗ್ಡಿ ನಿರ್ದೇಶನದ, ವಾಣಿ ಕಪೂರ್‌ ನಟಿಸಿರುವ ಈ ಸಿನಿಮಾ ಭಾರತೀಯ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಜ್ಜಾಗಿತ್ತು. ಆದರೆ ಭಯೋತ್ಪಾದಕ ದಾಳಿ ಬಳಿಕ ಸಿನಿಮಾ ನಿಷೇಧಕ್ಕೆ ಕೂಗು ಕೇಳಿ ಬಂದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

ಕಾಶ್ಮೀರಿ ಪ್ರವಾಸಿಗರ ಕರೆತರಲು ರೈಲು ಸೇವೆ

ನವದೆಹಲಿ: ಪಹಲ್ಗಾಂನ ದುರಂತದ ಬಳಿಕ ಜಮ್ಮು ಕಾಶ್ಮೀರದಲ್ಲಿ ಸಿಲುಕಿರುವ ಪ್ರವಾಸಿಗರ ರಕ್ಷಣೆಗಾಗಿ ಜಮ್ಮುವಿನ ಕತ್ರಾದಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ರೈಲ್ವೆ ಇಲಾಖೆಯು ಎರಡನೇ ರೈಲು ಸಂಚಾರವನ್ನು ಆರಂಭಿಸಿದೆ.ಮಂಗಳವಾರ ಪಹಲ್ಗಾಂ ದುರಂತದ ಬಳಿಕ ರೈಲ್ವೆ ಇಲಾಖೆ ಬುಧವಾರ ತಮ್ಮ ರಾಜ್ಯಗಳಿಗೆ ಮರಳಲು ಬಯಸುವ ಪ್ರವಾಸಿಗರಿಗಾಗಿ ಕತ್ರಾದಿಂದ ದೆಹಲಿಗೆ ವಿಶೇಷ ರೈಲು ಸಂಚಾರವನ್ನು ಪ್ರಾರಂಭಿಸಿತ್ತು. ಈ ಬೆನ್ನಲ್ಲೇ ಗುರುವಾರ ಮತ್ತೊಂದು ರೈಲು ಓಡಾಟ ಆರಂಭಿಸಿದ್ದು, ಅದು ಕತ್ರಾದಿಂದ ಉಧಂಪುರ, ಜಮ್ಮು, ಪಠಾಣ್‌ಕೋಟ್‌, ಜಲಂಧರ್‌, ಅಂಬಾಲ, ಕುರುಕ್ಷೇತ್ರ, ಪಾಣಿಪತ್ ಮಾರ್ಗವಾಗಿ ದೆಹಲಿಯಲ್ಲಿ ಕೊನೆಗೊಳ್ಳಲಿದೆ. ಅಲ್ಲದೇ ಈ ರೈಲುಗಳಲ್ಲಿ 235 ಪ್ರವಾಸಿಗರು ಪ್ರಯಾಣಿಸಬಹುದು.

Share this article